ಬೀದರ್ ಜಿಲ್ಲಾ ತೋಟಗಾರಿಕೆ ಇಲಾಖೆಯ ಜೈವಿಕ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ತೋಟಗಾರಿಕೆ ಅಧಿಕಾರಿ (ಎಎಚ್‌ಒ) ಹುದ್ದೆಯನ್ನು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿಗೆ ಸ್ಥಳಾಂತರಿಸುವ ಪ್ರಸ್ತಾವವನ್ನು ತಕ್ಷಣ ತಡೆಹಿಡಿಯಬೇಕು ಎಂದು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನಯಕುಮಾರ ಮಾಳಗೆ ಅವರು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಮಾಡಿದ್ದಾರೆ.
“ಬೀದರ್‌ನ ಜೈವಿಕ ಕೇಂದ್ರವು ರೈತರು, ಗ್ರಾಮೀಣ ಯುವಜನತೆ, ಮಹಿಳೆಯರು ಹಾಗೂ ಕೃಷಿ ಉದ್ಯಮಿಗಳಿಗೆ ಮಹತ್ವದ ಸೇವೆ ಒದಗಿಸುತ್ತಿದೆ. ಅಣಬೆ ಬೇಸಾಯ, ಅಣಬೆ ಸ್ಪಾನ್ ತಯಾರಿಕೆ ಹಾಗೂ ರೋಗಮುಕ್ತ ಉತ್ಪಾದನೆ ಸೇರಿದಂತೆ ವಿವಿಧ ತರಬೇತಿಗಳನ್ನು ಕಡಿಮೆ ವೆಚ್ಚದಲ್ಲಿ ನೀಡಲಾಗುತ್ತಿದೆ. ಬೀದರ್ ಮಾತ್ರವಲ್ಲದೆ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ರೈತರು ಹಾಗೂ ವಿಶ್ವವಿದ್ಯಾಲಯಗಳ ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ಕೇಂದ್ರವು ಶೈಕ್ಷಣಿಕ ಹಾಗೂ ಪ್ರಾಯೋಗಿಕ ತರಬೇತಿಯ ಪ್ರಮುಖ ಕೇಂದ್ರವಾಗಿದೆ” ಎಂದು ತಿಳಿಸಿದ್ದಾರೆ.
ಹಿಂದೆ ಬಹುತೇಕ ಸ್ಥಗಿತಗೊಳ್ಳುವ ಹಂತದಲ್ಲಿದ್ದ ಜೈವಿಕ ಕೇಂದ್ರಕ್ಕೆ ಮರುಜೀವ ನೀಡಿ, ಸಾವಿರಾರು ರೈತರಿಗೆ ನೆರವಾಗುವ ಜೊತೆಗೆ ಸರ್ಕಾರಕ್ಕೆ ಸುಮಾರು ₹1.30 ಕೋಟಿ ಆದಾಯ ಹರಿದುಬರುವಂತೆ ಮಾಡಲು ಅಧಿಕಾರಿಗಳ ತಂಡ ಶ್ರಮಿಸಿದೆ. ಇಂತಹ ಸಂದರ್ಭದಲ್ಲಿ ಕೇಂದ್ರದಲ್ಲಿರುವ ಏಕೈಕ ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಯನ್ನು ಅನ್ಯ ಜಿಲ್ಲೆಗೆ ಸ್ಥಳಾಂತರಿಸಿದರೆ ಕೇಂದ್ರದ ಕಾರ್ಯನಿರ್ವಹಣೆಗೆ ತೀವ್ರ ಹಿನ್ನಡೆಯಾಗಲಿದೆ ಎಂದು ಮಾಳಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಮಾದರಿಯ ಏಕೈಕ ಪ್ರಯೋಗಾಲಯವಾಗಿರುವ ಜೈವಿಕ ಕೇಂದ್ರವು ನೂರಾರು ನಿರುದ್ಯೋಗಿ ಯುವಕರು, ಗೃಹಿಣಿಯರು, ಸ್ವಸಹಾಯ ಸಂಘಗಳು ಹಾಗೂ ಅಣಬೆ ಬೆಳೆಗಾರರಿಗೆ ಆದಾಯದ ಅವಕಾಶ ಕಲ್ಪಿಸುತ್ತಿದೆ. ಹುದ್ದೆ ಸ್ಥಳಾಂತರದಿಂದ ಇವರಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ವಚನ ಕಲ್ಯಾಣ | ನಿಷ್ಠೆಯುಳ್ಳ ಭಕ್ತ ನಟ್ಟಡವಿಯಲ್ಲಿದ್ದಡೇನು? ಅದು ಪಟ್ಟಣವೆಂದೆನಿಸೂದು
ಸಚಿವ ಈಶ್ವರ ಖಂಡ್ರೆ ಅವರು ತಕ್ಷಣ ಮಧ್ಯಪ್ರವೇಶಿಸಿ, ಸಂಬಂಧಪಟ್ಟ ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿ ಎಎಚ್‌ಒ ವೀರಭದ್ರೇಶ್ವರ ಅವರ ಹುದ್ದೆಯ ಸ್ಥಳಾಂತರವನ್ನು ತಡೆಹಿಡಿಯಬೇಕು. ಜತೆಗೆ ಜೈವಿಕ ಕೇಂದ್ರದ ನಾಲ್ಕೂ ಪ್ರಯೋಗಾಲಯಗಳ ಸಮರ್ಪಕ ನಿರ್ವಹಣೆಗೆ ಹೆಚ್ಚಿನ ಸಿಬ್ಬಂದಿ ಹಾಗೂ ಅನುದಾನ ಒದಗಿಸಬೇಕು ಎಂದು ವಿನಯಕುಮಾರ್ ಮಾಳಗೆ ಒತ್ತಾಯಿಸಿದ್ದಾರೆ.




