ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳನ್ನು ತಕ್ಷಣವೇ ಬರಪೀಡಿತ ಪ್ರದೇಶಗಳೆಂದು ಘೋಷಿಸಿ, ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕೆಂದು ವೀರ ಕನ್ನಡಿಗರ ಸೇನೆ ಆಗ್ರಹಿಸಿದೆ.
ಬೀದರ್ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಮನವಿ ಪತ್ರದಲ್ಲಿ, ಜೂನ್ ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗದ ಪರಿಣಾಮ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವುದಾಗಿ ತಿಳಿಸಲಾಗಿದೆ.
“ಈಗಾಗಲೇ ಬಿತ್ತನೆ ಮಾಡಲಾಗಿದ್ದ ತೊಗರಿ, ಸೊಯಾಬೀನ್, ಉದ್ದು ಹಾಗೂ ಹೆಸರು ಬೆಳೆಗಳು ಮೊಳಕೆಯೊಡೆಯದೇ ಸಂಪೂರ್ಣ ನಾಶವಾಗಿವೆ. ಅಲ್ಲದೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೆರೆ-ಕಟ್ಟೆಗಳು ಒಣಗಿದ್ದು, ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಅಭಾವ ಎದುರಾಗಿದೆ. ಬೆಳೆ ನಷ್ಟ, ಸಾಲದ ಹೊರೆ ಹಾಗೂ ಉದ್ಯೋಗದ ಕೊರತೆಯಿಂದ ರೈತರು, ಕೃಷಿ ಕಾರ್ಮಿಕರು ಮತ್ತು ಅವರ ಕುಟುಂಬಗಳು ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಸಂಘಟನೆ ಕಳವಳ ವ್ಯಕ್ತಪಡಿಸಿದೆ.
ರೈತರು ಪ್ರತಿ ಎಕರೆಗೆ ₹15-20 ಸಾವಿರದವರೆಗೆ ಬಿತ್ತನೆ, ಗೊಬ್ಬರ ಹಾಗೂ ಇತರ ಕೃಷಿ ವೆಚ್ಚಗಳನ್ನು ಭರಿಸಿದ್ದು, ಹೆಚ್ಚಿನವರು ಸಾಲ ಮಾಡಿ ಕೃಷಿ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ. ಇದೀಗ ಬೆಳೆ ಸಂಪೂರ್ಣ ಹಾನಿಗೊಳಗಾಗಿರುವುದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಅನಾಹುತಗಳು ಸಂಭವಿಸುವ ಆತಂಕ ಎದುರಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
“ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವುದು, ಪ್ರತಿ ಎಕರೆಗೆ ₹25 ಸಾವಿರ ಪರಿಹಾರವನ್ನು ನೇರ ನಗದು ವರ್ಗಾವಣೆಯ ಮೂಲಕ ಹಣ ಬಿಡುಗಡೆ ಮಾಡುವುದು, ರೈತರ ಬೆಳೆ ಹಾಗೂ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಿ ಹೊಸ ಸಾಲ ಸೌಲಭ್ಯ ಕಲ್ಪಿಸುವುದು. ಸರ್ಕಾರದ ಮಾರ್ಗಸೂಚಿಗಳಂತೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಮನರೇಗಾ ಯೋಜನೆಯಡಿ 150 ದಿನಗಳ ಉದ್ಯೋಗವನ್ನು ತಕ್ಷಣ ಜಾರಿಗೊಳಿಸುವುದು ಹಾಗೂ ಬೆಳೆ ವಿಮೆ ಪರಿಹಾರ ಪ್ರಕ್ರಿಯೆಯನ್ನು ಸರಳೀಕರಿಸಿ 30 ದಿನಗಳೊಳಗೆ ಇತ್ಯರ್ಥಪಡಿಸಬೇಕು” ಎಂದು ಸೇನೆಯ ಪ್ರಮುಖರು ಒತ್ತಾಯಿಸಿದರು.
ಒಂದು ವೇಳೆ 15 ದಿನಗಳೊಳಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ, ವೀರ ಕನ್ನಡಿಗರ ಸೇನೆಯ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ : ಬೀದರ್ | ಹದಗೆಟ್ಟ ರಸ್ತೆ, ಸವಾರರು ಹೈರಾಣು : ದುರಸ್ತಿ ಯಾವಾಗ?
ವೀರ ಕನ್ನಡಿಗರ ಸೇನೆಯ ರಾಜ್ಯ ಸಂಚಾಲಕ ಸುಬ್ಬಣ್ಣ ಕರಕನಳ್ಳಿ, ಜಿಲ್ಲಾ ಗೌರವಾಧ್ಯಕ್ಷ ಈಶ್ವರ ಬಡಿಗೇರ, ಜಿಲ್ಲಾಧ್ಯಕ್ಷ ಅಮರ ಪೂಜಾರಿ, ಜಿಲ್ಲಾ ಸಂಚಾಲಕ ಅಂಬಾದಾಸ್ ಸೈನೆ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಜಡಗೆ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಗೋವಿಂದ ಪೂಜಾರಿ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮೋಹಿನ್ ಮಟೇಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬುರಾವ ಕೆ. ಬಿಟ್ಟೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಶಿಧರ ಜ್ಯೋತಿ, ತಾಲೂಕಾಧ್ಯಕ್ಷ ಗೌಸೋದ್ದೀನ್ ಯಾಕತಪುರ, ನಗರಾಧ್ಯಕ್ಷ ಪ್ರಶಾಂತ ಹುವಗಾರ, ತಾಲೂಕು ಕಾರ್ಯದರ್ಶಿ ಜುಬೇರ್ ಪಾಶಾ, ಜಿಲ್ಲಾ ಖಜಾಂಚಿ ಕಲ್ಲಪ್ಪ ಚಾಂಬೋಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.




