ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನವಾದ ನವೆಂಬರ್ 14ರಂದು ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಗ್ರಾಮ ಪಂಚಾಯತಿಯ ಕಾರ್ಯವೈಖರಿ ಪರಿಚಯಿಸುವ ಉದ್ದೇಶದಿಂದ ನ.13ರಿಂದ 30ರವರೆಗೆ ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಕಡ್ಡಾಯವಾಗಿ ಮಕ್ಕಳ ಗ್ರಾಮಸಭೆ ಆಯೋಜಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಸೂಚಿಸಿದ್ದಾರೆ.
ಈ ಸಂಬಂಧ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಲಿಖಿತ ಸೂಚನೆ ನೀಡಿರುವ ಸಚಿವರು, 2006ರಲ್ಲಿಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಮಕ್ಕಳ ಗ್ರಾಮಸಭೆ ನಡೆಸುವಂತೆ ಸುತ್ತೋಲೆ ಹೊರಡಿಸಲಾಗಿತ್ತು. ಆದರೆ, ಕೆಲವು ಗ್ರಾಮ ಪಂಚಾಯತಿಗಳಲ್ಲಿ ಮಾತ್ರ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಈ ವರ್ಷದಿಂದ ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಲ್ಲೂ ಮಕ್ಕಳ ಗ್ರಾಮಸಭೆ ಕಡ್ಡಾಯವಾಗಿ ಆಯೋಜಿಸಬೇಕು. ಈ ಮೂಲಕ ಮಕ್ಕಳಿಗೆ ಗ್ರಾಮ ಪಂಚಾಯತಿಯ ಕಾರ್ಯವೈಖರಿ ಪರಿಚಯಿಸುವುದರ ಜೊತೆಗೆ ಮಕ್ಕಳ ಹಕ್ಕುಗಳು, ಪೌಷ್ಟಿಕಾಂಶ, ಶಿಕ್ಷಣ ಮತ್ತು ಆರೋಗ್ಯದ ಕುರಿತು ಮಾಹಿತಿ ಒದಗಿಸಬೇಕು ಎಂದು ಸೂಚಿಸಿದ್ದಾರೆ.
ಬೆಂಗಳೂರಿನ ಕಾನ್ವೆಂಟ್ ಶಾಲೆಗಳಲ್ಲಿ ಓದುತ್ತಿರುವ ಅನೇಕ ಮಕ್ಕಳಿಗೆ ಹಳ್ಳಿಯ ಜೀವನದ ಪರಿಚಯವೇ ಇಲ್ಲದಿರುವುದನ್ನು ಉಲ್ಲೇಖಿಸಿರುವ ಸಚಿವರು, ಬೆಂಗಳೂರು ಜಕ್ಕೂರಿನ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ಆವರಣದಲ್ಲಿರುವ ಪಾರಂಪರಿಕ ಮಾದರಿ ಗ್ರಾಮದಲ್ಲಿ ನವೆಂಬರ್ 13ರಿಂದ 30ರವರೆಗೆ ಮಕ್ಕಳ ಗ್ರಾಮಸಭೆ ಆಯೋಜಿಸಲು ಸೂಚಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಮಕ್ಕಳು ಪಾಲ್ಗೊಳ್ಳಲು ಅವಕಾಶ ಕಲ್ಪಿಸುವ ಮೂಲಕ ಗ್ರಾಮೀಣ ಜೀವನ, ಗ್ರಾಮ ಪಂಚಾಯತಿಯ ಕಾರ್ಯವೈಖರಿ ಹಾಗೂ ಗ್ರಾಮೀಣ ಅಭಿವೃದ್ಧಿ ಚಟುವಟಿಕೆಗಳ ಕುರಿತು ಅರಿವು ಮೂಡಿಸಬೇಕು. ಜಾಗತಿಕ ತಾಪಮಾನ ಏರಿಕೆಯ ಪ್ರಸಕ್ತ ಸಂದರ್ಭದಲ್ಲಿ ಮುಂದಿನ ಪ್ರಜೆಗಳಾದ ಮಕ್ಕಳಿಗೆ ನೈರ್ಮಲ್ಯ, ಜಲ ಸಂರಕ್ಷಣೆ, ಕೆರೆಗಳ ಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣೆಯ ಮಹತ್ವವನ್ನು ಮಕ್ಕಳ ಗ್ರಾಮಸಭೆಯ ಮೂಲಕ ತಿಳಿಸಬೇಕು ಎಂದು ಈಶ್ವರ ಖಂಡ್ರೆ ಸೂಚಿಸಿದ್ದಾರೆ.

ಮಕ್ಕಳಲ್ಲಿ ಸಾಮಾಜಿಕ ಜವಾಬ್ದಾರಿ ಹಾಗೂ ಪರಿಸರದ ಬಗ್ಗೆ ಕಾಳಜಿ ಬೆಳೆಸುವ ನಿಟ್ಟಿನಲ್ಲಿ ಮಕ್ಕಳ ಗ್ರಾಮಸಭೆಗಳು ಪರಿಣಾಮಕಾರಿಯಾಗಿ ನಡೆಯಬೇಕು ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಕೃಷಿ ರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನ




