ಬೀದರ್ ನಗರದ ಬ್ರಿಮ್ಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವ ವೈದ್ಯರೊಬ್ಬರ ಮೇಲೆ ಯುವಕರ ಗುಂಪು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ಬ್ರಿಮ್ಸ್‌ನ ಕ್ಯಾಷುಯಲ್ಟಿ ವಾರ್ಡ್‌ನಲ್ಲಿ ಕರ್ತವ್ಯದಲ್ಲಿದ್ದ ವೈದ್ಯ ತುಕಾರಾಮ ಮಚಿಂದರ ಹಲ್ಲೆಗೊಳಗಾದವರು. ಗಾಯಗೊಂಡ ತುಕಾರಾಮ ಅವರನ್ನು ಬ್ರಿಮ್ಸ್‌ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ವಿಷಯ ತಿಳಿದ ಬಳಿಕ ಎಎಸ್ಪಿ ಚಂದ್ರಕಾಂತ ಪೂಜಾರಿ ಸೇರಿದಂತೆ ನ್ಯೂಟನ್ ಠಾಣೆಯ ಪಿಎಸ್‌ಐ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಲ್ಲೆ ನಡೆಸಿದ ಎಂಟು ಜನರ ಮೇಲೆ ಕಲಂ 132, 109, 115(2), 118(1), 352, 351(2) ಜೊತೆ 190 ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಐದು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನೆ ಏನು?
ಡಾ.ತುಕಾರಾಮ ಅವರು ಗುರುವಾರ ತಡರಾತ್ರಿ ಬ್ರಿಮ್ಸ್‌ನ ಕ್ಯಾಷುಯಲ್ಟಿ ವಾರ್ಡ್‌ನಲ್ಲಿ ಕರ್ತವ್ಯದಲ್ಲಿರುವ ವೇಳೆ ವಿಜಯಸಿಂಗ್ ಚವ್ಹಾಣ ಎಂಬಾತ ಬೈಕ್ ಮೇಲಿಂದ ಬಿದ್ದು ಗಾಯಗೊಂಡು ಬ್ರಿಮ್ಸ್‌ಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅದೇ ವೇಳೆ ಗಾಯಾಳುವಿನ ಸಂಬಂಧಿಕರು ಎಂದು ಹೇಳಿಕೊಂಡು ಬಂದ ಎಂಟು ಮಂದಿ ಯುವಕರ ಗುಂಪು ‘ನೀನು ಗಾಯಾಳುವಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಅವನಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ನಿನ್ನ ಜೀವಸಹಿತ ಬಿಡುವುದಿಲ್ಲ’ ಎಂದು ಬೆದರಿಸಿದ್ದಾರೆ. ವಾರ್ಡ್‌ನಲ್ಲಿ ದಾಖಲಾದ ಇತರ ರೋಗಿಗಳಿಗೆ ಚಿಕಿತ್ಸೆ ನೀಡದಂತೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಆನಂತರ ತುಕಾರಾಮ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಳಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ. ಬಳಿಕ ಅಲ್ಲಿನ ಸಿಬ್ಬಂದಿ ಬಿಡಿಸಿಕೊಂಡು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಮೆಡಿಕಲ್ ವಿದ್ಯಾರ್ಥಿಗಳಿಂದ ಪ್ರತಿಭಟನೆ
ನಿನ್ನೆ ತಡರಾತ್ರಿ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಬಂದಿದ್ದ ಯುವಕರ ಗುಂಪು ಚಿಕಿತ್ಸೆ ವಿಚಾರವಾಗಿ ವೈದ್ಯರೊಂದಿಗೆ ವಾಗ್ವಾದ ನಡೆಸಿ, ಬಳಿಕ ಏಕಾಏಕಿ ವೈದ್ಯನ ಹಲ್ಲೆ ನಡೆಸಿದ ಘಟನೆ ಖಂಡಿಸಿ ಬ್ರಿಮ್ಸ್ ವೈದ್ಯರು, ಮೆಡಿಕಲ್ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಜಿಲ್ಲಾ ಆಸ್ಪತ್ರೆ (ಬ್ರಿಮ್ಸ್) ಎದುರು ಬೆಳಗ್ಗೆಯಿಂದ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಬೇಡಿಕೆಯಿಟ್ಟರು.
