ಅವಾವ ಕಾಯಕದಲ್ಲಿ ಬಂದಡೂ ಭಾವಶುದ್ಧವಾಗಿ ಗುರು-ಲಿಂಗ-ಜಂಗಮಕ್ಕೆ ಮಾಡುವುದೇ ಶಿವಪೂಜೆ. ಮಾಡುವ ಮಾಟವಿಲ್ಲದೆ ಮಾತಿಂಗೆ ಮಾತಾಡುವುದು ಅದೇತರ ಪೂಜೆ? ಅದು ಚಂದೇಶ್ವರಲಿಂಗಕ್ಕೆ ಒಪ್ಪವಲ್ಲ, ಮಡಿವಾಳಯ್ಯಾ.
12ನೇ ಶತಮಾನದ ಶರಣ ಚಳವಳಿಯ ಬಹುದೊಡ್ಡ ಕೊಡುಗೆ ಎಂದರೆ ಕಾಯಕಕ್ಕೆ ನೀಡಿದ ಘನತೆ. ದುಡಿಮೆಯನ್ನು ಕೇವಲ ಹೊಟ್ಟೆಪಾಡಿನ ಮಾರ್ಗವಾಗಿ ನೋಡದೆ, ಅದನ್ನೇ ಆತ್ಮಶುದ್ಧಿಯ, ಸಾಮಾಜಿಕ ಸಮಾನತೆಯ ಮತ್ತು ದಾಸೋಹದ ಸಾಧನವನ್ನಾಗಿ ರೂಪಿಸಿದವರು ಬಸವಾದಿ ಶರಣರು. ಈ ಪರಂಪರೆಯಲ್ಲಿ ನುಲಿಯ ಚಂದಯ್ಯನವರ ಸ್ಥಾನ ವಿಶಿಷ್ಟವಾದುದು. ಚಂದಯ್ಯ ಇಂದಿಗೂ ಜನಪದ ಹಾಡಿಕೆಯಲ್ಲಿ ಜೀವಂತ ಉಳಿದಿರುವುದು ಕಾಣುತ್ತೇವೆ.
ಕಾಯಕದಲ್ಲಿ ನಿಷ್ಠೆ, ದುಡಿಮೆಯಿಂದ ಬಂದ ಸಂಪತ್ತಿನಲ್ಲಿ ಪ್ರಾಮಾಣಿಕತೆ ಹಾಗೂ ಸಮಾಜಕ್ಕೆ ಮರಳಿ ನೀಡುವ ತ್ರಿವಿಧಿ ದಾಸೋಹ ಚಿಂತನೆಯನ್ನು ತಮ್ಮ ವಚನಗಳ ಮೂಲಕ ಚಂದಯ್ಯ ಗಟ್ಟಿಯಾಗಿ ಪ್ರತಿಪಾದಿಸಿದ್ದಾರೆ. ಅವರು ಬಸವಣ್ಣನವರ ಸಮಕಾಲೀನ ಹಿರಿಯ ಶರಣ. ವೃತ್ತಿಯಿಂದ ಕಾಯಕಜೀವಿಯಾಗಿದ್ದ ಅವರು ಮೆದೆಹುಲ್ಲನ್ನು ಕೊಯ್ದು ತಂದು ಹಗ್ಗ ಹೊಸೆಯುವುದು ಅವರ ಕಾಯಕ.
ಕಾಯಕಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದ ಚಂದಯ್ಯ ಹಗ್ಗವನ್ನು ಮಾರಾಟ ಮಾಡಿ ಬಂದ ಹಣದಿಂದ ಜಂಗಮ ದಾಸೋಹ ಮಾಡುತ್ತಿದ್ದರು. ಅವರ ಜನ್ಮಸ್ಥಳ ವಿಜಯಪುರ ಜಿಲ್ಲಾ ಕೇಂದ್ರ ಸಮೀಪದ ಶಿವಣಗಿ ಗ್ರಾಮ ಎಂದು ಹೇಳಲಾಗುತ್ತದೆ. ಈ ಕುರಿತು ಇನ್ನಷ್ಟು ಸಂಶೋಧನೆ ನಡೆಯಬೇಕಿದೆ. ʼಚಂದೇಶ್ವರಲಿಂಗʼ ಎಂಬ ಅಂಕಿತದಲ್ಲಿ ರಚಿಸಿರುವ ಚಂದಯ್ಯನವರ 48 ವಚನಗಳು ಲಭ್ಯವಾಗಿವೆ.
