ಜುಲೈ 8ರಂದು ಪುತ್ತೂರಿನ ಪುರುಷರಕಟ್ಟೆ ಪ್ರದೇಶದಲ್ಲಿ ನಡೆದ ಘಟನೆಯ ಸಂಬಂಧ ಯುವತಿಯೊಬ್ಬರು ನೀಡಿದ ದೂರಿನ ಮೇರೆಗೆ ಹಾಗೂ ಬಳಿಕ ಯುವಕರು ಸಲ್ಲಿಸಿದ ಪ್ರತಿದೂರಿನ ಆಧಾರದಲ್ಲಿ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಜುಲೈ 8ರಂದು ಬೆಳಗ್ಗೆ ಸುಮಾರು 6.45ಕ್ಕೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ತನ್ನ ಪರಿಚಯದ ಹಾಗೂ ಕಾಲೇಜಿನ ಸಹಪಾಠಿಯಾಗಿದ್ದ ಸೊಹೈಲ್ ಚಾಕು ಹಿಡಿದು ನಿಂತಿರುವುದನ್ನು ಕಂಡಿದ್ದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ, ಸೊಹೈಲ್ ಮತ್ತು ಆತನೊಂದಿಗೆ ಇದ್ದ ನಾಲ್ವರು ಸ್ನೇಹಿತರು ವಾಹನದಲ್ಲಿ ತನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂದು ಆರೋಪಿಸಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇನ್ನೊಂದೆಡೆ, ವಿಚಾರಣೆಗೆ ಒಳಪಟ್ಟ ಯುವಕರು ತಾವು ಬೇಕರಿಯಿಂದ ಬ್ರೆಡ್ ಖರೀದಿಸಿದ ಬಳಿಕ ಅದಕ್ಕೆ ಚೀಸ್ ಹಚ್ಚಲು ಅಲ್ಲಿಂದ ಚಾಕು ಪಡೆದಿದ್ದು, ನಂತರ ಅದನ್ನು ಹಿಂತಿರುಗಿಸಲು ತೆರಳುತ್ತಿದ್ದೆವು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಯಾವುದೇ ಅಪರಾಧ ಕೃತ್ಯದಲ್ಲಿ ತೊಡಗಿಸಿಕೊಳ್ಳದೇ ಬಳಿಕ ಎಂದಿನಂತೆ ಜಿಮ್‌ಗೆ ತೆರಳಿದ್ದೇವೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಇದಲ್ಲದೆ, ಘಟನೆಯ ನೈಜ ಸಂಗತಿಗಳು ತಿಳಿದಿದ್ದರೂ ತಮ್ಮ ವಿರುದ್ಧ ದುರುದ್ದೇಶಪೂರ್ವಕವಾಗಿ ಮುರುಳಿಕೃಷ್ಣ ಹಸಂತಡ್ಕ ಹಾಗೂ ಇತರರು ಯುವತಿಯ ಮೂಲಕ ಸುಳ್ಳು ಪ್ರಕರಣ ದಾಖಲಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಯುವಕರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ.
ಎರಡೂ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯಾಂಶದ ಆಧಾರದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಜೊತೆಗೆ, ಘಟನೆಯ ಕುರಿತು ಸುಳ್ಳು ಅಥವಾ ಪರಿಶೀಲಿಸದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಇತರ ಮಾಧ್ಯಮಗಳಲ್ಲಿ ಪ್ರಸಾರ ಮಾಡುವವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ, ಘಟನೆಯನ್ನು ಹಿಂದೂ-ಮುಸ್ಲಿಂ ಕೋನದಲ್ಲಿ ಬಿಂಬಿಸಿ ಕೋಮು ಸೌಹಾರ್ದತೆಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಸುಳ್ಳು ಮಾಹಿತಿ ಪ್ರಸಾರ ಮಾಡಿದ ಆರೋಪದಡಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಏಳು ವೆಬ್ ನ್ಯೂಸ್ ಹಾಗೂ ಸಾಮಾಜಿಕ ಜಾಲತಾಣಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 353(2) ಅಡಿಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.
ಪ್ರಕರಣ ದಾಖಲಾಗಿರುವ ಮಾಧ್ಯಮಗಳು:
- ಪುತ್ತೂರು ಚಾವಡಿ (Instagram)
- ಹೊಸದಿಗಂತ
- ZoominTV Online
- News Focus Kannada
- ಉದಯವಾಣಿ
- Prakhara News
- Karnataka Portfolio (@karnatakaportf – X/Twitter)
ಜಿಲ್ಲಾ ಪೊಲೀಸ್ ಇಲಾಖೆ, ಕೋಮು ಸೌಹಾರ್ದತೆಗೆ ಧಕ್ಕೆ ಉಂಟುಮಾಡುವ ಅಥವಾ ಕೋಮು ಪ್ರಚೋದನಾತ್ಮಕ ಸಂದೇಶಗಳನ್ನು ಪ್ರಸಾರ ಮಾಡುವವರ ವಿರುದ್ಧ ಕಾನೂನಿನಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.





