ಗಾಂಧಿ ಹತ್ಯೆಯ ಕುರಿತು ಅಡ್ಡಂಡ ಕಾರ್ಯಪ್ಪ ರಚಿಸಿರುವ ನಾಟಕ ಬೆಂಗಳೂರಿನಲ್ಲಿ ತೀವ್ರ ವಿವಾದ ಸೃಷ್ಟಿಸಿದೆ. ನಾಟಕದಲ್ಲಿ ಗಾಂಧೀಜಿಯನ್ನು ದೇಶವಿರೋಧಿಯಂತೆ ಬಿಂಬಿಸಿ, ಅವರ ಹಂತಕ ನಾಥುರಾಮ್ ಗೋಡ್ಸೆಯನ್ನು ಸಮರ್ಥಿಸುವ ಪ್ರಯತ್ನ ನಡೆದಿದೆ. ಗಾಂಧಿ ಹತ್ಯೆಯ ಕುರಿತು ಮಾತನಾಡುವಾಗ ಸ್ವತಂತ್ರ ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲರು 1948ರಲ್ಲಿ ಆರ್ಎಸ್ಎಸ್ ವಿರುದ್ಧ ಹೇರಿದ್ದ ನಿಷೇಧ ಮತ್ತು ಸಂಘದ ನಾಯಕರ ವಿರುದ್ಧದ ಕ್ರಮವನ್ನು ಗಮನಿಸಲೇಬೇಕು.
ಮಹಾತ್ಮ ಗಾಂಧಿ ಹತ್ಯೆಯಾಗಿ 78 ವರ್ಷಗಳು ಕಳೆದಿವೆ. ಆದರೆ, ಅವರ ಹತ್ಯೆಯನ್ನು ಸಮರ್ಥಿಸುವ, ಹಂತಕ ನಾಥುರಾಮ್ ಗೋಡ್ಸೆಯನ್ನು ವೈಭವೀಕರಿಸುವ ಮತ್ತು ಗಾಂಧೀಜಿಯವರ ವಿರುದ್ಧ ದ್ವೇಷ ಹುಟ್ಟಿಸುವ ಪ್ರಯತ್ನಗಳ ಕುರಿತ ವಿವಾದಗಳು ಇಂದಿಗೂ ಮುಂದುವರಿದಿವೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿರುವ ಬೆಳವಣಿಗೆಗಳು ಈ ವಿವಾದವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿವೆ.
ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ರಚಿಸಿ ನಿರ್ದೇಶಿಸಿರುವ ‘ಗಾಂಧಿ ಹತ್ಯೆಯ ಸತ್ಯ’ ನಾಟಕವು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ನಾಟಕದಲ್ಲಿ ಗಾಂಧೀಜಿಯನ್ನು ದೇಶವಿರೋಧಿ, ಮುಸ್ಲಿಮರ ಪರವಾಗಿ ನಡೆದುಕೊಂಡ ನಾಯಕ ಎಂಬಂತೆ ಬಿಂಬಿಸಲಾಗಿದೆ ಮತ್ತು ಗೋಡ್ಸೆಯನ್ನು ಸಮರ್ಥಿಸುವ ಪ್ರಯತ್ನ ನಡೆದಿದೆ ಎಂಬ ಆರೋಪಗಳಿವೆ. ಹೀಗಿದ್ದರೂ, ಇದೇ ನಾಟಕವು ಅಕ್ಟೋಬರ್ 31ರಂದು ಬೆಂಗಳೂರಿನ ಬನಶಂಕರಿಯ ಸುಚಿತ್ರ ಸಾಂಸ್ಕೃತಿಕ ಅಕಾಡೆಮಿಯಲ್ಲಿ ಪ್ರದರ್ಶನಗೊಂಡಿದೆ. ಈ ವೇಳೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಕಾರ್ಯಪ್ಪ ಅವರ ಮುಖಕ್ಕೆ ಮಸಿ ಬಳಿದಿದ್ದಾರೆ. ಪ್ರತಿಭಟನಾಕಾರರು ಮತ್ತು ಕಾರ್ಯಪ್ಪ ಪರಸ್ಪರ ಪೊಲೀಸ್ ದೂರುಗಳನ್ನೂ ದಾಖಲಿಸಿದ್ದಾರೆ.