ಸತ್ಯ ಶುದ್ಧ ಕಾಯಕದಿಂದ ಬಂದ ದ್ರವ್ಯದಲ್ಲಿ ಚಿತ್ತ ವಿಚ್ಛಂದವಾಗದಿರಬೇಕು. ನೇಮದ ಕೂಲಿಯಂದಿನ ನಿತ್ಯ ನೇಮದಲ್ಲಿ ಸಂದಿಲ್ಲದಿರಬೇಕು. ನೇಮದ ಕೂಲಿಯ ಬಿಟ್ಟು ಹೇಮದಾಸೆಗೆ ಕಾಮಿಸಿ ದ್ರವ್ಯವ ಹಿಡಿದಡೆ ತಾ ಮಾಡುವ ಸೇವೆ ನಷ್ಟವಯ್ಯಾ. ನಿನ್ನಾಸೆಯ ವೇಷದ ಪಾಶಕ್ಕೆ ನೀನೆ ಹೋಗು. ನನಗೆ ನಮ್ಮ ಜಂಗಮದ ಪ್ರಸಾದದಾಗೆ ಚಂದೇಶ್ವರಲಿಂಗಕ್ಕೆ ಪ್ರಾಣವಯ್ಯಾ
ಚಂದಯ್ಯನವರ ವಚನಗಳಲ್ಲಿ ಕಾಯಕ ಎನ್ನುವುದು ಕೇವಲ ಉದ್ಯೋಗವಲ್ಲ; ಅದು ಬದುಕಿನ ಧರ್ಮ. ಯಾವ ಕಾಯಕವೂ ಮೇಲು-ಕೀಳಲ್ಲ. ಸತ್ಯ, ಪ್ರಾಮಾಣಿಕತೆಯಿಂದ ಕೈಗೊಂಡಿರುವ ಪ್ರತಿಯೊಂದು ದುಡಿಮೆಯೂ ಶ್ರೇಷ್ಠವೇ. ದುಡಿಮೆಯಿಂದ ಬಂದ ಫಲವನ್ನು ಗುರು-ಲಿಂಗ-ಜಂಗಮಕ್ಕೆ ಅರ್ಪಿಸುವಾಗ ಅದರಲ್ಲಿ ಭಾವಶುದ್ಧತೆ ಇರಬೇಕು ಎಂಬುದು ಅವರ ದೃಢ ನಿಲುವು.
‘ಗುರು-ಲಿಂಗ-ಜಂಗಮ’ ಎಂಬ ಪರಿಕಲ್ಪನೆಯೂ ಮಹತ್ವ ಪಡೆಯುತ್ತದೆ. ಗುರು ಎಂದರೆ ಅರಿರಿನ ಶಕ್ತಿ, ಲಿಂಗ ಎಂದರೆ ಪರಮತತ್ವದ ಸಂಕೇತ ಹಾಗೂ ಜಂಗಮ ಎಂದರೆ ಸಮಾಜ.ಕಾಯಕದಿಂದ ಗಳಿಸಿದ ಸಂಪತ್ತನ್ನು ಸಮಾಜದ ಒಳಿತಿಗೆ ಬಳಸುವುದೇ ನಿಜವಾದ ದಾಸೋಹ. ಕಾಯಕವಿಲ್ಲದೆ ಕೇವಲ ಪೂಜೆಯ ಮಾತುಗಳನ್ನಾಡುವುದನ್ನು ದೇವರು ಒಪ್ಪುವುದಿಲ್ಲ ಎಂಬುದು ಚಂದಯ್ಯನ ಗಟ್ಟಿ ನಿರ್ಧಾರ.
ಶರಣರ ದೃಷ್ಟಿಯಲ್ಲಿ ಭಕ್ತಿ ಎಂದರೆ ಆಡಂಬರವಲ್ಲ. ನಡೆ-ನುಡಿಯಲ್ಲಿ ಶುದ್ಧತೆ, ಕಾಯಕದಲ್ಲಿ ಪ್ರಾಮಾಣಿಕತೆ ಹಾಗೂ ಸರಳತೆ ಜೀವನ ಇರಬೇಕು. ದುಡಿಮೆಯಿಂದ ಬಂದ ಸಂಪತ್ತಿನ ಬಳಕೆಯಲ್ಲಿ ನ್ಯಾಯ ಇರಬೇಕು. ಈ ಮೂರರ ಸಮನ್ವಯವೇ ನಿಜವಾದ ಶಿವಪೂಜೆ.
