ಸಾಮಾಜಿಕ ಹಾಗೂ ಆಧ್ಯಾತ್ಮಿಕ ಕ್ರಾಂತಿಕಾರಿಗಳಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಶರಣ ನುಲಿಯ ಚಂದಯ್ಯನವರು ಸಮಾಜದಲ್ಲಿದ್ದ ಅಸ್ಪೃಶ್ಯತೆ, ಜಾತಿ ಪದ್ಧತಿ ಮತ್ತು ಮೂಢನಂಬಿಕೆಗಳ ವಿರುದ್ಧ ಹೋರಾಡಿ, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದ ಮಹಾನ್ ಚೇತನರು ಎಂದು ಅಪರ ಜಿಲ್ಲಾಧಿಕಾರಿ ಸುರೇಖಾ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ನುಲಿಯ ಚಂದಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
“ಮಹಾನ್ ದಾರ್ಶನಿಕ, ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳು 19ನೇ ಶತಮಾನದ ಪ್ರಮುಖ ಸಾಮಾಜಿಕ ಹಾಗೂ ಆಧ್ಯಾತ್ಮಿಕ ನಾಯಕರಾಗಿದ್ದರು. ‘ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು’ ಎಂಬ ಮಾನವೀಯ ಸಂದೇಶವನ್ನು ಸಾರಿದ ಅವರು, ಎಲ್ಲರೂ ಸಮಾನರು ಎಂಬ ಭಾವನೆಯನ್ನು ಸಮಾಜದಲ್ಲಿ ಬಿತ್ತಿದರು. ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಸಬಲೀಕರಣಕ್ಕೆ ಹೆಚ್ಚಿನ ಮಹತ್ವ ನೀಡಿದ ಅವರು, ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸುವಂತೆ ಪ್ರೇರೇಪಿಸಿದರು” ಎಂದು ಹೇಳಿದರು.
ನುಲಿಯ ಚಂದಯ್ಯನವರು 12ನೇ ಶತಮಾನದ ಶ್ರೇಷ್ಠ ಶಿವಶರಣ ಹಾಗೂ ಕಾಯಕಯೋಗಿಯಾಗಿದ್ದರು. ವಿಜಯಪುರ ಜಿಲ್ಲೆಯ ಹಿರೇಶಿವಣಗಿ ಗ್ರಾಮದಲ್ಲಿ ಜನಿಸಿದ ಅವರು, ಬಸವಣ್ಣನವರ ತತ್ವಗಳಿಂದ ಪ್ರಭಾವಿತರಾಗಿ ಕಲ್ಯಾಣಕ್ಕೆ ಆಗಮಿಸಿ ಅನುಭವ ಮಂಟಪದ ಶರಣ ಬಳಗವನ್ನು ಸೇರಿದರು. ಹುಲ್ಲು ತಂದು ಹಗ್ಗ ನೂಲುವ ಕಾಯಕ ಮಾಡುತ್ತಿದ್ದುದರಿಂದ ‘ನುಲಿ ಚಂದಯ್ಯ’ ಎಂಬ ಹೆಸರು ಪಡೆದರು. ಕಾಯಕಕ್ಕೆ ಮಹತ್ವ ನೀಡಿದ ಅವರು, ಕಾಯಕವೇ ಶ್ರೇಷ್ಠ ಎಂಬ ಸಂದೇಶವನ್ನು ಸಾರುವುದರ ಜತೆಗೆ ಹಲವಾರು ವಚನಗಳನ್ನು ರಚಿಸಿದ್ದಾರೆ. ಇಂತಹ ಮಹನೀಯರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
ಬೀದರ ಜಿಲ್ಲಾ ಆರ್ಯ ಈಡಿಗ ಸಮಾಜದ ಅಧ್ಯಕ್ಷ ಸುಭಾಷ್ ಚೌದರಿ ಮಾತನಾಡಿ, “ಬ್ರಹ್ಮಶ್ರೀ ನಾರಾಯಣ ಗುರುಗಳು ಅಸ್ಪೃಶ್ಯತೆ ಹಾಗೂ ಸಾಮಾಜಿಕ ಮತ್ತು ಧಾರ್ಮಿಕ ಅಸಮಾನತೆಗಳ ವಿರುದ್ಧ ಹೋರಾಡಿ, ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ಸಾರಿದರು. ಅವರ ಆದರ್ಶಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿವೆ” ಎಂದು ಹೇಳಿದರು.
ಸಮಾಜದ ಗೌರವಾಧ್ಯಕ್ಷ ಡಾ.ರಾಜಶೇಖರ ಸೇಡಂಕರ ಮಾತನಾಡಿ, “ಮೇಲು-ಕೀಳು ಎಂಬ ಭೇದವಿಲ್ಲದೆ ಎಲ್ಲರೂ ಸಮಾನರು ಎಂದು ಸಾರಿದ ನಾರಾಯಣ ಗುರುಗಳು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಶಿಕ್ಷಣ ಕ್ರಾಂತಿಗೆ ಕಾರಣರಾದರು. ಇಂತಹ ಮಹಾನ್ ಚೇತನರ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ” ಎಂದರು.
ಅಖಿಲ ಕರ್ನಾಟಕ ಕುಳುವ ಸಮಾಜದ ಅಧ್ಯಕ್ಷ ಸೂರ್ಯಕಾಂತ ಕಮಠಾಣ ಅವರು ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಶರಣ ನುಲಿಯ ಚಂದಯ್ಯನವರ ಜೀವನ, ಸಾಧನೆ ಮತ್ತು ಸಮಾಜ ಸುಧಾರಣೆಯ ಕೊಡುಗೆ ಕುರಿತು ಮಾತನಾಡಿದರು.
ಇದನ್ನೂ ಓದಿ : ವಚನ ಕಲ್ಯಾಣ | ಮಾಡುವ ಮಾಟವಿಲ್ಲದೆ ಮಾತಿಂಗೆ ಮಾತಾಡುವುದು ಅದೇತರ ಪೂಜೆ?
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಸಮಾಜದ ಮುಖಂಡರಾದ ಸಂಗಯ್ಯ ಸುಲ್ತಾನಪುರ, ಶ್ರೀಮಂತ ತೆಲಗಿ, ಅನೀಲ ಗೌಡ, ಅಶೋಕ ಗೌಡ, ಶಂಕರ ನೇಲಗಿ, ಉಮೇಶ ತೆಲಗಿ, ದೀಪಕ ಗೌಡ, ರಮೇಶ ಗೌಡ, ಸಿದ್ರಾಮ, ಪ್ರಕಾಶ ಗೌಡ, ಸಂಜುಕುಮಾರ ಬೇಲೂರ, ಶಂಕರ ಜನವಾಡ, ಅಶೋಕ ನೌಬಾದ, ಸಂತೋಷ ಅಲಿಯಾಬಾದ ಸೇರಿದಂತೆ ಸಮಾಜದ ಮುಖಂಡರು, ಕಚೇರಿ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.




