ಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣ ವ್ಯಾಪ್ತಿಯ ಸರ್ಕಾರಿ ಜಮೀನಿನಲ್ಲೇ ಪ್ರಜಾಸೌಧ ನಿರ್ಮಿಸಬೇಕೆಂದು ಆಗ್ರಹಿಸಿ ಕಳೆದ 76 ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಹೋರಾಟಕ್ಕೆ ತಾತ್ಕಾಲಿಕ ಅಂತ್ಯ ದೊರೆತಿದೆ. ಹೋರಾಟಗಾರರ ಮನವಿಗೆ ಸ್ಪಂದಿಸಿರುವ ಜಿಲ್ಲಾಧಿಕಾರಿ ಆನಂದ್ ಕೆ., ಪರ್ಯಾಯ ಸ್ಥಳದ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದರಿಂದ ಧರಣಿ ನಿಲ್ಲಿಸಲಾಗಿದೆ.
ಈ ಮೊದಲು ಮೈಲೇಶ್ವರ ಬಳಿ ಪ್ರಜಾಸೌಧ ನಿರ್ಮಾಣಕ್ಕೆ ಆಡಳಿತ ಮಂಡಳಿ ಮುಂದಾಗಿತ್ತು. ಆದರೆ, ಈ ಸ್ಥಳವು ಪಟ್ಟಣದಿಂದ 4ರಿಂದ 5 ಕಿ.ಮೀ. ದೂರವಿರುವುದರಿಂದ ಪಟ್ಟಣದಲ್ಲಿಯೇ ಪ್ರಜಾಸೌಧ ನಿರ್ಮಿಸಬೇಕೆಂದು ಆಗ್ರಹಿಸಿ ಸ್ಥಳೀಯರು ಹೋರಾಟ ಆರಂಭಿಸಿದ್ದರು.
ಹೋರಾಟದ ತೀವ್ರತೆ ಪರಿಗಣಿಸಿ ಜಿಲ್ಲಾಧಿಕಾರಿಗಳು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದು, ಪರ್ಯಾಯ ಸ್ಥಳ ನೀಡಿಕೆಯ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಪತ್ರದ ನಕಲು ಪ್ರತಿಗಳನ್ನು ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಹೋರಾಟಗಾರರಿಗೆ ಹಸ್ತಾಂತರಿಸಿ, ಸತ್ಯಾಗ್ರಹ ಕೈಬಿಡುವಂತೆ ಕೋರಿದರು.
ಪತ್ರ ಸ್ವೀಕರಿಸಿ ಮಾತನಾಡಿದ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಾಶಿನಾಥ ಮುರಾಳ, “ಜಿಲ್ಲಾಧಿಕಾರಿಗಳ ಸ್ಪಂದನೆಯನ್ನು ಗೌರವಿಸಿ ಸದ್ಯಕ್ಕೆ ಹೋರಾಟ ನಿಲ್ಲಿಸುತ್ತಿದ್ದೇವೆ. ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಈ ಪ್ರಸ್ತಾವನೆಗೆ ಮಂಜೂರಾತಿ ಪಡೆಯುತ್ತೇವೆ. ಒಂದು ವೇಳೆ ಮತ್ತೆ ಮೈಲೇಶ್ವರ ಸಮೀಪದಲ್ಲಿ ಕಟ್ಟಡ ಕಟ್ಟಲು ಮುಂದಾದರೆ ನಮ್ಮ ಹೋರಾಟ ಪುನರಾರಂಭವಾಗಲಿದೆ” ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ> ದಕ್ಷಿಣ ಕನ್ನಡ | ಬತ್ತಿದ ತುಂಬೆ, ಶಾಂಭವಿ, ಗುರುಪುರ ಜಲಾಶಯ; ಕುಡಿಯುವ ನೀರಿಗೂ ಹಾಹಾಕಾರ
ಡಿವೈಎಸ್‌ಪಿ ಬಾಲಪ್ಪ ನಂದಗಾವಿ, ತಹಸೀಲ್ದಾರ್ ಡಾ. ವಿನಯಾ ಹೂಗಾರ, 401 ಸಿಬ್ಬಂದಿ ವರ್ಗದವರು ಹಾಜರಿದ್ದರು. ಹೋರಾಟ ಸಮಿತಿಯ ಅಧ್ಯಕ್ಷ ದಶರಥಸಿಂಗ್ ಮನಗೂಳಿ, ಮುತ್ತಪ್ಪ ಚಮಲಾಪುರ, ಕಾಶೀನಾಥ ಸಜ್ಜನ, ಸುರೇಶ ಹಜೇರಿ, ಮಹೇಶ ಚಲವಾದಿ, ಸಂಜು ಬರದನಾಳ, ಪ್ರಕಾಶ ಹಜೇರಿ, ನಾಗೇಶ ಕಟ್ಟಿಮನಿ, ಮುದಕಪ್ಪ ಬಡಿಗೇರ, ಮಂಜು ಶೆಟ್ಟಿ, ಗಂಗಾಧರ ಕಸ್ತೂರಿ, ಮಯೂರ ಪಾಟೀಲ, ಅಮಿತ್ ಮನಗೂಳಿ ಸೇರಿದಂತೆ ನೂರಾರು ಹೋರಾಟಗಾರರು ಇದ್ದರು.