ಚಂದಯ್ಯನವರ ಜೀವನಕ್ಕೆ ಸಂಬಂಧಿಸಿದಂತೆ ಹೇಳಲಾಗುವ ಒಂದು ಪ್ರಸಂಗ ಇದನ್ನು ಇನ್ನಷ್ಟು ಸ್ಪಷ್ಟಪಡಿಸುತ್ತದೆ. ಒಮ್ಮೆ ಅವರು ಕೊರಳಲ್ಲಿ ಕಟ್ಟಿಕೊಂಡಿದ್ದ ಲಿಂಗ ಕೆರೆದಡದಲ್ಲಿ ಮೆದೆಹುಲ್ಲು ಕೊಯ್ಯುವ ವೇಳೆ ನೀರಿಗೆ ಬಿದ್ದಿತಂತೆ. ಆದರೆ ಅವರು ಆ ಲಿಂಗವನ್ನು ಎತ್ತಿಕೊಳ್ಳಲು ಕಾಯಕವನ್ನು ನಿಲ್ಲಿಸಲಿಲ್ಲ. ಲಿಂಗ ಎತ್ತಿಕೊಳ್ಳಲಿಲ್ಲ. ಹುಲ್ಲಿನ ಹೊರೆ ಹೊತ್ತು ತಮ್ಮ ಕೆಲಸ ಮುಂದುವರಿಸಿದರು. ಇದರ ಹಿಂದಿರುವ ಸಂದೇಶ ಬಹಳ ಆಳವಾದುದು. ಕಾಯಕದಲ್ಲಿ ದೇವರನ್ನು ಕಂಡವರಿಗೆ ಕೊರಳಲ್ಲಿರುವ ಲಿಂಗ ಕೇವಲ ಸಂಕೇತ; ಕಾಯಕವೇ ಬದುಕಿನ ನಿಜವಾದ ಆರಾಧನೆ. ʼಕಾಯಕವೇ ಕೈಲಾಸʼ ಎಂಬ ಪ್ರಸಿದ್ಧ ನುಡಿಗಟ್ಟು ನುಲಿಯ ಚಂದಯ್ಯನವರಿಗೆ ಹೋಲುವಂತಿದೆ.
ಚಂದಯ್ಯನವರ ವಚನಗಳಲ್ಲಿ ಲಿಂಗಕ್ಕಿಂತ ಕಾಯಕವೇ ಶ್ರೇಷ್ಠʼ ಎಂಬ ಅರ್ಥ ಬಹುವಾಗಿ ವ್ಯಕ್ತವಾಗುತ್ತದೆ. ಆದರೆ ಇದನ್ನು ದೇವರ ನಿರಾಕರಣೆಯಾಗಿ ನೋಡಬಾರದು. ಬದಲಿಗೆ, ದೇವರನ್ನು ಕಾಯಕದಿಂದ ಬೇರ್ಪಡಿಸಬಾರದು ಎಂಬ ಶರಣರ ತತ್ವದ ಭಾಗವಾಗಿ ನೋಡಬೇಕು. ಕಾಯಕದಲ್ಲಿ ಪ್ರಾಮಾಣಿಕತೆ ಇಲ್ಲದೆ ಮಾಡುವ ಪೂಜೆ, ದಾಸೋಹ ಅಥವಾ ಧಾರ್ಮಿಕ ಆಚರಣೆಗಳಿಗೆ ಅರ್ಥವಿಲ್ಲ ಎಂಬುದೇ ಕಾಯಕಜೀವಿ ಚಂದಯ್ಯನವರ ಸಂದೇಶ.