ನವೆಂಬರ್ 2ರ ಸೋಮವಾರವೂ ವಿವಾದ ಮುಂದುವರಿದಿದೆ. ಸುಚಿತ್ರ ಅಕಾಡೆಮಿ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಕಾರ್ಯಪ್ಪ, ತಮ್ಮ ನಾಟಕವನ್ನು ಸಮರ್ಥಿಸಿಕೊಂಡಿದ್ದಾರೆ. “ಇತಿಹಾಸ ಮತ್ತು ಪುಸ್ತಕಗಳಲ್ಲಿ ದಾಖಲಾಗಿರುವ ಸಂಗತಿಗಳನ್ನು ನಾಟಕದ ಮೂಲಕ ಪ್ರಸ್ತುತಪಡಿಸಿದ್ದೇನೆ; ಗೋಡ್ಸೆ ನ್ಯಾಯಾಲಯದಲ್ಲಿ ನೀಡಿದ ಹೇಳಿಕೆ ಹಾಗೂ ಗಾಂಧಿ ಹತ್ಯೆಗೆ ಸಂಬಂಧಿಸಿದ ವಿವರಗಳನ್ನು ಬಳಸಿಕೊಂಡಿದ್ದೇನೆ” ಎಂಧಿದ್ದಾರೆ. ಈ ವೇಳೆ, ಅವರನ್ನು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ. ಕಾರ್ಯಪ್ಪ ಮೇಲೆ, ಕೆಲವರು ಚಪ್ಪಲಿಯನ್ನೂ ಎಸೆದಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ಆದಾಗ್ಯೂ, ಕಾರ್ಯಪ್ಪ ಅವರ ಸಮರ್ಥನೆಯು ಐತಿಹಾಸಿಕ ವಾಸ್ತವತೆಯ ಕಣ್ಣಿಗೆ ಮಣ್ಣೆರಚುವ ಯತ್ನ ಎಂಬುದು ಸ್ಪಷ್ಟ. ಗಾಂಧಿ ಹತ್ಯೆಯಲ್ಲಿ ಅಡಕವಾಗಿರುವ ರಾಜಕಾರಣ, ಕೋಮುದ್ವೇಷದ ವಿಷಬೀಜಗಳು ಹಾಗೂ ಸ್ವತಂತ್ರ ಭಾರತದ ಪ್ರಥಮ ಸರ್ಕಾರ ತೆಗೆದುಕೊಂಡ ಕಠಿಣ ಆಡಳಿತಾತ್ಮಕ ಕ್ರಮಗಳ ಇತಿಹಾಸವು ಗಾಂಧಿ ಹತ್ಯೆ ಕೃತ್ಯದ ವಾಸ್ತವವನ್ನು ಸ್ಪಷ್ಟವಾಗಿ ಬಿಚ್ಚಿಡುತ್ತದೆ. ಜೊತೆಗೆ, ಗಾಂಧಿ ಹತ್ಯೆಯ ನಂತರ ಆರ್ಎಸ್ಎಸ್ಅನ್ನು ನಿಷೇಧಿಸಿ, ಅದರ ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದ ಅಂದಿನ ಉಪಪ್ರಧಾನಿ, ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲರ ನಿಲುವುಗಳು ಆ ವಾಸ್ತವದ ಸತ್ಯಕ್ಕೆ ಕನ್ನಡಿ ಹಿಡಿದಿವೆ.
