ಸಾವಿರಾರು ಜನರ ತ್ಯಾಗ, ಬಲಿದಾನ ಹಾಗೂ ಹೋರಾಟದ ಫಲವಾಗಿ ಕಲ್ಯಾಣ ಕರ್ನಾಟಕ ಪ್ರದೇಶವು ವಿಮೋಚನೆಗೊಂಡಿದ್ದು, ಆ ಮಹಾನ್ ಹೋರಾಟಗಾರರ ತ್ಯಾಗವನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಬಸವ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರವೀಂದ್ರ ಗಾಯಕವಾಡ ಹೇಳಿದರು.
ಬಸವಕಲ್ಯಾಣದ ಬಸವ ಶಿಕ್ಷಣ ಸಂಸ್ಥೆಯ ಡಾ. ಬಿ.ಆರ್.ಅಂಬೇಡ್ಕರ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ 79ನೇ ಕಲ್ಯಾಣ ಕರ್ನಾಟಕ ಉತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, “ಕಲ್ಯಾಣ ಕರ್ನಾಟಕದ ವಿಮೋಚನೆಗಾಗಿ ಹೋರಾಡಿದ ಮಹನೀಯರು ಹಾಗೂ ಹೋರಾಟಗಾರರಿಗೆ ಗೌರವ ಸಲ್ಲಿಸುವುದರ ಜೊತೆಗೆ, ನಾವೆಲ್ಲರೂ ಒಗ್ಗಟ್ಟಿನಿಂದ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು” ಎಂದು ಹೇಳಿದರು.
ಉಪನ್ಯಾಸಕ ಶ್ರೀಧರ ಛಲವಾದಿ ಮಾತನಾಡಿ, “ಹೈದರಾಬಾದ್ ನಿಜಾಮ ಮತ್ತು ರಜಾಕಾರರ ದಬ್ಬಾಳಿಕೆಯ ಆಡಳಿತದಿಂದ ಜನರನ್ನು ಮುಕ್ತಗೊಳಿಸಲು ಅನೇಕ ದೇಶಪ್ರೇಮಿಗಳು ನಡೆಸಿದ ಹೋರಾಟದ ಫಲವಾಗಿ ಈ ಪ್ರದೇಶ ವಿಮೋಚನೆಗೊಂಡಿತು” ಎಂದರು.
ಉಪನ್ಯಾಸಕ ವಿಜಯಕುಮಾರ ರಾಯಪಳ್ಳಿ ಮಾತನಾಡಿ, “ಅಂದಿನ ಪ್ರಧಾನಮಂತ್ರಿ ಪಂಡಿತ ಜವಾಹರಲಾಲ್ ನೆಹರು ಹಾಗೂ ‘ಉಕ್ಕಿನ ಮನುಷ್ಯ’ ಎಂದೇ ಖ್ಯಾತರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದೃಢಸಂಕಲ್ಪ ಮತ್ತು ನಿರಂತರ ಪ್ರಯತ್ನದಿಂದ ಈ ಭಾಗವು ಭಾರತ ಒಕ್ಕೂಟದಲ್ಲಿ ವಿಲೀನಗೊಳ್ಳಲು ಸಾಧ್ಯವಾಯಿತು” ಎಂದು ಸ್ಮರಿಸಿದರು.

ಪ್ರಾಂಶುಪಾಲ ಡಾ.ಜೈಶೇನಪ್ರಸಾದ ಮಾತನಾಡಿ, “ತ್ಯಾಗ ಮತ್ತು ಬಲಿದಾನದ ಮೂಲಕ ಸತತ ಹೋರಾಟ ನಡೆಸಿ ಈ ಭಾಗವನ್ನು ವಿಮುಕ್ತಿಗೊಳಿಸಿದ ಹೋರಾಟಗಾರರಿಗೆ ಸಲ್ಲಿಸುವ ಗೌರವವು ನಾವೆಲ್ಲರೂ ಅಭಿವೃದ್ಧಿಯ ಪಥದಲ್ಲಿ ಸಾಗಿದಾಗ ಮಾತ್ರ ಅರ್ಥಪೂರ್ಣವಾಗುತ್ತದೆ” ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ : ₹25 ಕೋಟಿ ವೆಚ್ಚದಲ್ಲಿ ಬೀದರ್ ಕೋಟೆ, ಪಾಪನಾಶ ಕೆರೆ ಅಭಿವೃದ್ಧಿ




