“ಮಕ್ಕಳನ್ನು ಅಂಕಗಳಿಕೆಗೆ ಸೀಮಿತಗೊಳಿಸದೇ ಹೃದಯ ಸಂಸ್ಕಾರವುಳ್ಳ ಸತ್ಪ್ರಜೆಗಳನ್ನಾಗಿ ರೂಪಿಸುವುದು ಇಂದಿನ ಅಗತ್ಯವಾಗಿದೆ” ಎಂದು ರಾಯಚೂರಿನ ಆಕಾಶವಾಣಿಯ ವಿಶ್ರಾಂತ ಅಧಿಕಾರಿ ಡಾ. ಬಿ. ಎಂ. ಶರಭೇಂದ್ರಸ್ವಾಮಿ ಅಭಿಪ್ರಾಯಪಟ್ಟರು.
ಧಾರವಾಡ ಪಟ್ಟಣದ ವಿದ್ಯಾವರ್ಧಕ ಸಂಘದ ಡಾ.ರಾ.ಹ. ದೇಶಪಾಂಡೆ ಸಭಾ ಭವನದಲ್ಲಿ ಕ.ವಿ.ವ ಸಂಘವು, ಶ್ರೀಮತಿ ರಶ್ಮಿ ಮಂಜುನಾಥ ನಾಯಕ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ, `ವಿದ್ಯಾರಶ್ಮಿ’ ಪ್ರಶಸ್ತಿ ಪ್ರದಾನ ಹಾಗೂ ಅರ್ಹ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ ಬುಕ್ ವಿತರಣಾ ಕಾರ್ಯಕ್ರಮದಲ್ಲಿ ‘ಮಕ್ಕಳ ಭವಿಷ್ಯ ರೂಪಿಸುವಲ್ಲಿ ಸಂಸ್ಕೃತಿ-ಸಂಸ್ಕಾರಗಳ ಪಾತ್ರ’ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
“ಇಂದಿನ ಯಾಂತ್ರಿಕ ಯುಗದಲ್ಲಿ ಪಾಲಕರಿಗೆ, ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ಕಲಿಸಲು ಸಾಧ್ಯವಾಗುತ್ತಿಲ್ಲ. ನ್ಯಾನೊ ಕುಟುಂಬಗಳ ಸಂಖ್ಯೆ ಹೆಚ್ಚಾಗಿ ಮಕ್ಕಳಿಗೆ ಕುಟುಂಬದಲ್ಲಿ ಭಾವನಾತ್ಮಕ ಸಂಬಂಧಗಳು ಇಲ್ಲದಂತಾಗಿದೆ. ಜನ್ಮ ನೀಡಿದಾಕ್ಷಣ ತಂದೆ ತಾಯಿಗಳ ಜವಾಬ್ದಾರಿ ಮುಗಿಯುವುದಿಲ್ಲ. ಮನೆಯಿಂದಲೇ ಒಳ್ಳೆಯ ಸಂಸ್ಕಾರ ನೀಡುವಂತಾಗಲೇಬೇಕ. ಎಂದು ಹೇಳಿದರು.
“ಶಾಲೆ ಹಾಗೂ ಸಮಾಜವೂ ಮಕ್ಕಳಿಗೆ ಸನ್ನಡತೆ, ಸದ್ವಿಚಾರ, ಸದ್ಗುಣಗಳನ್ನು ಬೆಳೆಸುವಲ್ಲಿ ಬದ್ಧತೆ ತೋರಬೇಕು. ಶಿಕ್ಷಣವೆಂದರೆ ಕೇವಲ ಬುದ್ದಿ ವಿಕಾಸ ಮಾತ್ರವಲ್ಲ. ಮನೋವಿಕಾಸವೂ ಮುಖ್ಯ. ಇಂದು ಶಾಲೆ, ಕಾಲೇಜುಗಳಲ್ಲಿ ನೀತಿ ಶಿಕ್ಷಣಕ್ಕೂ ಆಧ್ಯತೆ ನೀಡಬೇಕು” ಎಂದು ಹೇಳಿದರು.
ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ತಿರ್ಲಾಪುರದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕು. ಐಶ್ಚರ್ಯ ಮಂಜುನಾಥ ರಾಯ್ಕರ `ವಿದ್ಯಾರಶ್ಮಿ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಈ ಪ್ರಶಸ್ತಿ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ನನ್ನ ಭವಿಷ್ಯಕ್ಕೊಂದು ಭರವಸೆ ತರುವುದಾಗಿದೆ. ನನ್ನ ಈ ಸಾಧನೆಗೆ ನನ್ನ ಪಾಲಕರು, ಶಿಕ್ಷಕರು ಎಲ್ಲರ ಪಾತ್ರ ಅನನ್ಯವಾಗಿದೆ” ಎಂದಳು.
ದತ್ತಿದಾನಿ ಕೆ. ಎಚ್. ನಾಯಕ ಮಾತನಾಡಿ, “ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಇಂದು ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ, ಸಂಸ್ಕಾರದ ಕೊರತೆ ಇದೆ. `ವಿದ್ಯಾರಶ್ಮಿ’ ಪ್ರಶಸ್ತಿ ಜೊತೆ `ರಂಗರಶ್ಮಿ’ ಪ್ರಶಸ್ತಿಯನ್ನೂ ಮಗಳ ಸ್ಮರಣೆಯಲ್ಲಿ ನೀಡಿ ಅವಳನ್ನು ದತ್ತಿ ಮೂಲಕ ಜೀವಂತವಾಗಿಸುವ ಕಾರ್ಯ ಮಾಡಲಾಗುತ್ತಿದೆ” ಎಂದರು.
ಕ.ವಿ.ವ.ಸಂಘದ ಕಾರ್ಯಾಧ್ಯಕ್ಷರು ಬಸವಪ್ರಭು ಹೊಸಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, “ಐಶ್ಚರ್ಯ ರಾಯ್ಕರ ಪ್ರತಿಭಾನ್ವಿತ ಗ್ರಾಮೀಣ ವಿದ್ಯಾರ್ಥಿಯಾಗಿ ಸಾಧನೆ ಮಾಡಿದ್ದು ಶ್ಲಾಘನೀಯ” ಎಂದರು.
ಧಾರವಾಡ ನಗರದ ಸರಕಾರಿ ಪ್ರೌಢಶಾಲಾ ಪ್ರತಿಭಾನ್ವಿತ ಅರ್ಹ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟಬುಕ್ ವಿತರಿಸಲಾಯಿತು.ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿರು. ಡಾ. ಜಿನದತ್ತ ಹಡಗಲಿ ವಂದಿಸಿದರು.
ಕಾರ್ಯಕ್ರಮದಲ್ಲಿ ಗುರು ಹಿರೇಮಠ, ಡಾ. ಧನವಂತ ಹಾಜವಗೋಳ, ಡಾ. ಬಾಳಣ್ಣ ಶೀಗೀಹಳ್ಳಿ, ಡಾ. ಶಶಿಧರ ನರೇಂದ್ರ, ಎಂ.ಎಂ. ಚಿಕ್ಕಮಠ, ಕೆ.ಜಿ. ದೇವರಮನಿ, ವಿಜಯಕುಮಾರ ಬಾಳಿಗಾರ, ಎಂ.ಎ. ಭಾವಿಕಟ್ಟಿ, ಬಿ.ಜಿ. ಬಾರಕಿ, ಅಶೋಕ ನಾಯಕ, ಶಿವಾನಂದ ಹೂಗಾರ ಮತ್ತು ನಾಯಕ ಪರಿವಾರದವರು ಮತ್ತಿತರರು ಭಾಗವಹಿಸಿದ್ದರು.




