ಚುನಾವಣಾ ಆಯೋಗವು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಮತ್ತು ಅನರ್ಹರ ಹೆಸರುಗಳನ್ನು ಪರಿಷ್ಕರಣೆ ಮಾಡುತ್ತಿದ್ದು ಸಾರ್ವಜನಿಕರು ಇದರಲ್ಲಿ ಪಾಲ್ಗೊಂಡು ಸಹಕರಿಸಿ ಮತದಾರರ ಪಟ್ಟಿಯ ಸಮಗ್ರ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನ ಯಶಸ್ಸುಗೊಳಿಸಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ್ ಬಿರಾದಾರ ಹೇಳಿದರು.
ಮತದಾರರ ಸಮಗ್ರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ತಾಲ್ಲೂಕಿನ ಮದಕಟ್ಟಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಪ್ಲಾಸ್ಟಿಕಯುಕ್ತ ವಸ್ತುಗಳು ಮಣ್ಣು ಮತ್ತು ಜಲಮೂಲಗಳನ್ನು ಕಲುಷಿತಗೊಳಿಸಿ ಪ್ರಾಣಿಗಳಿಗೆ ಮತ್ತು ಮಾನವನ ಆರೋಗ್ಯಕ್ಕೆ ತೀವ್ರ ಹಾನಿ ಉಂಟು ಮಾಡುತ್ತವೆ. ಹಾಗಾಗಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ನಿರ್ಮಿ ಸಲು ಸಾರ್ವಜನಿಕರು ಸಹಕರಿಸಬೇಕು” ಎಂದು ಹೇಳಿದರು.
ಮನರೇಗಾ ಸಹಾಯಕ ನಿರ್ದೇಶಕರು ಬಾಲಾಜಿ ಕೋಟೆ ಮಾತನಾಡಿ, “ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಅಭಿಯಾನ (ವಿಬಿ-ಜಿ ರಾಮ್ ಜಿ) ಈ ಹೊಸ ಯೋಜನೆಯಡಿ 18 ಕಾಮಗಾರಿಗಳಿವೆ. ನೋಂದಾಯಿತ ಗ್ರಾಮೀಣ ಕೂಲಿ ಕಾರ್ಮಿಕರಿಗೆ ವರ್ಷದಲ್ಲಿ 125 ದಿನ ಕೂಲಿ ಕೆಲಸ ಹಾಗೂ 382 ದಿನಗೂಲಿ ನೀಡಲಾಗುತ್ತಿದೆ. ರೈತರು ಹಾಗೂ ಕಾರ್ಮಿಕರು ಇದರ ಲಾಭ ಪಡೆದುಕೊಳ್ಳಬೇಕು” ಎಂದರು.

ಇದೇ ಸಂದರ್ಭದಲ್ಲಿ ʼವಿಬಿ ಜೀ ರಾಮ್ ಜಿʼ ಯೋಜನೆಯ ಹಿರಿಯ ಕೂಲಿ ಕಾರ್ಮಿಕರಿಗೆ ಸನ್ಮಾನಿಸಲಾಯಿತು. ಗ್ರಾಮದ ಹೊರ ವಲಯದಲ್ಲಿ ʼಗ್ರಾಮ ವನʼ ನಿರ್ಮಾಣಕ್ಕಾಗಿ ಕಾರ್ಯನಿರ್ವಾಹಕ ಅಧಿಕಾರಿಯವರು ಸ್ಥಳ ಪರಿಶೀಲಿಸಿದರು.
ಇದನ್ನೂ ಓದಿ : ಬೀದರ್ | ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲಿ
ಗ್ರಾಮ ಪಂಚಾಯತ್ ಪಿಡಿಒ ಅನುರಾಜ್ ಪೂಜಾರಿ, ಟಿಎಇ ಶ್ರೀಕಾಂತ್ ಪಾಟೀಲ್, ಲಿಂಗರಾಜ ಖಂಡಾಳೆ, ಕಾಯಕ ಬಂಧುಗಳಾದ ಮಹಾದೇವ ದರೂ, ರವಿ ಭಾವಿದೊಡ್ಡೆ, ಅಭಿಷೇಕ ಕೊಕಣೆ, ಹರಿಶ್, ವಿಶಾಲ, ಗ್ರಾಪಂ ಸಿಬ್ಬಂದಿ, ಕೂಲಿಕಾರ್ಮಿಕರಿದ್ದರು.




