ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಪರೀಕ್ಷೆ ರದ್ದುಪಡಿಸಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಆಮ್ ಆದ್ಮಿ ಪಕ್ಷ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ʼಇದು ಕೇವಲ ಒಂದು ಪರೀಕ್ಷೆಯ ಸೋರಿಕೆ ಮಾತ್ರವಲ್ಲ, ದೇಶದ ಸಂಪೂರ್ಣ ಶಿಕ್ಷಣ ವ್ಯವಸ್ಥೆಯ ಮೇಲಿನ ದೊಡ್ಡ ದಾಳಿಯಾಗಿದೆʼ ಎಂದು ಆಮ್ ಆದ್ಮಿ ಪಕ್ಷ ಜಿಲ್ಲಾಧ್ಯಕ್ಷ ಸಿದ್ದು ಫುಲಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ʼಮೇ 3ರಂದು ಸುಮಾರು 23 ಲಕ್ಷ ವಿದ್ಯಾರ್ಥಿಗಳು ಬರೆದ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿರುವುದು ಅತ್ಯಂತ ದುರಂತದ ಸಂಗತಿ. ಇದೇ ಮೊದಲ ಬಾರಿ ಅಲ್ಲ,ಈ ಹಿಂದೆ 2017, 2021, 2024 ಹಾಗೂ ಈಗ 2026ರಲ್ಲಿ ಸಹ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಬೆಳಕಿಗೆ ಬಂದಿದೆ, ಸೋರಿಕೆ ನೆಪದಿಂದ ಪರೀಕ್ಷೆ ರದ್ದುಗೊಂಡಿರುವುದು ಕೇಂದ್ರ ಸರ್ಕಾರದ ವೈಫಲ್ಯ ತೋರಿಸುತ್ತದೆʼ ಎಂದು ದೂರಿದ್ದಾರೆ.
ʼವೈದ್ಯರಾಗುವ ಕನಸು ಕಟ್ಟಿಕೊಂಡ ಲಕ್ಷಾಂತರ ವಿದ್ಯಾರ್ಥಿಗಳು ಹಗಲು-ರಾತ್ರಿ ಶ್ರಮಪಟ್ಟು ಪರೀಕ್ಷೆಗೆ ಸಿದ್ಧರಾಗಿರುತ್ತಾರೆ. ಅವರ ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಣ ಖರ್ಚು ಮಾಡಿ ಸಂಕಷ್ಟಪಡುತ್ತಾರೆ. ಆದರೆ, ಈ ರೀತಿ ನಿರಂತರ ಪ್ರಶ್ನೆಪತ್ರಿಕೆ ಸೋರಿಕೆಯಿಂದ ವಿದ್ಯಾರ್ಥಿಗಳು ಮತ್ತು ಪೋಷಕರ ಕನಸುಗಳು ನುಚ್ಚುನೂರಾಗುತ್ತಿದ್ದು, ಆತಂಕ ಮೂಡಿಸುವಂತಾಗಿದೆʼ ಎಂದು ಕಳವಳ ವ್ಯಕ್ತಪಡಿಸಿದರು.
ಇದನ್ನೂ ಓದಿ : ಬೀದರ್ | ʼಈದಿನʼ ಫಲಶೃತಿ : ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನೆರಳಿನ ಪರದೆ ಅಳವಡಿಕೆ
ʼಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ಭದ್ರತೆ ಕಾಪಾಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುವವರ ವಿರುದ್ಧ ಕಠಿಣ ಕಾನೂ ಕ್ರಮ ಕೈಗೊಂಡು, ಇಂತಹ ಪ್ರಕರಣಗಳು ಮರುಕಳಿಸದಂತೆ ಶಾಶ್ವತ ಪರಿಹಾರ ಒದಗಿಸಬೇಕುʼ ಎಂದು ಅವರು ಆಗ್ರಹಿಸಿದ್ದಾರೆ.