ಚಂದಯ್ಯ ಮತ್ತೊಂದು ಮಹತ್ವದ ನಿಲುವು ಎಂದರೆ ಅಧಿಕ ಹಣದ ದುರಾಸೆಯ ವಿರೋಧ. ಸತ್ಯಶುದ್ಧ ಕಾಯಕದಿಂದ ಬಂದ ದ್ರವ್ಯದಲ್ಲಿ ಚಿತ್ತ ವಿಚಲಿತವಾಗಬಾರದು. ನಿಗದಿತ ಕೂಲಿಯನ್ನು ಬಿಟ್ಟು ಹೆಚ್ಚಿನ ಹಣದ ಆಸೆಯಿಂದ ನಿಯಮ ಮೀರಿ ಸಂಪಾದಿಸಿದರೆ ಆ ಸೇವೆಯೇ ನಷ್ಟವಾಗುತ್ತದೆ ಎಂದು ಎಚ್ಚರಿಸುತ್ತಾರೆ. ಯಾವುದೇ ವಸ್ತುವಿನ ನಿಗದಿತ ಬೆಲೆಗಿಂತ ಹೆಚ್ಚಿನ ಹಣಕ್ಕೆ ಮಾರಾಟ ಮಾಡುವುದು, ಜನರ ಅನಿವಾರ್ಯತೆ ದುರುಪಯೋಗಪಡಿಸಿಕೊಳ್ಳುವುದು, ಅನ್ಯಾಯದ ಮೂಲಕ ಹಣ ಗಳಿಸುವುದು. ಇವೆಲ್ಲವೂ ಕಾಯಕದ ಶುದ್ಧತೆಯನ್ನು ಹಾಳುಮಾಡುವ ಸಂಗತಿಗಳಾಗುತ್ತವೆ. ಅದು ನಮ್ಮ ಸ್ವಾರ್ಥ ಎತ್ತಿ ತೋರುತ್ತದೆ ಎನ್ನುತ್ತಾರೆ.
ಪ್ರಸ್ತುತ ಸಮಾಜಕ್ಕೆ ಈ ಸಂದೇಶ ಇನ್ನಷ್ಟು ಪ್ರಸ್ತುತವಾಗುತ್ತದೆ. ದುಡಿಮೆಯ ಮೌಲ್ಯಕ್ಕಿಂತ ದುರಾಸೆಯ ಮೌಲ್ಯ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಅನೇಕರು ಸುಲಭವಾಗಿ ಹಣ ಗಳಿಸುವ ಮನೋಭಾವ ಮೈಗೂಡಿಸಿಕೊಂಡಿದ್ದಾರೆ. ಇದು ಅಸಮಾನತೆ ಮತ್ತು ವಂಚನೆಗಳಿಗೆ ಕಾರಣವಾಗುತ್ತಿದೆ. ಅದಕ್ಕೆ ಚಂದಯ್ಯನವರ ‘ನೇಮದ ಕೂಲಿ, ಶುದ್ಧ ಕಾಯಕ’ದ ಸಂದೇಶ ನಮಗೆ ಆತ್ಮಪರಿಶೀಲನೆ ದಾರಿ ತೋರಿಸುತ್ತದೆ.
ಚಂದಯ್ಯನವರಿಗೆ ಜಂಗಮ ದಾಸೋಹ ಅತ್ಯಂತ ಮಹತ್ವದ್ದು. ಜಂಗಮ ಎಂದರೆ ಕೇವಲ ವ್ಯಕ್ತಿಯಲ್ಲ; ಶರಣ ಪರಂಪರೆಯಲ್ಲಿ ಅದು ಸಮಾಜದ ಚಲನಶೀಲತೆಯ ಸಂಕೇತ. ಜಂಗಮ ಸೇವೆಯನ್ನು ಸಮಾಜ ಸೇವೆ ಎಂದು ಅರ್ಥೈಸಬಹುದು. ಸಮಾಜ ಸೇವೆಯಲ್ಲಿ ದುರಾಸೆ, ಪ್ರತಿಫಲದ ನಿರೀಕ್ಷೆ ಮತ್ತು ಸ್ವಾರ್ಥ ಇರಬಾರದು. ಕಾಯಕದಿಂದ ಬಂದ ಫಲವನ್ನು ಸಮಾಜದ ಅಭ್ಯುದಯಕ್ಕಾಗಿ ವಿನಿಯೋಗಿಸುವುದೇ ನಿಜವಾದ ದಾಸೋಹ.
ʼಲಿಂಗವೆಂಬುದು ಗುರುವಿನ ಹಂಗು, ಗುರುವೆಂಬುದು ಲಿಂಗದ ಹಂಗು. ಉಭಯಕ್ಕತೀತ ಜಂಗಮಲಿಂಗ ದಾಸೋಹʼ ಎಂಬ ಚಂದಯ್ಯನವರ ನಿಲುವು ದಾಸೋಹಕ್ಕೆ ಅವರು ನೀಡಿದ ಮಹತ್ವವನ್ನು ತೋರಿಸುತ್ತದೆ. ಗುರು ಮತ್ತು ಲಿಂಗದ ಆರಾಧನೆಯೊಂದಿಗೆ ಸಮಾಜದ ಸೇವೆಯು ಸಮಾನವಾಗಿ, ಕೆಲವೊಮ್ಮೆ ಅದಕ್ಕಿಂತಲೂ ಉನ್ನತವಾಗಿ ಕಾಣುವ ದೃಷ್ಟಿ ಇಲ್ಲಿ ವ್ಯಕ್ತವಾಗುತ್ತದೆ. ಸಮಾಜದ ಒಳಿತಿಲ್ಲದ ಭಕ್ತಿ ಅಪೂರ್ಣ ಎಂಬ ಸಂದೇಶ ಇದರಲ್ಲಿ ಅಡಗಿದೆ.
ಸಂಸಾರವೆಂಬ ಸಾಗರದ ಮಧ್ಯದೊಳಗೆ ಬೆಳೆದ ಹೊಡಕೆಯಹುಲ್ಲ ಕೊಯ್ದು ಮತ್ತಮಾ ಕಣ್ಣ ತೆಗೆದು, ಕಣ್ಣಿಯ ಮಾಡಿ ಇಹಪರವೆಂಬ ಉಭಯದ ಗಂಟನಿಕ್ಕಿ ತುದಿಯಲ್ಲಿ ಮಾಟಕೂಟವೆಂಬ ಮನದ ಕುಣಿಕೆಯಲ್ಲಿ ಕಾಯಕವಾಯಿತ್ತು. ಇದು ಕಾರಣ ಚಂದೇಶ್ವರಲಿಂಗವೆಂಬ ಭಾವವೆನಗಿಲ್ಲ
ನುಲಿಯ ಚಂದಯ್ಯನವರ ವಚನಗಳಲ್ಲಿ ಕಾಯಕದ ರೂಪಕ ವಿಶಿಷ್ಟವಾಗಿದೆ. ಹಗ್ಗ ಹೊಸೆಯುವ ತಮ್ಮ ವೃತ್ತಿ ಪರಿಭಾಷೆಯನ್ನು ಆಧ್ಯಾತ್ಮಿಕ ಅನುಭವ ರೀತಿಯಲ್ಲಿ ವಿವರಿಸಲು ಬಳಸಿದ್ದಾರೆ. ಸಂಸಾರ ಸಾಗರಕ್ಕೆ ಹೋಲಿಸಿ, ಅದರ ಮಧ್ಯದಲ್ಲಿ ಬೆಳೆದ ಮೆದೆಹುಲ್ಲನ್ನು ಕೊಯ್ದು, ಅದನ್ನು ಸೀಳಿ ಹಗ್ಗ ಮಾಡುವ ಚಿತ್ರಣದ ಮೂಲಕ ಬದುಕಿನ ಬಂಧನ ವಿವರಿಸುತ್ತಾರೆ. ಇಹ-ಪರ ಎಂಬ ಎರಡು ಗಂಟುಗಳನ್ನು ಹಾಕಿ, ಅದರ ತುದಿಯಲ್ಲಿ ಲಿಂಗಸಾಮರಸ್ಯದ ಮನದ ಕುಣಿಕೆಯನ್ನು ಕಟ್ಟುವ ರೂಪಕದಲ್ಲಿ ತಮ್ಮ ಕಾಯಕವನ್ನೇ ತತ್ವಚಿಂತನೆಯಾಗಿ ಪರಿವರ್ತಿಸುತ್ತಾರೆ. ಬದುಕಿನ ಅಹಂಕಾರ, ಐಹಿಕ ಆಕರ್ಷಣೆಗಳನ್ನು ಮುರಿಯುವ ಕುರಿತು ವಿಶ್ಲೇಷಿಸುತ್ತಾರೆ.
