ಹರಿದ ಗೋಣಿಯಲ್ಲೊಬ್ಬ ಕಳವೆಯ ತುಂಬಿದ.
ಇರುಳೆಲ್ಲಾ ನಡೆದನಾ ಸುಂಕಕಂಜಿ.
ಕಳವೆಯೆಲ್ಲಾ ಹೋಗಿ ಬರಿಗೋಣಿ ಉಳಿಯಿತ್ತು!
ಅಳಿಮನದವನ ಭಕ್ತಿ ಇಂತಾಯಿತ್ತು! ರಾಮನಾಥ.
ಜೇಡರ ದಾಸಿಮಯ್ಯನವರ ಈ ಮೇಲಿನ ವಚನ ರೂಪಕ ಮೂಲಕ ತುಂಬಾ ಅರ್ಥಪೂರ್ಣವಾಗಿ ಪ್ರತಿಪಾದಿಸಿದ್ದಾರೆ.
ಅನುಭಾವಿ ವಚನಕಾರ ಜೇಡರ ದಾಸಿಮಯ್ಯ ಕಲಬುರಗಿ ಜಿಲ್ಲೆಯ (ಇಂದಿನ ಯಾದಗಿರಿ) ಮುದನೂರಿನವರು. ಬಟ್ಟೆ ನೇಯುವುದು ಅವರ ಕಾಯಕವಾಗಿತ್ತು. ರಾಮನಾಥ ಅಂಕಿತನಾಮದಿಂದ ಬರೆದ 176 ವಚನಗಳು ನಮಗೆ ಲಭ್ಯವಾಗಿವೆ. ವಚನಕಾರ್ತಿ ದುಗ್ಗಳೆ ಜೇಡರ ದಾಸಿಮಯ್ಯನವರ ಧರ್ಮಪತ್ನಿ. ದುಗ್ಗಳೆಯ ಎರಡು ವಚನ ಮಾತ್ರ ದೊರೆತಿವೆ. ಶ್ರದ್ಧೆ, ಭಕ್ತಿಯ ಕಾಯಕ ನಡೆಸಿದ ಜೇಡರ ದಾಸಿಮಯ್ಯ ಅವರನ್ನು ಆದ್ಯ ವಚನಕಾರ ಎಂದು ಕರೆಯಲಾಗುತ್ತದೆ.
ಜೇಡರ ದಾಸಿಮಯ್ಯ ಬಸವಪೂರ್ವ ಕಾಲದ ಶ್ರೇಷ್ಠ ವಚನಕಾರ. ಬಸವಣ್ಣನವರ ಮೇಲೆ ದಾಸಿಮಯ್ಯನವರ ಪ್ರಭಾವ ಇರುವ ಬಗ್ಗೆ ಸಂಶೋಧಕರಿಂದ ತಿಳಿದುಬರುತ್ತದೆ. ದಾಸಿಮಯ್ಯ ಕೇವಲ ನೇಕಾರ ಅಷ್ಟೇ ಆಗಿರಲಿಲ್ಲ. ಸಮಾಜದಲ್ಲಿನ ಕ್ರೌರ್ಯ, ಮೌಢ್ಯ, ಲಿಂಗತಾರತಮ್ಯ ತೀಕ್ಷಣವಾಗಿ ಟೀಕಿಸಿ ಸಾಂಸ್ಕೃತಿಕ, ವೈಚಾರಿಕ ಪ್ರಜ್ಞೆ ಬಿತ್ತಿದ ಸಮಾಜ ಸುಧಾರಕರೂ ಹೌದು. ದಾಸಿಮಯ್ಯನವರ ವಚನಗಳಲ್ಲಿ ವರ್ತಮಾನದ ಬದುಕಿನ ಸಂಗತಿಗಳನ್ನು ನಿರ್ಭೀತವಾಗಿ ಅಭಿವ್ಯಕ್ತಿಗೊಳಿಸಿರುವುದು ಕಾಣುತ್ತೇವೆ.
