ಭಾರತೀಯರ ಮೇಲೆ ಏಕಪಕ್ಷೀಯವಾಗಿ ಹೇರಲಾಗಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಕ್ರಮವೆಂದು ಭಾರೀ ವಿರೋಧಕ್ಕೆ ಗುರಿಯಾಗಿದ್ದ ‘ಫಾರ್ಮ್-6’ನ ಕೆಲವು ನಿಯಮಗಳನ್ನು ಕಡೆಗೂ ಚುನಾವಣಾ ಆಯೋಗ ರದ್ದುಗೊಳಿಸಿದೆ. ಹೊಸ ಮತದಾರರ ನೋಂದಣಿ ವೇಳೆ ಕೇಳಲಾಗುತ್ತಿದ್ದ ‘ಪ್ರತ್ಯೇಕ ಸ್ವಯಂ ಘೋಷಣೆ’ಯ ನಿಯಮವನ್ನು ಸಂಪೂರ್ಣವಾಗಿ ತೆಗೆದುಹಾಕಿದೆ.
ಎಸ್‌ಐಆರ್ ಪ್ರಕ್ರಿಯೆ ವೇಳೆ, ಫಾರ್ಮ್-6ನಲ್ಲಿ ಕಾನೂನುಬಾಹಿರವಾಗಿ ಕೆಲವು ನಿಯಮಗಳನ್ನು ಮುಖ್ಯ ಚುನಾವಣಾ ಆಯೋಗ, ಮೋ-ಶಾ ಸೂತ್ರದಬೊಂಬೆ ಗ್ಯಾನೇಶ್ ಕುಮಾರ್ ಸೇರಿಸಿದ್ದರು. ಆನ್‌ಲೈನ್ ಪೋರ್ಟಲ್‌ನಲ್ಲಿ ಫಾರ್ಮ್-6ನಲ್ಲಿನ ಜೆ ಮತ್ತು ಕೆ ವಿಭಾಗಗಳ ನಡುವೆ ಸೇರಿಸಲಾಗಿದ್ದ ಈ ಎಸ್‌ಐಆರ್ ಸ್ವಯಂ ಘೋಷಣೆಯು ಹೊಸ ಅರ್ಜಿದಾರರಿಗೆ ಕಡ್ಡಾಯವಾಗಿತ್ತು.
ಈ ನಿಯಮ ಸೇರ್ಪಡೆಯನ್ನು ಇತರ ಇಬ್ಬರು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ವಿರೋಧಿಸಿದ್ದರು. ಮೇ 16ರಂದೇ ಗ್ಯಾನೇಶ್ ಕುಮಾರ್‌ಗೆ ಪತ್ರ ಬರೆದಿದ್ದ ಆಯುಕ್ತ ವಿವೇಕ್ ಜೋಶಿ, “ಕಾನೂನಾತ್ಮಕ ತಿದ್ದುಪಡಿಯಿಲ್ಲದೆ ಫಾರ್ಮ್-6 ಅನ್ನು ಬದಲಾಯಿಸಲು ಸಾಧ್ಯವಿಲ್ಲ” ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಅಂತೆಯೇ, ಆಯುಕ್ತ ಸಂಧು ಅವರು ಆಗಸ್ಟ್ 13 ರಂದು “ಇಡೀ ಎಸ್‌ಐಆರ್ ಪ್ರಕ್ರಿಯೆಯೇ ಅನಧಿಕೃತ ಮತ್ತು ಅಕ್ರಮ” ಎಂದಿದ್ದರು.
1960ರ ಮತದಾರರ ನೋಂದಣಿ ನಿಯಮಾವಳಿಗಳ ಪ್ರಕಾರ ಫಾರ್ಮ್-6 ಅನ್ನು ತಿದ್ದುಪಡಿ ಮಾಡುವ ಅಧಿಕಾರ ಕೇವಲ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆಯೇ ಹೊರತು ಆಯೋಗಕ್ಕಿಲ್ಲ ಎಂದು ಇಬ್ಬರೂ ಆಯುಕ್ತರು ಬೆಟ್ಟು ಮಾಡಿದ್ದರು. ಚುನಾವಣಾ ಆಯೋಗದಲ್ಲಿಯೇ ಕೇಳಿಬಂದಿದ್ದ ಆಕ್ಷೇಪಗಳು ಮತ್ತು ವಿರೋಧಗಳು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ನ ತನಿಖಾ ವರದಿಯಿಂದ ಬಹಿರಂಗವಾಗಿದ್ದವು.
