ಜಮೀನಿನಲ್ಲಿ ಮೇಕೆಗಳು ಮೇಯಿಸಿದ ವಿಚಾರಕ್ಕೆ ನಡೆದ ಜಗಳದಲ್ಲಿ ದಲಿತ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೈದಿರುವ ಘಟನೆ ಭಾಲ್ಕಿ ತಾಲೂಕಿನ ಜಿರಗ್ಯಾಳ ಗ್ರಾಮದಲ್ಲಿ ನಡೆದಿದೆ.
ಆಗಸ್ಟ್ 13ರಂದು ಗುರುವಾರ ಮಧ್ಯಾಹ್ನ ಘಟನೆ ನಡೆದಿದ್ದು, ಜಿರಗ್ಯಾಳ ಗ್ರಾಮದ ರಾಜಕುಮಾರ ಶಿಂಧೆ (45) ಕೊಲೆಯಾದ ವ್ಯಕ್ತಿ ಎನ್ನಲಾಗಿದೆ. ಅದೇ ಗ್ರಾಮದ ಪ್ರದೀಪ ವಾಮನರಾವ (52), ರಾಜಕುಮಾರ ಮುರಳೀಧರ ಬಿರಾದಾರ (42), ಶರದ ವಾಮನರಾವ (45) ಹಾಗೂ ಶುಭಂ ಶರದ (25) ವಿರುದ್ಧ ಪ್ರಕರಣ ದಾಖಲಾಗಿದೆ.
ಮೃತ ರಾಜಕುಮಾರ ಶಿಂಧೆ ಅವರು ತಮ್ಮ ಮೇಕೆಗಳನ್ನು ಗ್ರಾಮದ ಪ್ರದೀಪ ವಾಮನರಾವ ಎಂಬುವವರ ಹೊಲದಲ್ಲಿ ಮೇಯಿಸಲು ಬಿಟ್ಟಿದ್ದರು. ಇದರಿಂದ ಅವರ ಬೆಳೆ ಹಾಳಾಗಿತ್ತು. ಮೇಕೆ ಮೇಯಿಸಿದಕ್ಕಾಗಿ ಜಮೀನಿನ ಮಾಲೀಕ ಪ್ರದೀಪ ಅವರು ರಾಜಕುಮಾರ ಶಿಂಧೆ ಅವರಿಗೆ ಬೈದಿದ್ದರು, ಬಳಿಕ ರಾಜಕುಮಾರ ಶಿಂಧೆ ಕೂಡ ಕುಡಿದು ಬಂದು ಅವರೊಂದಿಗೆ ತಕರಾರು ಮಾಡಿದರು.
ಘಟನೆಯಾದ ನಾಲ್ಕೈದು ದಿನಗಳ ಬಳಿಕ ಆ.13ರಂದು ಎಂದಿನಂತೆ ಜಮೀನಿಗೆ ಮೇಕೆ ಮೇಯಿಸಲು ತೆರಳಿದ ವೇಳೆ ಪ್ರದೀಪ ವಾಮನರಾವ್ ಸೇರಿ ಒಟ್ಟು ನಾಲ್ವರ ಗುಂಪು ರಾಜಕುಮಾರ ಶಿಂಧೆ ಅವರನ್ನು ಅವಾಚ್ಯವಾಗಿ ನಿಂದಿಸಿ, ಜಾತಿ ನಿಂದನೆ ಮಾಡಿರುವುದಲ್ಲದೆ, ಕೊಡಲಿಯಿಂದ ತಲೆಗೆ ಬಲವಾಗಿ ಹಲ್ಲೆ ನಡೆಸಿದರು. ಗಂಭೀರ ಗಾಯಗೊಂಡ ರಾಜಕುಮಾರ ಶಿಂಧೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ : ಶಾಲಾ-ಕಾಲೇಜು ಆವರಣದಲ್ಲಿ ಖಾಸಗಿ, ಧಾರ್ಮಿಕ ಸಮಾರಂಭಗಳಿಗೆ ನಿರ್ಬಂಧ: ಹೊಸ ಕಾಯ್ದೆ ಜಾರಿಗೆ ಮುಂದಾದ ಸರ್ಕಾರ
ಮೃತ ರಾಜಕುಮಾರ ಅವರ ತಾಯಿ ಸುಶೀಲಾ ವಿಠಲರಾವ ಶಿಂಧೆ ಅವರು ನೀಡಿದ ದೂರಿನ ಆಧಾರದ ಮೇಲೆ ಮೇಹಕರ ಪೊಲೀಸ್ ಠಾಣೆಯಲ್ಲಿ 103, 115(2), 352 ಸೇರಿದಂತೆ 3(5) ಬಿಎನ್‌ಎಸ್, ವಿವಿಧ ಕಲಂಗಳಡಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎನ್ನಲಾಗಿದೆ.