ಮನುಷ್ಯನಿಗೆ ಚಂಚಲ ಮನಸ್ಸು ಹೇಗೆ ವಿಚಲಿತಗೊಳಿಸಿ ಕೊನೆಗೆ ಪಶ್ಚಾತಾಪಕ್ಕೆ ಸಿಲುಕಿಸುತ್ತದೆ ಎನ್ನುವುದಕ್ಕೆ ಈ ವಚನದಿಂದ ತಿಳಿದುಕೊಳ್ಳಬಹುದು. ಒಬ್ಬ ವ್ಯಕ್ತಿ ಒಂದು ಚೀಲದಲ್ಲಿ ಕಳವೆ ತುಂಬಿಕೊಂಡು ರಾತ್ರಿಯಿಡೀ ನಡೆದುಕೊಂಡು ಹೊರಟಿದನು. ಹಗಲಿನಲ್ಲಿ ಕಳವೆ ಸಾಗಾಟ ಮಾಡಿದರೆ ಸುಂಕ ಕಟ್ಟಬೇಕಾಗುತ್ತದೆ ಎಂಬ ಭಯದಿಂದ ರಾತ್ರಿ ಹೊತ್ತೊಯ್ಯಲು ಅಲೋಚಿಸಿದನು. ರಾತ್ರಿಯೆಲ್ಲ ಕ್ರಮಿಸಿ ಬೆಳಕು ಹರಿಯಿತು.
ಅಬ್ಬಾ! ತೆರಿಗೆ ಕಟ್ಟುವ ಭಯದಿಂದ ಕೊನೆಗೂ ತಪ್ಪಿಸಿಕೊಂಡೆ. ನನ್ನ ಭಾರ ಕಡಿಮೆಯಾಯಿತು ಎಂದು ನಿಟ್ಟುಸಿರುಬಿಟ್ಟನು . ಆದರೆ ತಾನು ಕಳವೆ ತುಂಬಿರುವ ಚೀಲಕ್ಕೆ ಮೈಯಲ್ಲ ತೂತುಗಳಿದ್ದವು. ಕಳವೆ (ಭತ್ತ) ತುಂಬು ಮುನ್ನ ಗೋಣಿಚೀಲ ಹೇಗಿದೆ ಎಂದು ಪರೀಕ್ಷಿಸದೆ ಸುಂಕ ಕಟ್ಟಬೇಕೆಂಬ ಅವಸರದಲ್ಲಿ ಹರಿದಿರುವ ಚೀಲದಲ್ಲಿ ಕಳವೆ ತುಂಬಿದನು. ಚೀಲದಲ್ಲಿ ತುಂಬಿಕೊಂಡು ರಾತ್ರಿಯಿಡೀ ನಡೆದ ವೇಳೆ ಅಷ್ಟೂ ಕಳವೆ ಖಾಲಿಯಾಗಿ ಕೊನೆಗೆ ಹರಿದ ಗೋಣಿಚೀಲ ಮಾತ್ರ ಉಳಿದಿರುವುದು ಕಂಡು ಆಶ್ಚರ್ಯಗೊಂಡನು.
ಪ್ರಸ್ತುತ ಸಮಾಜಕ್ಕೆ ಈ ವಚನ ತುಂಬಾ ಹೋಲಿಕೆಯಾಗುತ್ತದೆ. ಮೋಸ, ವಂಚನೆ, ದರೋಡೆ, ಸುಲಿಗೆಯಂತಹ ಶ್ರಮ ಇಲ್ಲದೆ ಗಳಿಸಿದ ಆಸ್ತಿ, ಸಂಪತ್ತು ಬಚ್ಚಿಟ್ಟುಕೊಳ್ಳಲು ಅನೇಕರು ತೆರಿಗೆ ಕಟ್ಟದೇ ಅಡ್ಡಮಾರ್ಗ ಹಿಡಿಯುತ್ತಾರೆ. ಈ ದೇಶದಲ್ಲಿ ಹೆಚ್ಚಿನ ತೆರಿಗೆ ಕಟ್ಟಬೇಕೆಂಬ ಭಯದಿಂದ ವಿದೇಶಿ ಬ್ಯಾಂಕ್‌ಗಳಲ್ಲಿ ಹಣ ಹೂಡಿಕೆ ಮಾಡುವುದು ನಾವೆಲ್ಲರೂ ನೋಡುತ್ತಿದ್ದೇವೆ. ಬಸವಾದಿ ಶರಣರ ಕಾಲದಲ್ಲಿಯೂ ಕೂಡ ತೆರಿಗೆ ಕಳ್ಳರಿದ್ದರು ಎಂಬುದು ಈ ವಚನದಿಂದ ತಿಳಿಯಬಹುದು.