ವಚನ ಚಳವಳಿಯಲ್ಲಿ ಭಾಗಿಯಾದ ಸುಮಾರು 770 ಅಮರಗಣಗಳಿಗೆ ಕಾಯಕವೇ ಮೂಲ ಪ್ರೇರಣೆಯಾಗಿತ್ತು. ಬಸವಣ್ಣನವರು ಕಾಯಕ ಚಳವಳಿ ಮೂಲಕವೇ ಸಮ ಸಮಾಜ ರೂಪಿಸುವ ಕನಸು ಹೊತ್ತು ಶ್ರಮಿಸಿದರು. ಇದು ಬಸವಾದಿ ಶರಣರ ವಚನಗಳ ವಿಶಿಷ್ಟ ಗುಣ. ಪ್ರತಿಯೊಬ್ಬ ವಚನಕಾರ ತಮ್ಮ ವೃತ್ತಿ ಕೀಳಾಗಿ ನೋಡಲಿಲ್ಲ. ಬದಲಿಗೆ ತಮ್ಮ ಕಾಯಕದ ಅನುಭವವನ್ನೇ ಜೀವನದರ್ಶನವಾಗಿ ರೂಪಿಸಿದರು. ಅದರ ಫಲವಾಗಿ ಒಕ್ಕಲಿಗ ಮುದ್ದಣಗೆ ಹೊಲ, ಗುಂಡಯ್ಯನಿಗೆ ಮಣ್ಣು, ಮಾಚಿದೇವರಿಗೆ ಬಟ್ಟೆ, ಚಂದಯ್ಯನಿಗೆ ಹಗ್ಗ, ವೀರಗೊಲ್ಲಾಳನಿಗೆ ಕುರಿ ಇವೆಲ್ಲವೂ ಕೇವಲ ವೃತ್ತಿಯ ಸಾಧನಗಳಲ್ಲ; ಬದುಕಿನ ತತ್ವವನ್ನು ಅರಿಯುವ ಮಾಧ್ಯಮಗಳಾದವು.
ಕಂದಿಸಿ ಕುಂದಿಸಿ ಬಂಧಿಸಿ ಕಂಡವರ ಬೇಡಿತಂದು ಜಂಗಮಕ್ಕೆ ಮಾಡಿದೆನೆಂಬ ದಂದುಗದೋಗರ ಲಿಂಗಕ್ಕೆ ನೈವೇದ್ಯ ಸಲ್ಲ. ತನು ಕರಗಿ ಮನ ಬಳಲಿ ಬಂದ ಚರದ ಅನುವರಿತು ಸಂದಿಲ್ಲದೆ ಸಂಶಯವಿಲ್ಲದೆ ಜಂಗಮಲಿಂಗಕ್ಕೆ ದಾಸೋಹವ ಮಾಡುವುದೆ ಮಾಟ. ಕಾಶಿಯಕಾಯಿ ಕಾಡಿನ ಸೊಪ್ಪಾಯಿತ್ತಾದಡೂ ಕಾಯಕದಿಂದ ಬಂದುದು ಲಿಂಗಾರ್ಪಿತ. ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆ ನೈವೇದ್ಯ ಸಂದಿತ್ತು
ಚಂದಯ್ಯನವರ ಮತ್ತೊಂದು ವಚನದಲ್ಲಿ ದಾಸೋಹದ ಶುದ್ಧತೆ ಬಗ್ಗೆ ಅತ್ಯಂತ ಕಠಿಣವಾದ ಎಚ್ಚರಿಕೆ. ಮತ್ತೊಬ್ಬರನ್ನು ನೋಯಿಸಿ, ಮೋಸ ಮಾಡಿ, ಕಾಡಿಬೇಡಿ ಅನ್ಯಾಯದ ಮೂಲಕ ಹಣ ಸಂಗ್ರಹಿಸಿ ಅದನ್ನು ಜಂಗಮಕ್ಕೆ ಅರ್ಪಿಸಿದರೆ ಅದು ದೇವರಿಗೆ ನೈವೇದ್ಯವಾಗುವುದಿಲ್ಲ. ಕಾಯಕವಿಲ್ಲದೆ ಬಂದ ಹಣದಿಂದ ಮಾಡುವ ದಾಸೋಹ ಶ್ರೇಷ್ಠ ಎನಿಸಿಕೊಳ್ಳುವುದಿಲ್ಲ. ದೇಹ ದಂಡಿಸಿ, ಮನಸ್ಸು ಬಳಲಿಸಿ, ಪ್ರಾಮಾಣಿಕ ಕಾಯಕದಿಂದ ಬಂದ ಆದಾಯವನ್ನು ದಾಸೋಹಕ್ಕೆ ಬಳಸಿದಾಗ ಮಾತ್ರ ಅದು ನಿಜವಾದ ಅರ್ಪಣೆಯಾಗುತ್ತದೆ ಎಂದು ಹೇಳುತ್ತಾರೆ.
