ಉತ್ತರ ಭಾರತದಲ್ಲಿ ಮೊಳಗುತ್ತಿದೆ ಕಾರ್ಮಿಕ ಘೋಷ; ಮಾರ್ಚ್‌, ಏಪ್ರಿಲ್, ಮೇ ದಂಗೆಯ ಮಾಸಗಳು

Date:

ಭಾರತದಲ್ಲಿ 35 ವರ್ಷಗಳ ಹಿಂದೆ (1991) ಎಲ್‌ಪಿಜಿ (ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣ) ನೀತಿಯನ್ನು ಹೇರಲಾಯಿತು. ಆನಂತರದಲ್ಲಿ, ಕಾರ್ಮಿಕ ವಲಯವು ಹಲವು ರೀತಿಯಲ್ಲಿ ಸ್ಥಿತ್ಯಂತರಗಳನ್ನು ಕಂಡಿದೆ. ಶೋಷಣೆ, ದಬ್ಬಾಳಿಕೆಗಳನ್ನು ಎದುರಿಸಿದೆ. ಗಟ್ಟಿ ದನಿಯನ್ನು ಹೋರಾಟ ನಡೆಸಿದೆ. ಈಗ, ಕಾರ್ಮಿಕ ಹೋರಾಟವು ತೀವ್ರವಾಗಿ ಪುಟುದೇಳುತ್ತಿದೆ. ಕಾರ್ಮಿಕ ಕಿಚ್ಚಿನ ಹೊಸ ಅಲೆಯನ್ನು ಸೃಷ್ಟಿಸಿದೆ. ದೇಶದ ಕೈಗಾರಿಕಾ ಮತ್ತು ಇಂಧನ ವಲಯದಲ್ಲಿ ಕಾರ್ಮಿಕ ಶಕ್ತಿಯು ಜಾಗೃತವಾಗುತ್ತಿದ್ದು, ಸರಣಿ ಮುಷ್ಕರಗಳಲ್ಲಿ ತೊಡಗಿದೆ. ಕಾರ್ಮಿಕ ದಿನವನ್ನಾಚರಿಸುವ ಮೇ ತಿಂಗಳಿನಲ್ಲಿ ಬೃಹತ್ ಹೋರಾಟಗಳು ನಡೆಯುತ್ತಿವೆ.

- Advertisement -

ಈ ವರ್ಷ, ಕಾರ್ಮಿಕ ಹೋರಾಟದ ಕಿಡಿ ಏಪ್ರಿಲ್ ಆರಂಭದಲ್ಲಿ ಹರಿಯಾಣದ ಮಾನೇಸರ್ ಕೈಗಾರಿಕಾ ವಲಯದ ಕಾರ್ಖಾನೆಗಳಿಂದ ದೊಡ್ಡ ಮಟ್ಟದಲ್ಲಿ ಭುಗಿಲೆದ್ದಂತೆ ಕಾಣುತ್ತಿದೆ. ಆದರೆ, ಈ ಕಿಚ್ಚಿನ ಮುನ್ಸೂಚನೆಯ ಹೊಗೆ ಜನವರಿ ಮತ್ತು ಮಾರ್ಚ್ ತಿಂಗಳಿನಿಂದಲೇ ಹಲವು ಭಾಗಗಳಲ್ಲಿ ಕಾಣಿಸಿಕೊಂಡಿತ್ತು. ವಿಶೇಷವಾಗಿ, ಹರಿಯಾಣದ ಪಾಣಿಪತ್ ತೈಲ ಸಂಸ್ಕರಣಾಗಾರದಲ್ಲಿ (ರಿಫೈನರಿ) ಕಟ್ಟಡ ಕಾರ್ಮಿಕರು ನಡೆಸಿದ ಬೃಹತ್ ಪ್ರತಿಭಟನೆಯಿಂದ ಹೋರಾಟದ ಮೊದಲ ಕಿಡಿ ಹೊರಹೊಮ್ಮಿತ್ತು. ನಂತರ, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ದೇಶವ್ಯಾಪಿ ಬೃಹತ್ ಹೋರಾಟಗಳಿಗೆ ಮುನ್ನುಡಿಯನ್ನೂ ಬರೆಯಿತು. ಪಾಣಿಪತ್‌ನ ಪ್ರತಿಭಟನೆಯು ದೇಶದ ಮೂಲೆ ಮೂಲೆಗಳಿಗೂ ಪಸರಿಸುವ ಮೂಲಕ, ದೇಶವ್ಯಾಪಿ ಮುಷ್ಕರಗಳು ಭುಗಿಲೇಳಲು ಕಾರ್ಮಿಕರನ್ನು ಪ್ರೇರೇಪಿಸಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ರಸಾಯನವಿಜ್ಞಾನದ ʼಅಸಮಮಿತಿʼ (Chirality)ಯ...

ರಸಾಯನವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಹೆನ್ರಿ ಕಗಾನ್‌ ಮತ್ತು ಕೆನ್ಸೊ ಸುಆಯ್‌ ಅವರಿಗೆ ನೀಡಲಾಗಿದೆ. ಅವರ ಸಂಶೋಧನೆಯ ಕೇಂದ್ರ ಬಿಂದು ರಸಾಯನವಿಜ್ಞಾನದಲ್ಲಿ ಶತಮಾನಗಟ್ಟಲೆ ಅತ್ಯಂತ ಕುತೂಹಲಕಾರಿ ಪ್ರಶ್ನೆಯಾಗಿದ್ದ- ಒಂದಕ್ಕೊಂದು ಕನ್ನಡಿಯ ಪ್ರತಿಬಿಂಬದಂತಿರುವ...

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಕಾರ್ಮಿಕ ದಂಗೆಯ ಬಿರುಗಾಳಿ

ಬೃಹತ್ ಕಾರ್ಮಿಕ ಆಕ್ರೋಶವು ದಿಢೀರನೆ ಸಂಭವಿಸಿದುದಲ್ಲ, ಬದಲಿಗೆ ದೇಶದ ಪ್ರಮುಖ ಮೂಲಸೌಕರ್ಯ ಮತ್ತು ಇಂಧನ ಯೋಜನೆಗಳಲ್ಲಿ ತಿಂಗಳುಗಳಿಂದ ಹೆಪ್ಪುಗಟ್ಟಿದ್ದ ಅಸಮಾಧಾನ-ಆಕ್ರೋಶದ ಫಲವಾಗಿದೆ. ಉತ್ತರ ಪ್ರದೇಶದ ಸೋನ್‌ಭದ್ರಾದಲ್ಲಿರುವ ಓಬ್ರಾ ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಕಟ್ಟಡ ಕಾರ್ಮಿಕರು ದೀರ್ಘಕಾಲದಿಂದ ತಡೆಹಿಡಿಯಲಾಗಿದ್ದ ವೇತನದ ಪಾವತಿಗೆ ಆಗ್ರಹಿಸಿ ಜನವರಿ 14 ರಂದು ಮೊದಲ ಬಾರಿಗೆ ಮುಷ್ಕರದ ಹಾದಿ ಹಿಡಿದರು. ಇದೇ ಕಾರ್ಮಿಕರು ಆಡಳಿತ ಮಂಡಳಿಯ ಉದಾಸೀನತೆಯ ವಿರುದ್ಧ ಮಾರ್ಚ್ 24 ರಂದು ಮತ್ತೊಮ್ಮೆ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಗಿಳಿದರು.

ಅದೇ ಸಮಯದಲ್ಲಿ, ಫೆಬ್ರವರಿ 2ರಂದು, ಬಿಹಾರದ ಬೇಗುಸರಾಯ್‌ನಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ (IOC) ಗುತ್ತಿಗೆ ಕಾರ್ಮಿಕರು ಕೇವಲ ಕಾಗದದ ಮೇಲಿರುವ ತಮ್ಮ ಕಾನೂನಾತ್ಮಕ ಹಕ್ಕುಗಳಾದ ಕನಿಷ್ಠ ವೇತನ, ಗುರುತಿನ ಚೀಟಿ, ಕೆಲಸದ ಸ್ಥಳದಲ್ಲಿ ಸುರಕ್ಷತೆ, ಇಎಸ್‌ಐ ಮತ್ತು ಪಿಎಫ್ ಭದ್ರತೆ ಹಾಗೂ ಕುಡಿಯುವ ನೀರು, ಶೌಚಾಲಯದಂತಹ ಕನಿಷ್ಠ ಮಾನವೀಯ ಸೌಲಭ್ಯಗಳಿಗಾಗಿ ಮುಷ್ಕರ ಹೂಡಿದರು. ಆದರೆ, ಅವರ ಧ್ವನಿಯನ್ನು ಅಡಗಿಸಲು ಆಡಳಿತ ಮಂಡಳಿಯು ಬೌನ್ಸರ್‌ಗಳನ್ನು ಬಳಸಿ ಬೆದರಿಕೆ ಹಾಕಿತು, ಕಾರ್ಮಿಕ ಮುಖಂಡರನ್ನು ಬಂಧಿಸಿ, ಕಾರ್ಮಿಕರ ವಿರುದ್ಧ ದಮನಕಾರಿ ನೀತಿ ಅನುಸರಿಸಿತು.