ಚಂಚಲ ಮನಸ್ಸು ಮನುಷ್ಯನಿಗೆ ಅಘಾತ ಉಂಟು ಮಾಡುತ್ತದೆ. ಆದರೆ, ಅಚಲ ಶ್ರದ್ಧೆ, ಭಕ್ತಿ , ನಿಷ್ಠೆ, ಪ್ರಾಮಾಣಿಕತೆ ಮನುಷ್ಯನಿಗೆ ಮಾನವನಾಗಿ ನಿರ್ಮಿಸುತ್ತದೆ. ಅಸ್ಥಿರ ಮನಸ್ಸಿನ ವ್ಯಕ್ತಿಯ ಭಕ್ತಿ ಹೇಗಾಗುತ್ತದೆ ಎಂದು ದಾಸಿಮಯ್ಯ ಎಚ್ಚರಿಸಿದ್ದಾರೆ. ಮತ್ತೊಬ್ಬರನ್ನು ಮೋಸ, ವಂಚನೆ, ಕೇಡು ಬಯಸಿ ಕೆಟ್ಟದಾರಿಗೆ ಕೊಂಡೊಯ್ಯಲು ಹವಣಿಸುತ್ತಾರೋ ಅವರೇ ಮೊದಲು ಅವನತಿ ಹೊಂದುತ್ತಾರೆ ಎಂಬುದು ವಚನದ ರೂಪಕದಿಂದ ಕಾಣಬಹುದು.
“ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ. ಸತಿಪತಿಗಳೊಂದಾಗದವನ ಭಕ್ತಿ ಅಮೃತದೊಳು ವಿಷ ಬೆರೆದಂತೆ ಕಾಣಾ!” ಎಂದು ಜೇಡರ ದಾಸಿಮಯ್ಯನವರು ಜೀವನ ಸಂಗಾತಿಯ ಕುರಿತು ಅರ್ಥವತ್ತಾಗಿ ನಿರೂಪಿಸಿದರು. ನಿಷ್ಠೆಯ ಕಾಯಕದಲ್ಲೇ ಸಂತೃಪ್ತಿ ಬದುಕು ನಡೆಸಿದ ದಾಸಿಮಯ್ಯ ʼಲೋಕದ ಡಂಭಕರ ಮನೆ ಬೇಡʼ ಎಂದು ಕಟುವಾಗಿ ಹೇಳುತ್ತಾರೆ.
ಭಕ್ತಿ ಎಂಬುದು ಅತ್ಯಂತ ಪವಿತ್ರವಾದದು, ಅದು ಎಲ್ಲಿಯೂ ಸಿಗುವುದಿಲ್ಲ. ಖರೀದಿಸುವ ವಸ್ತುವೂ ಅಲ್ಲ. ನಮ್ಮ ಅಂತರಂಗದಲ್ಲಿಯೇ ಹುಟ್ಟಬೇಕು. ಭಕ್ತಿಗೆ ಮತ್ತೊಂದು ಹೆಸರು ಪ್ರೀತಿ, ನಂಬಿಕೆ ಸಮರ್ಪಣಾ ಭಾವ. ಸಮಾಜದಲ್ಲಿರುವ ಎಲ್ಲರನ್ನೂ ಒಳಗೊಳ್ಳುವ ಆಧ್ಯಾತ್ಮ ಮಾರ್ಗವೇ ಭಕ್ತಿ. ಯಾವುದೇ ಕಾರ್ಯವು ಗಾಢವಾದ ಭಕ್ತಿಯಿಂದ ಕೈಗೊಂಡರೆ ಯಶಸ್ವಿಯಾಗಲು ಸಾಧ್ಯ. ನಿಸ್ವಾರ್ಥ ಭಾವ ಇಲ್ಲದೆ ತೋರಿಕೆಯ ಭಕ್ತಿಯಿದ್ದರೆ ಅದು ತನ್ನ ನೆಮ್ಮದಿಯ ಕೇಡಿಗೆ ಕಾರಣವಾಗಿ ಕೊನೆಗೆ ತನ್ನನ್ನೇ ಕೊಲ್ಲುವುದು.