ʼಕಾಡಿನ ಸೊಪ್ಪಾದರೂ ಕಾಯಕದಿಂದ ಬಂದಿದ್ದರೆ ಲಿಂಗಾರ್ಪಿತʼ ಎಂಬ ಭಾವನೆ ಇಲ್ಲಿ ಗಮನಾರ್ಹ. ಅರ್ಪಿಸುವ ವಸ್ತುವಿನ ಬೆಲೆ ಮುಖ್ಯವಲ್ಲ; ಅದು ಹೇಗೆ ಸಂಪಾದಿತವಾಯಿತು ಎಂಬುದೇ ಮುಖ್ಯ. ಬೆವರಿನಿಂದ ಬಂದ ಒಂದು ತುಂಡು ಅನ್ನವೂ ಪವಿತ್ರ; ಅನ್ಯಾಯದಿಂದ ಬಂದ ಅಪಾರ ಸಂಪತ್ತು ಅಪವಿತ್ರ ಎಂಬ ಶರಣರ ಮೌಲ್ಯಪ್ರಜ್ಞೆ ದುಡಿಮೆಗೆ ನೀಡಿದ ಘನತೆಯೂ ಇದೆ.
ಇದನ್ನೂ ಓದಿ : ವಚನ ಕಲ್ಯಾಣ | ನುಡಿದರೆ ಗುರುವಾಗಿ ನುಡಿಯಬೇಕು!
ಕಾಯಕ ಎಂಬುದು ಶರಣ ಚಳವಳಿಯ ಸಾಮಾಜಿಕ ಕ್ರಾಂತಿಯ ಮೂಲಭೂತ ತತ್ವವೂ ಹೌದು. ಅಂದಿನ ವರ್ಣವ್ಯವಸ್ಥೆಯಿಂದ ಶೋಷಣೆಗೆ ಒಳಗಾಗಿದ್ದ ಕಾಯಕಜೀವಿಗಳಿಗೆ ಬಸವಣ್ಣನವರ ನೇತೃತ್ವದ ಚಳವಳಿ ಹೊಸ ಆತ್ಮಗೌರವ ನೀಡಿತು. ಜಾತಿ, ವರ್ಗ, ವರ್ಣದ ಭೇದಗಳನ್ನು ಮೀರಿ ಶರಣಸಂಕುಲದಲ್ಲಿ ಎಲ್ಲರನ್ನೂ ‘ಇವನಮ್ಮವ’ ಎಂಬ ಭಾವದಿಂದ ಕಾಣುವ ಮಾನವೀಯತೆ ಬೆಳೆಯಿತು. ಅವರು ಜಾತಿ ಆಧಾರಿತ ಕಾಯಕದ ಅವಹೇಳನವನ್ನು ಪ್ರಶ್ನಿಸಿದರು; ಆದರೆ ಕಾಯಕವನ್ನು ತೊರೆದು ಬೇರೆ ಬದುಕನ್ನು ಆರಿಸಿಕೊಳ್ಳುವಂತೆ ಹೇಳಲಿಲ್ಲ. ತಮ್ಮ ತಮ್ಮ ವೃತ್ತಿಯಲ್ಲಿಯೇ ನಿಷ್ಠೆಯಿಂದ ದುಡಿಯುತ್ತಾ, ಆ ದುಡಿಮೆಯನ್ನು ಸಮಾಜದ ಒಳಿತಿಗೆ ಬಳಸುವ ಮಾರ್ಗವನ್ನು ಕಾಯಕ ಶರಣರು ತೋರಿಸಿ ಕೊಟ್ಟರು.
ಬಸವಾದಿ ಶರಣರ ಚಿಂತನೆಯ ವಿಶೇಷತೆಯೇ ಸರಳತೆ, ವೈಚಾರಿಕತೆ ಮತ್ತು ಅನುಭವಾಧಾರಿತ ಜೀವನದರ್ಶನ. ಅವರು ಶ್ರಮಕ್ಕೆ ಗೌರವ ನೀಡಿದರು. ದೈಹಿಕ ಶ್ರಮದ ಮೂಲಕ ಮನಸ್ಸಿನ ಶುದ್ಧೀಕರಣ, ವ್ಯಕ್ತಿತ್ವದ ವಿಕಸನ ಮತ್ತು ಸಮಾಜದ ಅಭ್ಯುದಯ ಸಾಧ್ಯವೆಂದು ತೋರಿಸಿದರು. ‘ಬೆವರು ಸುರಿಸದೆ ಬಂದ ಫಲಕ್ಕೆ ಆಸೆ ಪಡಬೇಡ’ ಎಂಬ ಶರಣರ ನಿಲುವು ಇಂದಿನ ಪೀಳಿಗೆಗೂ ಬಹಳ ದೊಡ್ಡ ಪಾಠವಾಗಿದೆ.