1947-48ರಲ್ಲಿ ದೇಶ ವಿಭಜನೆಯ ಭೀಕರತೆಯಿಂದಾಗಿ ಭಾರತವು ಕೋಮು ಹಿಂಸಾಚಾರದ ಕರಾಳ ದವಡೆಯಲ್ಲಿದ್ದ ಆ ಸಂದರ್ಭದಲ್ಲಿ, ಹಿಂದು-ಮುಸ್ಲಿಂ ಸಮುದಾಯಗಳ ನಡುವೆ ಶಾಂತಿ ಮತ್ತು ಸೌಹಾರ್ದತೆಯನ್ನು ಮರುಸ್ಥಾಪಿಸಲು ಗಾಂಧೀಜಿ ತಮ್ಮ ಜೀವವನ್ನೇ ಪಣಕ್ಕಿಟ್ಟು ನಿರಂತರವಾಗಿ ಶ್ರಮಿಸುತ್ತಿದ್ದರು. ಆದರೆ, 1948ರ ಜನವರಿ 30ರಂದು ದೆಹಲಿಯ ಬಿರ್ಲಾ ಭವನದಲ್ಲಿ ಪ್ರಾರ್ಥನಾ ಸಭೆಗೆ ತೆರಳುತ್ತಿದ್ದ ಮಹಾತ್ಮ ಗಾಂಧೀಜಿಯವರನ್ನು ನಾಥುರಾಮ್ ಗೋಡ್ಸೆ ಗುಂಡಿಕ್ಕಿ ಭೀಕರವಾಗಿ ಹತ್ಯೆಗೈದ. ಆತನ ಕೃತ್ಯದಿಂದ ಭಾರತ ಮಾತ್ರವಲ್ಲದೆ, ಇಡೀ ಜಗತ್ತೇ ಬೆಚ್ಚಿಬಿದ್ದಿತ್ತು. ಅಂದಿನ, ನೆಹರು ಸರ್ಕಾರದಲ್ಲಿ ದೇಶದ ಆಂತರಿಕ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದ ಸರ್ದಾರ್ ವಲ್ಲಭಭಾಯಿ ಪಟೇಲರು, ಗಾಂಧಿ ಹಂತಕ ಗೋಡ್ಸೆಯ ಬಂಧನಕ್ಕೆ ಮಾತ್ರವೇ ಸೀಮಿತವಾಗಿಲ್ಲ; ಬದಲಾಗಿ, ದೇಶದಲ್ಲಿ ಹರಡುತ್ತಿದ್ದ ಕೋಮುದ್ವೇಷದ ರಾಜಕೀಯ, ಹಿಂಸೆಗೆ ಪ್ರಚೋದನೆ ನೀಡುತ್ತಿದ್ದ ಶಕ್ತಿಗಳು ಮತ್ತು ಸಂಘಟಿತ ಚಟುವಟಿಕೆಗಳ ಕುರಿತು ತನಿಖೆ ನಡೆಸಿ ದಿಟ್ಟ ಆಡಳಿತಾತ್ಮಕ ಕ್ರಮಗಳನ್ನು ತೆಗೆದುಕೊಂಡರು.
ಪರಿಣಾಮವಾಗಿ, 1948ರ ಫೆಬ್ರವರಿ 4ರಂದು ಕೇಂದ್ರ ಸರ್ಕಾರವು ಆರ್ಎಸ್ಎಸ್ ಮೇಲೆ ನಿಷೇಧ ಹೇರಿತು. ಸರ್ಕಾರದ ಅಧಿಕೃತ ಪ್ರಕಟಣೆಯಲ್ಲಿ ಆರ್ಎಸ್ಎಸ್ನ ಕೆಲವು ಸದಸ್ಯರು ದೇಶದ ವಿವಿಧ ಭಾಗಗಳಲ್ಲಿ ಬೆಂಕಿ ಹಚ್ಚುವುದು, ದರೋಡೆ, ಕೊಲೆ ಹಾಗೂ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವುದು ಕಂಡುಬಂದಿದೆ. ಮಾತ್ರವಲ್ಲದೆ, ಅಕ್ರಮ ಶಸ್ತ್ರಾಸ್ತ್ರಗಳ ಸಂಗ್ರಹ, ಹಿಂಸೆಯನ್ನು ಪ್ರಚೋದಿಸುವ ಕರಪತ್ರಗಳ ಹಂಚಿಕೆ ಹಾಗೂ ಸರ್ಕಾರ ಮತ್ತು ಸೇನೆಯ ವಿರುದ್ಧ ಅಸಮಾಧಾನ ಹುಟ್ಟಿಸುವ ಚಟುವಟಿಕೆಗಳ ಗಂಭೀರ ಆರೋಪಗಳೂ ಇವೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ನಿಷೇಧದ ಬೆನ್ನಲ್ಲೇ ಸಂಘಟನೆಯ ಮುಖ್ಯಸ್ಥ ಎಂ.ಎಸ್. ಗೋಳ್ವಲ್ಕರ್ ಸೇರಿದಂತೆ ಹಲವು ಪ್ರಮುಖ ಮುಖಂಡರನ್ನು ಸರ್ಕಾರ ಬಂಧಿಸಿತು. ಈ ಎಲ್ಲ ನಿರ್ಧಾರಗಳ ಕೇಂದ್ರಬಿಂದುವಾಗಿದ್ದವರು ಸರ್ದಾರ್ ಪಟೇಲರು.