“ನಿಷ್ಠೆಯುಳ್ಳ ಭಕ್ತ ನಟ್ಟಡವಿಯಲ್ಲಿದ್ದಡೇನು? ಅದು ಪಟ್ಟಣವೆಂದೆನಿಸೂದು! ನಿಷ್ಠೆಯಿಲ್ಲದ ಭಕ್ತ ಪಟ್ಟಣದಲ್ಲಿದ್ದಡೂ ಅದು ನಟ್ಟಡವಿ ಕಾಣಾ! ರಾಮನಾಥ” ಎಂದು ಇನ್ನೊಂದು ವಚನದ ಮುಖಾಂತರ ದಾಸಿಮಯ್ಯನವರು ಭಕ್ತಿಯ ಕುರಿತು ಹೇಳುತ್ತಾರೆ. ನಿಷ್ಠೆಯಿಲ್ಲದ ವ್ಯಕ್ತಿ ಪಟ್ಟಣದಲ್ಲಿ ವಾಸವಿದ್ದರೂ ಅವನಿಗೆ ಅರಣ್ಯದಲ್ಲರುವ ಅನುಭಾವ ಆಗುತ್ತದೆ. ಅದೇ ಭಕ್ತಿಯಲ್ಲಿ ನಿಷ್ಠೆಯಿದ್ದರೆ ಅಡವಿಯೂ ಪಟ್ಟಣದಂತೆ ಸುಂದರವಾಗಿ ಕಾಣಲು ಸಾಧ್ಯ. ನಮ್ಮೊಳಗಿನ ಅರಿವು-ಆಚಾರ, ಶ್ರದ್ಧೆ-ಭಕ್ತಿ ನಮ್ಮ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ.
ಇದನ್ನೂ ಓದಿ : ಸಿನಿಮಾ ವಿಶೇಷ | ʼಬಾಲನ್: ದಿ ಬಾಯ್ʼ- ತಾಯಿಯ ಪ್ರೀತಿ ಎಲ್ಲವನ್ನೂ ಸಮರ್ಥಿಸಬಹುದೇ?
ಚಂಚಲತೆ ಭಾವ ತೊರೆದು ಅಂತರಂಗ ಶುದ್ಧಿಯಾಗಿಸಿಕೊಂಡು ನಿರ್ಮಲ ಚಿತ್ತವಾದ ಭಕ್ತಿ ತುಂಬಿಕೊಳ್ಳಬೇಕು. ನಾವು ಮಾಡುವ ಭಕ್ತಿ, ಕಾಯಕ ಪ್ರಾಮಾಣಿಕತೆ ಹಾಗೂ ಪರಿಶುದ್ಧವಾಗಿರಬೇಕು. ಸಜ್ಜನರ ಸಂಗದೊಳಗಿನ ಪ್ರೀತಿ ನಿಸ್ವಾರ್ಥದಿಂದ ಕೂಡಿರಬೇಕು. ಶರಣರ ‘ದಯವೇ ಧರ್ಮದ ಮೂಲ’ ಎಂಬ ವಚನ ಸಾಲಿನಂತೆ ಪ್ರತಿಯೊಬ್ಬರೂ ದಯೆ, ಕರುಣೆ ಕಾಣುವ ಮಾನವೀಯ ಮೌಲ್ಯಗಳು ಬೆಳೆಸಿಕೊಂಡರೆ ಮಾನವ ವಿಶ್ವಮಾನವನಾಗುತ್ತಾನೆ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ವಾತಾವರಣ ಮೂಡುತ್ತದೆ ಎಂಬ ದಾಸಿಮಯ್ಯನವರ ವಚನ ಸಂದೇಶ ಲೋಕ ಪ್ರಜ್ಞೆಗೆ ಸಾಕ್ಷಿಯಾಗಿದೆ.
(ಇಂದಿನಿಂದ (ಆ.12) ಶ್ರಾವಣ ಮಾಸ ಆರಂಭಗೊಂಡಿದೆ. ತನ್ನಿಮಿತ್ತ ಪ್ರತಿದಿನ ಬಸವಾದಿ ಶಿವಶರಣರ ವಚನ ಅನುಭಾವವನ್ನು “ವಚನ ಕಲ್ಯಾಣ” ಹೆಸರಿನಲ್ಲಿ ವಿಶೇಷ ಬರಹಗಳು ʼಈದಿನ ಡಾಟ್ ಕಾಮ್ʼನಲ್ಲಿ ಪ್ರಕಟವಾಗಲಿದೆ. ಓದಿ…ಓದಿಸಿ)

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.