ಫೆಬ್ರವರಿ 22 ರಂದು ಹರಿಯಾಣದ ಪಾಣಿಪತ್‌ನಲ್ಲಿರುವ ಐಒಸಿಎಲ್ ಸಂಸ್ಕರಣಾಗಾರದಲ್ಲಿ ಲಾರ್ಸೆನ್ ಅಂಡ್ ಟೂಬ್ರೊ (L&T) ಸೇರಿದಂತೆ ವಿವಿಧ ಕಂಪನಿಗಳಲ್ಲಿ ದುಡಿಯುತ್ತಿದ್ದ ಇಬ್ಬರು ಕಟ್ಟಡ ಕಾರ್ಮಿಕರು ಸುರಕ್ಷತಾ ಕೊರತೆಯಿಂದಾಗಿ ಸಾವನ್ನಪ್ಪಿದರು. ಈ ಘಟನೆಯು ಕಾರ್ಮಿಕರ ಆಕ್ರೋಶವನ್ನು ಚಿಮ್ಮಿಸಿತು. ಆಕ್ರೋಶಗೊಂಡ 30 ರಿಂದ 40 ಸಾವಿರದಷ್ಟು ಬೃಹತ್ ಸಂಖ್ಯೆಯ ನಿರ್ಮಾಣ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ರಸ್ತೆಗಿಳಿದರು. ಅವರು ಕೇವಲ ಪರಿಹಾರಕ್ಕೆ ಆಗ್ರಹಿಸಲಿಲ್ಲ. ಬದಲಿಗೆ ದಿನನಿತ್ಯದ 8 ಗಂಟೆಗಳ ನಿಯಮಿತ ಕೆಲಸದ ಅವಧಿ, ಭಾನುವಾರದ ರಜೆ ಹಾಗೂ ಹೆಚ್ಚುವರಿ ಕೆಲಸಕ್ಕೆ (ಓವರ್‌ಟೈಮ್) ಕಾನೂನುಬದ್ಧವಾಗಿ ಸಿಗಬೇಕಾದ ದುಪ್ಪಟ್ಟು ವೇತನಕ್ಕಾಗಿಯೂ ಒತ್ತಾಯಿಸಿದರು.

indian oil refinery workers

ಕಾರ್ಮಿಕರ ಧರಣಿಯನ್ನು ಹತ್ತಿಕ್ಕಲು ಕಂಪನಿಗಳ ಆಡಳಿತ ಮಂಡಳಿಗರು ಪೊಲೀಸರಿಂದ ತೀವ್ರ ಲಾಠಿ ಪ್ರಹಾರ ನಡೆಸಿದರು. ಮಾತ್ರವಲ್ಲದೆ, ಸುಮಾರು 2,900 ಕಾರ್ಮಿಕರ ವಿರುದ್ಧ ಸಾಮೂಹಿಕ ಪ್ರಕರಣಗಳನ್ನು ದಾಖಲಿಸಿದರು. ಆದರೆ, ಈ ಹೋರಾಟದ ಕಿಡಿ ತಣ್ಣಗಾಗುವ ಬದಲು ನೆರೆಯ ರಾಜ್ಯಗಳಿಗೂ ಹರಡಿತು.

ಫೆಬ್ರವರಿ 26ರಂದು ಗುಜರಾತ್‌ನ ಸೂರತ್‌ನಲ್ಲಿರುವ ‘ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್’ ಸಂಸ್ಥೆಯ 2,000 ಕಾರ್ಮಿಕರು ಪಾಣಿಪತ್ ಹೋರಾಟದಿಂದ ಪ್ರೇರಿತರಾಗಿ 8 ಗಂಟೆಗಳ ಕೆಲಸದ ಅವಧಿ ಮತ್ತು ಪ್ರತಿ ತಿಂಗಳ 7ನೇ ತಾರೀಖಿನೊಳಗೆ ವೇತನ ಪಾವತಿಯಾಗಬೇಕೆಂದು ಮುಷ್ಕರ ಆರಂಭಿಸಿದರು. ಇಲ್ಲಿಯೂ ಸಹ ಆಡಳಿತ ವ್ಯವಸ್ಥೆಯು ಕಾರ್ಮಿಕರ ವಿರುದ್ಧ ಕೊಲೆ ಯತ್ನದಂತಹ ಆರೋಪ ಮಾಡಿ, ಕಠಿಣ ಕಾಯ್ದೆಗಳನ್ನು ಹೇರಿ 40 ಕಾರ್ಮಿಕರನ್ನು ಜೈಲಿಗಟ್ಟಿತು.

