ಔರಾದ್ ಪಟ್ಟಣದ ಅನುಭವ ಮಂಟಪದಲ್ಲಿ ವಚನ ಚಾರಿಟೇಬಲ್ ಟ್ರಸ್ಟ್ ವತಿಯಿಂದ 2026ನೇ ಸಾಲಿನ ಡಾ.ಚನ್ನಬಸವ ಪಟ್ಟದ್ದೇವರ ವಿದ್ಯಾರ್ಥಿ ನಿಧಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ಅಮರ ಎಡವೆ ಮಾತನಾಡಿ, ʼಪ್ರತಿಭಾವಂತರಿಗೆ ಹಲವು ಕ್ಷೇತ್ರಗಳಲ್ಲಿ ಅವಕಾಶಗಳಿದ್ದು, ಪ್ರತಿಭೆಗೆ ತಕ್ಕ ಕ್ಷೇತ್ರ ಆಯ್ಕೆ ಮಾಡಿಕೊಂಡರೆ ಉತ್ತಮ ಗುರಿ ತಲುಪಲು ಸಾಧ್ಯʼ ಎಂದರು.
ತಾಲ್ಲೂಕು ಪಂಚಾಯತ ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ ಮಾತನಾಡಿ, ʼವಚನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ, ವೈಜ್ಞಾನಿಕ, ವೈಚಾರಿಕ ಕಾರ್ಯ ಕೈಗೊಳ್ಳುತ್ತಿರುವುದು ಶ್ಲಾಘನೀಯ. ತಾಲ್ಲೂಕಿನ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ನಗದು ಬಹುಮಾನ ನೀಡಿ ಪ್ರೋತ್ಸಾಹಿಸುತ್ತಿರುವುದು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆʼ ಎಂದರು.
ಟ್ರಸ್ಟ್‌ನ ಜಿಲ್ಲಾಧ್ಯಕ್ಷ ಶಿವಶಂಕರ ಟೊಕರೆ ಮಾತನಾಡಿ, ʼವಚನ ಸಂಸ್ಥೆ ಹೊಸ ಪರಿಕಲ್ಪನೆ ಇಟ್ಟುಕೊಂಡು ಜಿಲ್ಲೆಯಲ್ಲಿ ಸುಮಾರು 5 ಸಾವಿರ ಕುಟುಂಬಗಳಿಗೆ ಆರ್ಥಿಕ ಸದೃಢ ನೀಡುತ್ತಿದೆ. ಸಾಮಾಜಿಕ, ದಾಸೋಹ, ಮಕ್ಕಳ ಶೈಕ್ಷಣಿಕ, ಸಮಾಜದಲ್ಲಿ ನೈತಿಕ ಹೊಣೆಗಾರಿಕೆಯ ಕಾರ್ಯ ಹೇಗೆ ನಿರ್ವಹಿಸಬೇಕು ಎಂಬುದನ್ನು ವಚನ ಸಂಸ್ಥೆ ಮಾಡುತ್ತಿದೆ. ಆಶ್ರಯ ಇಲ್ಲದ ಪ್ರತಿಭಾವಂತ ಮಕ್ಕಳಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ನಮ್ಮ ಸಂಸ್ಥೆ ವತಿಯಿಂದ ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಧನ ಸಹಾಯ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸುತ್ತಿದ್ದೇವೆʼ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಡಿ.ಡಿ.ಬೊಳೆಗಾವೆ ಮಾತನಾಡಿ, ʼವಚನ ಚಾರಿಟೇಬಲ್ ಟ್ರಸ್ಟ್ ಸದಸ್ಯರು ಪ್ರತಿ ತಿಂಗಳು ಸಂಗ್ರಹಿಸುವ ಹಣವು ತಾಲ್ಲೂಕಿನ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ, ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕುಟುಂಬಗಳಿಗೆ ಸಹಕಾರ ನೀಡಲಾಗುತ್ತಿದೆʼ ಹೇಳಿದರು.

ವಚನ ಸಮೂಹ ಸಂಸ್ಥೆಯ ಮುಖ್ಯಸ್ಥ ಅಲ್ಲಮಪ್ರಭು ನಾವದಗೀರೆ ಮಾತನಾಡಿ, ʼವಿದ್ಯಾರ್ಥಿಗಳಿಗೆ ಶಿಕ್ಷಣ ಜೊತೆಗೆ ಮಾನವೀಯ ಮೌಲ್ಯಗಳ ಜ್ಞಾನ ಮುಖ್ಯ. ಅಂಕಗಳಿಗಿಂತ ಸಾಮಾಜಿಕ ಹೊಣೆಗಾರಿಕೆ ಮುಖ್ಯವಾದದ್ದು, ಕಠಿಣ ಪರಿಶ್ರಮದಿಂದ ಅಧ್ಯಯನ ನಡೆಸಿ ಉನ್ನತ ಹುದ್ದೆ ಪಡೆದು ಸಾಮಾಜಿಕ ಬದಲಾವಣೆಗೆ ಶ್ರಮಿಸಿʼ ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ : ಬೀದರ್ | ಶಹಾಪುರನಲ್ಲಿ ಮೇ 15ಕ್ಕೆ ʼಬಸವಾದಿ ಶರಣರ ಜಾಗೃತಿ ಸಮಾವೇಶʼ
ಅಮರೇಶ್ವರ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ.ಪ್ರೇಮಾ ಹೂಗಾರ, ವಚನ ಸಂಸ್ಥೆಯ ಪ್ರಮುಖ ಪ್ರಕಾಶ ಗಂದಿಗುಡೆ, ವಚನ ಚಾರಿಟೇಬಲ್ ಸೊಸೈಟಿ ಸದಸ್ಯರಾದ ಮಲ್ಲಿಕಾರ್ಜುನ ಟಂಕಸಾಲೆ, ಜಗನಾಥ ಮೂಲಗೆ, ಸೂರ್ಯಕಾಂತ ವಲ್ಲೆಪೂರೆ, ಶಿವರಾಜ ಶೆಟಕಾರ, ಮಲ್ಲಿಕಾರ್ಜುನ ಹಿಪ್ಪಳಗಾವೆ, ಗಜಾನನ್ ಮಳ್ಳಾ, ಧನರಾಜ ಪಿಟ್ರೆ ಹಾಗೂ ಶಿಕ್ಷಕ ಸತೀಶ್ ಮಜಗೆ, ಮಹಾನಂದಾ ಎಂಡೆ, ಗುರುರಾಜ ಯಾದವ ಸೇರಿದಂತೆ ವಚನ ಚಾರಿಟೇಬಲ್ ಸೊಸೈಟಿ ಎಲ್ಲಾ ಸದಸ್ಯರು ಭಾಗವಹಿಸಿದರು.