ಆರ್ಎಸ್ಎಸ್ ಕುರಿತು ತಮ್ಮ ನಿಲುವುಗಳನ್ನು ಪಟೇಲರು ಹಲವು ಪತ್ರಗಳಲ್ಲಿಯೂ ದಾಖಲಿಸಿದ್ದಾರೆ. 1948ರ ಫೆಬ್ರವರಿ 26ರಂದು ನೆಹರು ಅವರು ಪಟೇಲರಿಗೆ ಪತ್ರ ಬರೆದು, ಗಾಂಧಿ ಹತ್ಯೆಯ ಹಿಂದೆ ವ್ಯಾಪಕವಾದ ಸಂಘಟಿತ ಸಂಚು ಇರಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದರು. ಅದಕ್ಕೆ ಮರುದಿನವೇ (ಫೆಬ್ರವರಿ 27) ಉತ್ತರಿಸಿದ್ದ ಪಟೇಲರು, “ಹತ್ಯೆ ಪ್ರಕರಣದ ತನಿಖೆಯಲ್ಲಿ ಆವರೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಆರ್ಎಸ್ಎಸ್ಸೇ ನೇರವಾಗಿ ಈ ಹತ್ಯೆಯ ಸಂಚನ್ನು ರೂಪಿಸಿದೆ ಎಂಬುದಕ್ಕೆ ತಕ್ಷಣದ ನೇರ ಪುರಾವೆ ದೊರೆತಿಲ್ಲ, ಬದಲಾಗಿ ಹಿಂದು ಮಹಾಸಭಾದ ತೀವ್ರವಾದಿ ಗುಂಪು ಈ ಸಂಚಿನಲ್ಲಿ ಭಾಗಿಯಾಗಿರುವುದನ್ನು ತನಿಖೆ ಸೂಚಿಸುತ್ತದೆ. ಆದರೆ, ದೇಶದಲ್ಲಿ ಆರ್ಎಸ್ಎಸ್ ಸೃಷ್ಟಿಸಿದ ಕೋಮುದ್ವೇಷವೇ ಗಾಂಧಿ ಹತ್ಯೆಗೆ ಭೂಮಿಕೆ ಹಾಕಿಕೊಟ್ಟಿತ್ತು” ಎಂಬ ಕಟು ಸತ್ಯವನ್ನು ತಿಳಿಸಿದ್ದರು.
ನಂತರ, 1948ರ ಜುಲೈ 18ರಂದು ಹಿಂದು ಮಹಾಸಭಾದ ಮುಖಂಡ ಶ್ಯಾಮಪ್ರಸಾದ್ ಮುಖರ್ಜಿ ಅವರಿಗೆ ಬರೆದ ಪತ್ರದಲ್ಲಿ ಪಟೇಲರು ಮತ್ತೊಮ್ಮೆ ತಮ್ಮ ನಿಲುವನ್ನು ಅತ್ಯಂತ ಸ್ಪಷ್ಟವಾಗಿ ದಾಖಲಿಸಿದ್ದರು. “ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಕಾರಣ ಸಂಘಟನೆಗಳ ನೇರ ಪಾತ್ರದ ಕುರಿತು ಅಂತಿಮ ತೀರ್ಪಿಗೆ ಬರುವುದಿಲ್ಲ. ಆದರೆ, ಆರ್ಎಸ್ಎಸ್ ಮತ್ತು ಹಿಂದು ಮಹಾಸಭಾದ ಚಟುವಟಿಕೆಗಳ ಪರಿಣಾಮವಾಗಿ ಗಾಂಧಿ ಹತ್ಯೆಯಂತಹ ಭೀಕರ ದುರಂತ ಸಂಭವಿಸಲು ಅನುಕೂಲವಾದ ದ್ವೇಷದ ವಾತಾವರಣ ದೇಶದಲ್ಲಿ ನಿರ್ಮಾಣವಾಗಿತ್ತು” ಎಂದು ಸ್ಪಷ್ಟವಾಗಿ ಬರೆದಿದ್ದರು. ಆರ್ಎಸ್ಎಸ್ನ ಚಟುವಟಿಕೆಗಳು ರಾಜ್ಯದ ಅಸ್ತಿತ್ವಕ್ಕೆ ಅಪಾಯಕಾರಿ ಎಂದು ಅವರು ಬಲವಾಗಿ ನಂಬಿದ್ದರು.