ವರ್ತಮಾನ ಸಮಾಜದಲ್ಲಿ ಉದ್ಯೋಗದ ಸ್ವರೂಪ ಬದಲಾಗಿದೆ. ತಂತ್ರಜ್ಞಾನ ಬೆಳೆದಿದೆ. ಹಣ ಸಂಪಾದಿಸುವ ಮಾರ್ಗಗಳು ಹೆಚ್ಚಿವೆ. ಆದರೆ ಕಾಯಕದ ಮೌಲ್ಯ, ಪ್ರಾಮಾಣಿಕ ದುಡಿಮೆ, ನ್ಯಾಯಯುತ ಸಂಪಾದನೆ ಮತ್ತು ಸಮಾಜದ ಮೇಲಿನ ಹೊಣೆಗಾರಿಕೆ ಎಂಬ ಪ್ರಶ್ನೆಗಳು ಇನ್ನೂ ನಮ್ಮ ಮುಂದೆ ನಿಂತಿವೆ. ನುಲಿಯ ಚಂದಯ್ಯನವರ ವಚನಗಳು ಕೇವಲ ಅಂದಿನ ಕಾಲಘಟ್ಟಕ್ಕೆ ಧಾರ್ಮಿಕ ಸಾಹಿತ್ಯವಾಗಿ ಉಳಿಯುವುದಿಲ್ಲ; ಅವು ಬದುಕಿನ ನೈತಿಕ ಸಂಹಿತೆಯಾಗಿ ಕಾಣಿಸುತ್ತವೆ.
ಇದನ್ನೂ ಓದಿ : ವಚನ ಕಲ್ಯಾಣ | ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ
ಕಾಯಕದಲ್ಲಿ ನಿಷ್ಠೆ ಇರಲಿ, ಸಂಪಾದನೆಯಲ್ಲಿ ಶುದ್ಧತೆ ಇರಲಿ, ದಾಸೋಹದಲ್ಲಿ ಸ್ವಾರ್ಥ ಇರದಿರಲಿ, ಭಕ್ತಿಯಲ್ಲಿ ಆಡಂಬರ ಇರದಿರಲಿ ಎಂಬುದು ಚಂದಯ್ಯನವರ ಬದುಕು ಮತ್ತು ವಚನಗಳ ಸಾರ. ಕಾಯಕದಿಂದ ದೇವರನ್ನು ಕಾಣಬೇಕು. ಕಾಯಕದ ಫಲವನ್ನು ಸಮಾಜಕ್ಕೆ ಅರ್ಪಿಸಬೇಕು. ಆ ಕಾಯಕದ ಹಿಂದೆ ಭಾವಶುದ್ಧತೆ ಇರಬೇಕು. ಆದ್ದರಿಂದಲೇ ಅವರ ಚಿಂತನೆ ಇಂದಿಗೂ ಅರ್ಥಪೂರ್ಣ. ಕಾಯಕ ಕೇವಲ ಕೈ ಕೆಲಸವಲ್ಲ; ಅದು ಮನಸ್ಸಿನ ಶುದ್ಧೀಕರಣ. ದಾಸೋಹ ಕೇವಲ ಕೊಡುವ ಕ್ರಿಯೆಯಲ್ಲ; ಅದು ಸಮಾಜದ ಮೇಲಿನ ಹೊಣೆಗಾರಿಕೆ. ಭಕ್ತಿ ಕೇವಲ ಮಾತಲ್ಲ; ಅದು ನಡೆ-ನುಡಿಯಲ್ಲಿ ವ್ಯಕ್ತವಾಗುವ ಸತ್ಯಶುದ್ಧ ಬದುಕು.
(ಆ.12ರಿಂದ ಶ್ರಾವಣ ಮಾಸ ಆರಂಭಗೊಂಡಿದೆ. ತನ್ನಿಮಿತ್ತ ಪ್ರತಿದಿನ ಬಸವಾದಿ ಶಿವಶರಣರ ವಚನ ಅನುಭಾವವನ್ನು “ವಚನ ಕಲ್ಯಾಣ” ಹೆಸರಿನಲ್ಲಿ ಸರಣಿ ಲೇಖನ ʼಈದಿನ ಡಾಟ್ ಕಾಮ್ʼನಲ್ಲಿ ಪ್ರಕಟವಾಗಲಿದೆ. ಓದಿ…ಓದಿಸಿ)


ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.



