ಬೀದರ್‌ನ ಐತಿಹಾಸಿಕ ʼಕರೇಜ್ʼ ಜಲವ್ಯವಸ್ಥೆ ದೇಶದ ಜಲಸಂರಕ್ಷಣೆಗೆ ಮಾದರಿಯಾಗಬಲ್ಲದು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಚಿವಾಲಯದ ಅಂಡರ್ ಸೆಕ್ರೆಟರಿ ದೀಪಕಕುಮಾರ್ ಹಾಗೂ ಪ್ರಾಜೆಕ್ಟ್ ಡೈರೆಕ್ಟರ್ ಸಾಹು ಅವರನ್ನೊಳಗೊಂಡ ತಂಡ ಶುಕ್ರವಾರ ಬೀದರ್‌ನ ನೌಬಾದನಲ್ಲಿರುವ ಕರೇಜ್‌ಗೆ ಭೇಟಿ ನೀಡಿ, ಕರೇಜ್ ವ್ಯವಸ್ಥೆ ಮತ್ತು ಅದರ ಪುನರುಜ್ಜೀವನ ಕಾರ್ಯಗಳನ್ನು ಪರಿಶೀಲಿಸಿತು. ʼಕರೇಜ್ʼ ಐತಿಹಾಸಿಕ ಹಿನ್ನೆಲೆ, ನೀರಿನ ಹರಿವು, ಸಂಗ್ರಹಣೆ ಹಾಗೂ ಅಂತರ್ಜಲ ಮರುಪೂರಣದ ಮಹತ್ವದ ಬಗ್ಗೆ ಪೂರ್ಣ ಮಾಹಿತಿ ಪಡೆಯಿತು.
ಟೀಂ ಯುವಾ ಸಹ ಸಂಸ್ಥಾಪಕ ವಿನಯಕುಮಾರ್ ಮಾಳಗೆ ಹಾಗೂ ತಂಡದ ಸದಸ್ಯರಾದ ಪ್ರೇಮಕುಮಾರ್ ಮತ್ತು ಶಂಕರ್ ಅವರು ಅಧಿಕಾರಿಗಳಿಗೆ ಸುರಂಗಬಾವಿ (ಕರೇಜ್) ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕರೇಜ್ ಪುನರುಜ್ಜೀವನದಲ್ಲಿ ಸ್ಥಳೀಯ ಸಮುದಾಯಗಳು ಮತ್ತು ಸಂಘಟನೆಗಳ ಕೊಡುಗೆಯನ್ನು ಅಧಿಕಾರಿಗಳು ಶ್ಲಾಘಿಸಿದರು.

ಐತಿಹಾಸಿಕ ಜಲಮೂಲಗಳ ಸಂರಕ್ಷಣೆ ಮತ್ತು ಅವುಗಳಲ್ಲಿರುವ ಸಾಂಪ್ರದಾಯಿಕ ಜಲ ನಿರ್ವಹಣಾ ಜ್ಞಾನವನ್ನು ಇಂದಿನ ಅಭಿವೃದ್ಧಿ ಯೋಜನೆಗಳಲ್ಲಿ ಬಳಸಿಕೊಳ್ಳಬೇಕು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು.
ಟೀಂ ಯುವಾ ತಂಡದ ವಿನಯಕುಮಾರ ಮಾಳಗೆ ಅವರು, ಕರೇಜ್ ಜೊತೆಗೆ ಐತಿಹಾಸಿಕ ಕಲ್ಯಾಣಿಗಳು, ಮೆಟ್ಟಿಲು ಬಾವಿಗಳು, ತೆರೆದ ಬಾವಿಗಳು, ಕೆರೆ, ಕಟ್ಟೆಗಳ ಪುನರುಜ್ಜೀವನದ ಅನುಭವವನ್ನು ದಾಖಲಿಸಿ, ಕೇಂದ್ರ ಸರ್ಕಾರದ ಮಟ್ಟದಲ್ಲಿ ಪೈಲಟ್ ಅಧ್ಯಯನವಾಗಿ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಬೀದರ್‌ನ ಕರೇಜ್ ವ್ಯವಸ್ಥೆಯ ಪುನರುಜ್ಜೀವನವು ಕೇವಲ ಒಂದು ಹಳೆಯ ಜಲಮಾರ್ಗವನ್ನು ಸ್ವಚ್ಛಗೊಳಿಸುವ ಕಾರ್ಯವಲ್ಲ. ನೀರಿನ ಹರಿವು, ಸಂಗ್ರಹಣೆ, ಅಂತರ್ಜಲ ಮರುಪೂರಣ, ಸ್ಥಳೀಯ ಪರಿಸರ ಹಾಗೂ ಸಮುದಾಯದ ಬಳಕೆಯೊಂದಿಗೆ ಸಂಬಂಧ ಹೊಂದಿರುವ ಸಮಗ್ರ ಜಲ ವ್ಯವಸ್ಥೆಯನ್ನು ಪುನಃ ಅರ್ಥಮಾಡಿಕೊಂಡು ಜೀವಂತಗೊಳಿಸುವ ಪ್ರಯತ್ನವಾಗಿದೆ ಎಂದರು.

ಕರೇಜ್ ಪುನರುಜ್ಜೀವನದ ಎರಡನೇ ಹಂತಕ್ಕೆ ರಾಜ್ಯ ಸರ್ಕಾರ ಈಗಾಗಲೇ ಸುಮಾರು ₹10 ಕೋಟಿ ಅನುದಾನ ಮಂಜೂರು ಮಾಡಿದೆ. ಬೀದರ್‌ನ ಸಾಂಪ್ರದಾಯಿಕ ಜಲಸಂಪನ್ಮೂಲಗಳ ಅನುಭವವನ್ನು ವೈಜ್ಞಾನಿಕ ಅಧ್ಯಯನದೊಂದಿಗೆ ಸಂಯೋಜಿಸಿ, ನೀರಿನ ಕೊರತೆ ಎದುರಿಸುತ್ತಿರುವ ದೇಶದ ಇತರ ಪ್ರದೇಶಗಳಲ್ಲೂ ಅನುಸರಿಸಬಹುದಾದ ಈ ಜಲಸಂರಕ್ಷಣೆಯ ಮಾದರಿಯನ್ನು ರೂಪಿಸಬೇಕು” ಎಂದು ಅಧಿಕಾರಿಗಳಿಗೆ ತಿಳಿಸಿದರು.
ಇದನ್ನೂ ಓದಿ : ಬೀದರ್ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ
ಈ ಅಧ್ಯಯನ ಪ್ರವಾಸದಲ್ಲಿ ಕಮಲನಗರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತರಾವ್ ಕೌಟಗೆ, ಪಿಡಿಒ ಶರತಕುಮಾರ್, ಉಪ ಕಾರ್ಯದರ್ಶಿ ಸೂರ್ಯಕಾಂತ್ ಬಿರಾದಾರ್ ಹಾಗೂ ಪ್ರಾಜೆಕ್ಟ್ ಕೋ-ಆರ್ಡಿನೇಟರ್ ದೀಪಕ್ ಮತ್ತಿತರರು ಉಪಸ್ಥಿತರಿದ್ದರು.