ಇದನ್ನೂ ಓದಿ : ಬೀದರ್ | ಮೇ 23, 24ರಂದು ಬಸವಗಿರಿಯಲ್ಲಿ ʼಬಸವೋತ್ಸವʼ : ಪ್ರಭುದೇವ ಸ್ವಾಮೀಜಿ
ಪ್ರತಿಭಟನಾ ಸ್ಥಳಕ್ಕೆ ಬ್ರಿಮ್ಸ್ ನಿರ್ದೇಶಕಿ ಡಾ.ಶಾಂತಲಾ ಕೌಜಲಗಿ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿ, ‘ಬ್ರಿಮ್ಸ್‌ನ ಕರ್ತವ್ಯನಿರತ ವೈದ್ಯ ತುಕಾರಾಮ ಅವರ ಮೇಲೆ ಯುವಕರ ಗುಂಪೊಂದು ವಿನಾಕಾರಣ ಹಲ್ಲೆ ನಡೆಸಿದ ಘಟನೆ ತೀವ್ರ ಖಂಡನೀಯ. ಆಸ್ಪತ್ರೆಗಳಲ್ಲಿಯೇ ವೈದ್ಯರಿಗೆ ಭದ್ರತೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ. ಇಂತಹ ಘಟನೆಗಳಿಂದ ಬ್ರಿಮ್ಸ್ ವೈದ್ಯರು, ವಿದ್ಯಾರ್ಥಿಗಳ ನಡುವೆ ಭಯದ ವಾತಾವರಣ ಸೃಷ್ಟಿಯಾಗಿದೆ. ಬ್ರಿಮ್ಸ್‌ನಲ್ಲಿ ಇನ್ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಇನ್ನಷ್ಟು ಪೊಲೀಸ್ ಸಿಬ್ಬಂದಿ ನೇಮಿಸಿ ರಕ್ಷಣೆ ಒದಗಿಸಬೇಕು’ ಎಂದರು.
ಈ ಘಟನೆ ಖಂಡಿಸಿ ಬ್ರಿಮ್ಸ್ ವೈದ್ಯರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರೂ ಆಸ್ಪತ್ರೆಯಲ್ಲಿ ದಾಖಲಾದ ಯಾವುದೇ ರೋಗಿಗಳಿಗೆ ತೊಂದರೆ ಆಗದಂತೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಹಲ್ಲೆಗೊಳಗಾದ ವೈದ್ಯ ತುಕಾರಾಮ ಮಾತನಾಡಿ, ‘ಯುವಕನೊಬ್ಬ ಬೈಕ್ ಮೇಲಿಂದ ಬಿದ್ದು ಗಾಯಗೊಂಡು ಬ್ರಿಮ್ಸ್‌ಗೆ ಚಿಕಿತ್ಸೆಗಾಗಿ ಆಗಮಿಸಿದ. ಯುವಕನಿಗೆ ಚಿಕಿತ್ಸೆ ನೀಡಬೇಕಾದರೆ ಎಂಎಲ್ಸಿ ಮಾಡಬೇಕು ಎಂದಾಗ ಅವರು ಬೇಡ ಅಂದ್ರು, ಆಮೇಲೆ ಚಿಕಿತ್ಸೆ ನೀಡಿ ‘ಎಕ್ಸ್ ರೇ’ ಮಾಡಿಸಲು ಕಳಿಸಿದ್ದೇವೆ. ಆವಾಗ ಎಂಎಲ್ಸಿ ಮಾಡುವ ವಿಚಾರಕ್ಕೆ ಗಾಯಾಳು ಜೊತೆ ಬಂದ ಯುವಕರ ಗುಂಪು ನನ್ನ ಮೇಲೆ ಮುಗಿಬಿದ್ದು ತಲೆ, ಭುಜ, ಕೈಕಾಲು, ಬೆನ್ನಿಗೆ ಗುದ್ದಿ ಗಾಯಗೊಳಿಸಿದ್ದಾರೆ’ ಎಂದರು.




