ಹಿರಿಯರಿಗೆ ಪೂಜೆ, ಗೌರವ ಸೂಚಿಸುವ ಹಾಗೂ ತ್ಯಾಗ ಬಲಿದಾನದ ಸಂಕೇತವಾಗಿರುವ ಈದ್ ಅಲ್-ಅಧಾ ಅಥವಾ ಬಕ್ರೀದ್ ಹಬ್ಬವನ್ನು ದಾವಣಗೆರೆಯಲ್ಲಿ ಮುಸಲ್ಮಾನ ಬಾಂಧವರು ಹರಿಹರ ರಸ್ತೆಯಲ್ಲಿರುವ ಖಬರ್ಸ್ಥಾನ್ ಬಳಿಯ ಈದ್ಗಾಮೈದಾನ, ಶಿವಾನಗರ ಬಳಿಯ ಹೊಸ ಈದ್ಗಾ ಸೇರಿದಂತೆ ಹಲವು ಮಸೀದಿಗಳಲ್ಲಿ ಸಾವಿರಾರು ಮುಸಲ್ಮಾನರು ಸೇರಿ ಸಾಮೂಹಿಕ ಪ್ರಾರ್ಥನೆ ನಡೆಸುವ ಮೂಲಕ ಬಕ್ರೀದ್ ಹಬ್ಬವನ್ನು ಆಚರಿಸಿ ಪರಸ್ಪರ ಶುಭಾಶಯಗಳೊಂದಿಗೆ ಪ್ರವಾದಿ ಹಜರತ್ ಇಬ್ರಾಹಿಂ ಅವರ ತ್ಯಾಗವನ್ನು ಸ್ಮರಿಸುವ ಮೂಲಕ ಹಬ್ಬದ ಸಂಭ್ರಮಾಚರಣೆಯನ್ನು ಮಾಡಿದರು.

ಹಬ್ಬದ ಅಂಗವಾಗಿ ತ್ಯಾಗ, ಸಹೋದರತ್ವ ಹಾಗೂ ಮಾನವೀಯ ಮೌಲ್ಯಗಳ ಸಂದೇಶ ಸಾರಲಾಯಿತು. ಧಾರ್ಮಿಕ ಮುಖಂಡರು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಪರಸ್ಪರ ಗೌರವ ಕಾಪಾಡುವಂತೆ ಕರೆ ನೀಡಿದರು. ಹಲವೆಡೆ ಬಡವರಿಗೆ ಆಹಾರ ಹಾಗೂ ಅಗತ್ಯ ವಸ್ತುಗಳನ್ನು ವಿತರಿಸುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಬಕ್ರೀದ್ ಹಬ್ಬದಲ್ಲಿ ವಿಶೇಷವಾಗಿ ಆಹಾರವನ್ನು ಬಡವರಿಗೆ ದಾನವಾಗಿ ನೀಡುವ ಮೂಲಕ ಹಬ್ಬ ಆಚರಿಸಲಾಗುತ್ತದೆ. ಬೆಳಗ್ಗೆಯಿಂದಲೇ ಹೊಸ ವಸ್ತ್ರ ಧರಿಸಿದ ಮಕ್ಕಳು, ಯುವಕರು ಹಾಗೂ ಕುಟುಂಬಸ್ಥರು ಪ್ರಾರ್ಥನಾ ಸ್ಥಳಗಳಿಗೆ ಆಗಮಿಸಿದ್ದರು.

ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಿತ್ತು. ನಾಲ್ಕು ದಿನಗಳ ಹಿಂದಷ್ಟೇ ಸರ್ವಧರ್ಮ ಮುಖಂಡರ ಶಾಂತಿ ಸಭೆ ನಡೆಸಿ ಸಾಮರಸ್ಯದ ಬಕ್ರೀದ್ ಆಚರಣೆಗೆ ಮನವಿ ಮಾಡಲಾಗಿತ್ತು. ಪ್ರಮುಖ ಪ್ರಾರ್ಥನಾ ಕೇಂದ್ರಗಳ ಬಳಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಯಿತು. ಸಾರ್ವಜನಿಕರು ಶಾಂತಿಯುತವಾಗಿ ಹಬ್ಬ ಆಚರಿಸಿದ ಹಿನ್ನೆಲೆ ನಗರದಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಗೋಹತ್ಯೆ ತಡೆಯಲು ಸರ್ಕಾರ ರಾಷ್ಟ್ರೀಯ ಪಶು ಎಂದು ಘೋಷಿಸಲಿ: ವಿಶ್ವ ಮುಸ್ಲಿಂ ಪರಿಷತ್

ಬಕ್ರೀದ್ ಆಚರಣೆಯ ಹಿಂದೆ ಪ್ರವಾದಿ ಹಜರತ್ ಇಬ್ರಾಹಿಂ ಅವರ ತ್ಯಾಗ ಮತ್ತು ಭಕ್ತಿಯ ಕಥೆಯಿದೆ. ದೇವರ ಮೇಲೆ ಅಪಾರ ನಂಬಿಕೆ ಹೊಂದಿದ್ದ ಇಬ್ರಾಹಿಂ, ತನ್ನ ಮಗ ಇಸ್ಮಾಯಿಲ್ನನ್ನು ಬಲಿ ಕೊಡಬೇಕೆಂದು ಕನಸು ಕಾಣುತ್ತಾರೆ. ಅದನ್ನು ದೇವರ ಸಂದೇಶವೆಂದು ಭಾವಿಸಿ ಮಗನನ್ನು ಬಲಿ ನೀಡಲು ಮುಂದಾದಾಗ, ದೇವರು ಮಗನ ಬದಲು ಪ್ರಾಣಿಯನ್ನು ಬಲಿ ಕೊಡಲು ಸೂಚಿಸುತ್ತಾನೆ. ಅದರಂತೆ ಕುರಿ ಅಥವಾ ಮೇಕೆಯನ್ನು ಬಲಿ ನೀಡುವ ಸಂಪ್ರದಾಯ ಆರಂಭವಾಯಿತು. ಈದ್-ಉಲ್-ಅಧಾ ದಿನದಂದು ಬಲಿ ನೀಡಿದ ಪ್ರಾಣಿಯ ಮಾಂಸವನ್ನು ಮೂರು ಭಾಗಗಳಾಗಿ ಹಂಚಿ, ಒಂದು ಭಾಗವನ್ನು ಬಂಧು-ಬಳಗ ಮತ್ತು ನೆರೆಹೊರೆಯವರಿಗೆ, ಮತ್ತೊಂದು ಭಾಗವನ್ನು ಬಡವರಿಗೆ ನೀಡಿ, ಉಳಿದ ಭಾಗವನ್ನು ತಾವು ಸೇವಿಸುವ ಪರಂಪರೆ ಇಂದಿಗೂ ಮುಂದುವರಿದಿದೆ.