ಇನ್ನು 1948ರ ಸೆಪ್ಟೆಂಬರ್ 11ರಂದು ಆರ್ಎಸ್ಎಸ್ ಮುಖ್ಯಸ್ಥ ಎಂ.ಎಸ್ ಗೋಳ್ವಲ್ಕರ್ ಅವರಿಗೆ ಪಟೇಲರು ಬರೆದ ಪತ್ರವು ಇತಿಹಾಸದ ಅತ್ಯಂತ ಪ್ರಮುಖ ಮತ್ತು ಕಠಿಣ ದಾಖಲೆಯಾಗಿದೆ. ಆ ಪತ್ರದಲ್ಲಿ, ಆರ್ಎಸ್ಎಸ್ನ ಕೆಲವು ಸಾಮಾಜಿಕ ಕಾರ್ಯಗಳನ್ನು ಒಪ್ಪಿಕೊಳ್ಳುತ್ತಲೇ, ಮುಸ್ಲಿಮರ ವಿರುದ್ಧ ಪ್ರತೀಕಾರದ ಮನೋಭಾವದಿಂದ ಮುಗ್ಧ ಪುರುಷರು, ಮಹಿಳೆಯರು ಹಾಗೂ ಮಕ್ಕಳ ಮೇಲೆ ದಾಳಿ ನಡೆಸುವುದು ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ ಎಂದು ಖಂಡಿಸಿದ್ದರು. ಹಿಂದುಗಳನ್ನು ಸಂಘಟಿಸುವುದು ಬೇರೆ, ನಿರಪರಾಧಿಗಳ ಮೇಲೆ ಹಿಂಸಾಚಾರ ನಡೆಸುವುದು ಬೇರೆ ಎಂದು ಸ್ಪಷ್ಟಪಡಿಸಿದ್ದ ಅವರು, “ಆರ್ಎಸ್ಎಸ್ ನಾಯಕರ ಭಾಷಣಗಳು ಕೋಮುದ್ವೇಷದ ವಿಷದಿಂದ ತುಂಬಿದ್ದವು ಮತ್ತು ಅಂತಹ ವಿಷಪೂರಿತ ಪ್ರಚಾರದ ಫಲವಾಗಿಯೇ ದೇಶವು ಮಹಾತ್ಮ ಗಾಂಧಿಯವರ ಅಮೂಲ್ಯ ಜೀವವನ್ನು ಕಳೆದುಕೊಳ್ಳಬೇಕಾಯಿತು” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಗಾಂಧಿ ಹತ್ಯೆಯ ನಂತರ ಆರ್ಎಸ್ಎಸ್ನ ಕೆಲವು ಸದಸ್ಯರು ಸಂಭ್ರಮಿಸಿ ಸಿಹಿ ಹಂಚಿದ್ದರು ಎಂಬುದನ್ನೂ ಪಟೇಲರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು.
ಈ ಲೇಖನ ಓದಿದ್ದೀರಾ?: ಅಮೆರಿಕ ಮಧ್ಯಂತರ ಚುನಾವಣೆ: ಡೊನಾಲ್ಡ್ ಟ್ರಂಪ್ ಕುರ್ಚಿಗಿಲ್ಲ ಕುತ್ತು; ಬಹುಮತ ಕಳೆದುಕೊಂಡರೆ ಸರ್ಕಾರ ‘ಹಲ್ಲು…
ಇದೆಲ್ಲದರ ನಡುವೆ, 1949ರ ಜುಲೈ 12ರಂದು ಆರ್ಎಸ್ಎಸ್ ಮೇಲಿನ ನಿಷೇಧವನ್ನು ಹಿಂಪಡೆಯಲಾಯಿತು ಎಂಬುದನ್ನು ಮುಂದಿಟ್ಟುಕೊಂಡು, ಕಾರ್ಯಪ್ಪನಂತಹ ಹಿಂದುತ್ವ ಕೋಮುವಾದಿಗಳು, ‘ಗಾಂಧಿ ಹತ್ಯೆಯ ನಂತರ ಆರ್ಎಸ್ಎಸ್ ವಿರುದ್ಧದ ಮಾಡಲಾಗಿದ್ದ ಆರೋಪಗಳೆಲ್ಲ ಸುಳ್ಳಾಗಿದ್ದವು’ ಎಂದು ವಾದಿಸಲು ಯತ್ನಿಸುತ್ತಾರೆ. ಆದರೆ, ಅದು ಅಕ್ಷರಶಃ ತಿರುಚುವಿಕೆ. ಏಕೆಂದರೆ, ಕಠಿಣ ಷರತ್ತುಗಳನ್ನು ವಿಧಿಸಿ; ಅಂದರೆ, ಆರ್ಎಸ್ಎಸ್ ಲಿಖಿತ ಸಂವಿಧಾನವನ್ನು ಹೊಂದಬೇಕು, ತನ್ನ ಚಟುವಟಿಕೆಗಳನ್ನು ಸಂಪೂರ್ಣವಾಗಿ ಸಾಂಸ್ಕೃತಿಕ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸಬೇಕು, ಹಿಂಸೆ ಮತ್ತು ರಹಸ್ಯ ಮಾರ್ಗಗಳನ್ನು ತೊರೆದು ಭಾರತದ ಸಂವಿಧಾನ ಮತ್ತು ರಾಷ್ಟ್ರಧ್ವಜಕ್ಕೆ ಸಂಪೂರ್ಣ ನಿಷ್ಠೆ ತೋರಬೇಕು ಎಂದು ಸಂಘಪರಿವಾರದ ಮುಖಂಡರಿಂದ ಮುಚ್ಚಳಿಕೆ ಪಡೆದು, ಆರ್ಎಸ್ಎಸ್ ಮೇಲಿನ ನಿಷೇಧವನ್ನು ಹಿಂಪಡೆಯಲಾಗಿತ್ತು ಎಂಬುದೇ ವಾಸ್ತವ. ಇದನ್ನು ಅಂದಿನ ಗೃಹ ಸಚಿವಾಲಯದ ವಾರ್ಷಿಕ ವರದಿಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ.