ಆದಾಗ್ಯೂ, ಅಕ್ಟೋಬರ್ 26ರಂದು ತಮ್ಮ ತಿದ್ದುಪಡಿಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥಿಸಿಕೊಂಡಿದ್ದ ಚುನಾವಣಾ ಆಯೋಗ/ಗ್ಯಾನೇಶ್ ಕುಮಾರ್, “ಅರ್ಜಿದಾರರಿಗೆ ಎರಡು ಒಟಿಪಿ ಮತ್ತು ಎರಡು ಇ-ಸಹಿಗಳ ಬದಲಾಗಿ ಒಂದೇ ಬಾರಿಗೆ ಸುಲಭವಾಗಲಿ ಎಂಬ ಸದುದ್ದೇಶದಿಂದ ಎರಡನ್ನೂ ಒಟ್ಟಿಗೆ ಸೇರಿಸಲಾಗಿತ್ತು” ಎಂದು ಸಮರ್ಥಿಸಿಕೊಂಡಿತ್ತು.
ಆದಾಗ್ಯೂ, ಇದೀಗ, ಆಯೋಗವು ‘ಫಾರ್ಮ್ 6’ ಮತ್ತು ಎಸ್‌ಐಆರ್ ಸ್ವಯಂ ಘೋಷಣೆಯನ್ನು ಪ್ರತ್ಯೇಕಗೊಳಿಸಿದೆ. ‘ECI-Net’ ಪೋರ್ಟಲ್‌ನಲ್ಲಿ ಅದನ್ನು ಎರಡು ಪ್ರತ್ಯೇಕ ನಮೂನೆಗಳಾಗಿ ಬೇರ್ಪಡಿಸಿದೆ.
ಈ ಲೇಖನ ಓದಿದ್ದೀರಿ?: ಅಮೆರಿಕ ಮಧ್ಯಂತರ ಚುನಾವಣೆ: ಡೊನಾಲ್ಡ್ ಟ್ರಂಪ್ ಕುರ್ಚಿಗಿಲ್ಲ ಕುತ್ತು; ಬಹುಮತ ಕಳೆದುಕೊಂಡರೆ ಸರ್ಕಾರ ‘ಹಲ್ಲು…
ಆದರೂ, ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಆಯೋಗ, “’ECI-Net’ ಪೋರ್ಟಲ್‌ನಲ್ಲಿ ಇದನ್ನು ನೀಡಿದ ರೀತಿಯಿಂದಾಗಿ ಫಾರ್ಮ್-6ಅನ್ನೇ ತಿದ್ದುಪಡಿ ಮಾಡಲಾಗಿದೆ ಎಂಬ ಗೊಂದಲ ಸೃಷ್ಟಿಯಾಗಿದ್ದರಿಂದ, ಈಗ ಎರಡನ್ನೂ ಬೇರ್ಪಡಿಸಲಾಗಿದೆ” ಎಂದು ಸಮಜಾಯಷಿ ನೀಡಿದೆ.
ಜೊತೆಗೆ ‘ECI-Net’ನಲ್ಲಿನ ತಾಂತ್ರಿಕ ತೊಡಕಿನಿಂದ ಮತದಾರರ ಪಟ್ಟಿಯಿಂದ ಕೈಬಿಡಲ್ಪಟ್ಟಿದ್ದ ಗೋವಾದ 97 ಅರ್ಹ ಮತದಾರರನ್ನು ಮತ್ತೆ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಪಶ್ಚಿಮ ಬಂಗಾಳದಲ್ಲಿ ಬಾಕಿ ಇದ್ದ ಲಕ್ಷಾಂತರ ಮೇಲ್ಮನವಿಗಳ ಕುರಿತು ಸೂಕ್ತ ಆಡಳಿತಾತ್ಮಕ ಸ್ಪಷ್ಟನೆಗಳನ್ನು ಸುಪ್ರೀಂ ಕೋರ್ಟ್‌ಗೆ ಆಯೋಗ ಸಲ್ಲಿಸಿದೆ.
ಚುನಾವಣಾ ಆಯೋಗದೊಳಗೆ ಇಬ್ಬರು ಆಯುಕ್ತರು ಎತ್ತಿದ್ದ ಪ್ರಮುಖ ಆಕ್ಷೇಪಗಳಲ್ಲಿ ಒಂದನ್ನು ಜನಾಕ್ರೋಶಕ್ಕೆ ಮಣಿದು ಚುನಾವಣಾ ಆಯೋಗ ಸರಿಪಡಿಸಿದೆ. ಆದಾಗ್ಯೂ, ಇಡೀ ಎಸ್‌ಐಆರ್ ಪ್ರಕ್ರಿಯೆಯೇ ಅಕ್ರಮವೆಂದು ನಾಗರಿಕ ಸಂಘಟನೆಗಳು ಮತ್ತು ವಿಪಕ್ಷಗಳು ಆರೋಪಿಸಿವೆ. ಎಸ್‌ಐಆರ್‌ಅನ್ನೇ ರದ್ದುಗೊಳಿಸಬೇಕು, ಚುನಾವಣಾ ಆಕ್ರಮಗಳು ಮತ್ತು ಮತಗಳ್ಳತನದ ಕುರಿತು ಸ್ವತಂತ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿವೆ.




