ಬಿಜೆಪಿ ಸರ್ಕಾರವು ಬಡವರ ಉದ್ಯೋಗ ಮತ್ತು ಜೇವನೋಪಾಯದ ಯೋಜನೆಯಲ್ಲಿ ಬೋಗಸ್ ಹಾಜರಾತಿ ಮೂಲಕ ಕೋಟ್ಯಂತರ ರೂಪಾಯಿ ಲೂಟಿಗೆ ಅವಕಾಶ ಮಾಡಿಕೊಡುತ್ತಿದೆ. ರಾಮನ ಹೆಸರಿನಲ್ಲಿ ಇನ್ನೆಷ್ಟು ಪಾಪ ಮಾಡುತ್ತೀರಿ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಗ್ರಾಮೀಣ ಭಾಗದ ಉದ್ಯೋಗ ಖಾತ್ರಿ ಯೋಜನೆಗೆ ನೂತನವಾಗಿ ಹೆಸರಿಡಲಾದ ವಿಬಿ-ಜಿ ರಾಮ್ ಜಿ ಅಡಿಯಲ್ಲಿ ತಂತ್ರಜ್ಞಾನ ಮತ್ತು ಮೊಬೈಲ್ ಆಪ್‌ಗಳನ್ನು ದುರ್ಬಳಕೆ ಮಾಡಿಕೊಂಡು ನಕಲಿ ಹಾಜರಾತಿ ದಾಖಲಿಸುವ ವ್ಯವಸ್ಥಿತ ದಂಧೆ ನಡೆಯುತ್ತಿದೆ ಎಂದು ಕಾಂಗ್ರೆಸ್, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಈ ಕುರಿತು ಸೋಷಿಯಲ್ ಮೀಡಿಯಾ ಎಕ್ಸ್ (ಟ್ವಿಟರ್) ನಲ್ಲಿ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಪರ್ಕ) ಜೈರಾಮ್ ರಮೇಶ್, ಬಿಜೆಪಿಯ ನೀತಿಗಳು ಬಡವರ ವಿರುದ್ಧವಾಗಿವೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ‘ಗ್ರಾಮೀಣ ಕಾರ್ಮಿಕರ ಕೂಲಿ ಕಳವು’: ವಿಬಿ-ಜಿ ರಾಮ್ ಜಿ ಕಾಯ್ದೆ ವಿರುದ್ಧ ಕಾಂಗ್ರೆಸ್ ತೀವ್ರ ಆಕ್ರೋಶ
“ಬಿಜೆಪಿಯ ರಾಜಕೀಯದಲ್ಲಿ ರಾಮನ ಬಗ್ಗೆ ನಿಜವಾದ ಭಕ್ತಿಯೂ ಇಲ್ಲ, ಬಡವರ ಬಗ್ಗೆ ಕರುಣೆಯೂ ಇಲ್ಲ. ರಾಮನ ಹೆಸರು ಹೇಳಿಕೊಂಡು ಅಧಿಕಾರ ನಡೆಸುವುದು ಮತ್ತು ಬಡವರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುವುದೇ ಬಿಜೆಪಿಯ ಅಸಲಿ ಗುಣ, ಚಾರಿತ್ರ್ಯವಾಗಿದೆ. ರಾಮನ ಹೆಸರಿನಲ್ಲಿ ಬಿಜೆಪಿ ಇನ್ನೂ ಎಷ್ಟು ಪಾಪಗಳನ್ನು ಮಾಡುತ್ತದೆ?” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊಬೈಲ್ ಆಧಾರಿತ ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಮ್ (NMMS) ಆಪ್‌ಗೆ ಪ್ರತಿಯಾಗಿ ನಕಲಿ/ಕ್ಲೋನ್ ಆಪ್ (Clone App) ಬಳಕೆ ಮಾಡಿಕೊಂಡು ಕಾಮಗಾರಿ ಸ್ಥಳದಲ್ಲಿ ಇಲ್ಲದ ಕಾರ್ಮಿಕರ ಹೆಸರಿನಲ್ಲೂ ಡಿಜಿಟಲ್ ಹಾಜರಾತಿ ಹಾಕಿ ಹಣ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಇಂತಹ ನಕಲಿ ಹಾಜರಾತಿ ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಮೂಲಕ ಕೇಂದ್ರ ಸರ್ಕಾರವು ಗ್ರಾಮೀಣ ಕೂಲಿಯನ್ನು ಲೂಟಿ ಮಾಡುವ ವ್ಯವಸ್ಥೆಗೆ ದಾರಿ ಮಾಡಿಕೊಟ್ಟಿದೆ ಎಂದು ದೂರಲಾಗಿದೆ.
ಬಡವರ ಹಕ್ಕಿನ ಹಣವನ್ನು ಮಧ್ಯವರ್ತಿಗಳು ಮತ್ತು ಬೋಗಸ್ ವ್ಯವಸ್ಥೆಯ ಮೂಲಕ ಸರ್ಕಾರಿ ಪ್ರಾಯೋಜಿತವಾಗಿ ದೋಚಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಕರೆದಿದ್ದು, ಯೋಜನೆಯಲ್ಲಾಗಿರುವ ಈ ಎಲ್ಲಾ ನಕಲಿ ಹಾಜರಾತಿ ಮತ್ತು ಭ್ರಷ್ಟಾಚಾರದ ಕುರಿತು ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಸರ್ಕಾರವು ಎಷ್ಟೇ ತಂತ್ರಜ್ಞಾನ ಆಧರಿತ ತಪಾಸಣೆ ಎಂದು ಪ್ರತಿಪಾದಿಸಿದರೂ, ವಾಸ್ತವದಲ್ಲಿ ಬಡ ಗ್ರಾಮೀಣ ಕೂಲಿಕಾರರಿಗೆ ತಲುಪಬೇಕಾದ ಹಣ ದಾರಿತಪ್ಪುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದು ವಿರೋಧ ಪಕ್ಷಗಳು ದೂರಿದೆ.