ಇಂದಿನ ರಾಜಕೀಯದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರ ಹೆಸರನ್ನು ಬಳಸಿಕೊಂಡು ರಾಷ್ಟ್ರೀಯತೆಯ ಪಾಠ ಮಾಡುವವರು, ಪಟೇಲರು ಕೋಮುದ್ವೇಷದ ರಾಜಕೀಯದ ವಿರುದ್ಧ ತೆಗೆದುಕೊಂಡಿದ್ದ ಕಠಿಣ ನಿಲುವುಗಳನ್ನೂ ಮತ್ತು ಬರೆದ ಎಚ್ಚರಿಕೆಯ ಪತ್ರಗಳನ್ನೂ ಮರೆಮಾಚಿ ಮಾತನಾಡುತ್ತಾರೆ.
ಅಂತೆಯೇ, ಅಡ್ಡಂಡ ಕಾರ್ಯಪ್ಪ ತನ್ನ ನಾಟಕದಲ್ಲಿ ಹಂತಕ ಗೋಡ್ಸೆ ನ್ಯಾಯಾಲಯದಲ್ಲಿ ನೀಡಿದ ಹೇಳಿಕೆಯನ್ನೇ ಅಂತಿಮ ಸತ್ಯವೆಂದು ಬಿಂಬಿಸಲು ಹೊರಟಿರುವುದು ಐತಿಹಾಸಿಕ ವಂಚನೆ. ಕೊಲೆಗಾರನೊಬ್ಬ ತನ್ನ ಪಾಪ ಕೃತ್ಯವನ್ನು ಸಮರ್ಥಿಸಿಕೊಳ್ಳಲು ನ್ಯಾಯಾಲಯದ ಮುಂದೆ ಆಡುವ ಮಾತುಗಳು ಎಂದಿಗೂ ಐತಿಹಾಸಿಕ ಸತ್ಯವಾಗಲು ಸಾಧ್ಯವಿಲ್ಲ. ಗೋಡ್ಸೆಯನ್ನು ದೇಶದ ನ್ಯಾಯಾಂಗವು ದೋಷಿಯೆಂದು ತೀರ್ಪು ನೀಡಿ ಮರಣದಂಡನೆ ವಿಧಿಸಿದೆ ಎಂಬುದೇ ಕಠು ವಾಸ್ತವ.
ಗಾಂಧಿ ಅವರ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿರಬಹುದು, ಅವರ ರಾಜಕೀಯ ನಿಲುವುಗಳನ್ನು ಪ್ರಜಾಸತ್ತಾತ್ಮಕವಾಗಿ ವಿಮರ್ಶಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ, ವಿಮರ್ಶೆಗೂ ಮತ್ತು ಒಬ್ಬ ವ್ಯಕ್ತಿಯ ಹತ್ಯೆಯನ್ನು ಸಮರ್ಥಿಸುವ ಕ್ರೌರ್ಯಕ್ಕೂ ಭಾರೀ ವ್ಯತ್ಯಾಸವಿದೆ. ಹತ್ಯೆಯನ್ನು ಸಮರ್ಥಿಸುವುದು ಹಿಂಸೆಗೆ ನೈತಿಕ ಮಾನ್ಯತೆ ನೀಡುವ ಅಪಾಯಕಾರಿ ಧೋರಣೆ.