ಇದೇ ಅವಧಿಯಲ್ಲಿ ಗುಜರಾತ್‌ನ ವಾಪಿಯಲ್ಲಿರುವ ‘ರಿಲಯನ್ಸ್ ಗ್ರೂಪ್‌’ಗೆ ಸೇರಿದ ‘ಅಲೋಕ್ ಇನ್ಫ್ರಾಸ್ಟ್ರಕ್ಚರ್ಸ್’ ಮತ್ತು ಭರೂಚ್‌ನ ‘ಏಷ್ಯನ್ ಪೇಂಟ್ಸ್’ ಕಾರ್ಮಿಕರು ಮೂಲಭೂತ ಸೌಕರ್ಯ ಮತ್ತು ನಿಗದಿತ ವೇತನಕ್ಕಾಗಿ ಮುಷ್ಕರ ಆರಂಭಿಸಿದರು. ಮಧ್ಯಪ್ರದೇಶದ ಬೆತುಲ್‌ನಲ್ಲಿ ‘ವೆಸ್ಟರ್ನ್ ಕೋಲ್‌ಫೀಲ್ಡ್ಸ್‌’ನ ಗುತ್ತಿಗೆ ಕಾರ್ಮಿಕರು ತಮಗೆ 4 ತಿಂಗಳಿಂದ ಸಂಬಳ ನೀಡದ ಗುತ್ತಿಗೆದಾರರ ವಿರುದ್ಧ 15 ದಿನಗಳ ಕಾಲ ಸರಣಿ ಉಪವಾಸ ಸತ್ಯಾಗ್ರಹ ನಡೆಸಿದರು.

ಜಾರ್ಖಂಡ್‌ನ ಗಮ್ಹಾರಿಯಾ ಕೈಗಾರಿಕಾ ವಲಯದಲ್ಲಿ ‘ಭಾರತ್ ಇಂಜಿನಿಯರಿಂಗ್ ಬಾಡಿ ಬಿಲ್ಡಿಂಗ್ ಕಂಪನಿ’ಯ ಕಾರ್ಮಿಕರು ಇಎಸ್‌ಐ-ಪಿಎಫ್ ಸೌಲಭ್ಯ ಕೇಳಿದಾಗ ಮಾರ್ಚ್ 2 ರಂದು ಆಡಳಿತ ಮಂಡಳಿಯ ಬೌನ್ಸರ್‌ಗಳು ಅವರ ಮೇಲೆ ದೈಹಿಕ ಹಲ್ಲೆ ನಡೆಸಿದರು. ಹೋರಾಟವನ್ನು ಹತ್ತಿಕ್ಕಲು ಕಂಪನಿ ಆಡಳಿತ ಯತ್ನಿಸಿತು.

ರಾಜಸ್ಥಾನದ ಕೋಟಾದಲ್ಲಿ ‘ಚಂಬಲ್ ಫರ್ಟಿಲೈಸರ್ಸ್’ ಕಾರ್ಮಿಕರು 26 ನಿಗದಿತ ಕೆಲಸದ ದಿನಗಳ ಭರವಸೆಗಾಗಿ ಮುಷ್ಕರ ನಡೆಸಿದರು. ಹೋರಾಟದ ಕಿಚ್ಚು ಹೆಚ್ಚುತ್ತಿದ್ದಂತೆಯೇ, ಕಾರ್ಮಿಕ ಇಲಾಖೆ ಮಧ್ಯಪ್ರವೇಶಿಸಿತು. ಗುತ್ತಿಗೆ ಕಾರ್ಮಿಕರಿಗೆ ತಿಂಗಳಿಗೆ ಕನಿಷ್ಠ 26 ದಿನಗಳ ಕಾಲ ಕಡ್ಡಾಯವಾಗಿ ಕೆಲಸ ನೀಡಲು ಮತ್ತು 8 ಗಂಟೆಗಳ ಕೆಲಸದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಹಾಗೂ ಹೆಚ್ಚುವರಿ ಅವಧಿಯ ಕೆಲಸಕ್ಕೆ ಕಾರ್ಮಿಕ ಕಾಯ್ದೆಯನ್ವಯ ದುಪ್ಪಟ್ಟು ವೇತನ ಪಾವತಿಸಲು ಕಂಪನಿ ಒಪ್ಪಿಕೊಂಡಿತು.

ಅಂತೆಯೇ, ಮಧ್ಯಪ್ರದೇಶದ ರೇವಾನಲ್ಲಿರುವ ‘ಆಲ್ಟ್ರಾಟೆಕ್ ಸಿಮೆಂಟ್’ ಸಂಸ್ಥೆಯು 300 ಸ್ಥಳೀಯ ಕಾರ್ಮಿಕರನ್ನು ವಜಾಗೊಳಿಸಿ ಹೊರಗಿನವರನ್ನು ನೇಮಿಸಿಕೊಳ್ಳಲು ಮುಂದಾದಾಗ ಸ್ಥಳೀಯ ಕಾರ್ಮಿಕರು ಫ್ಯಾಕ್ಟರಿ ಗೇಟ್ ಬಂದ್ ಮಾಡಿ ಪ್ರತಿಭಟಿಸಿದರು. ಈ ಪ್ರತಿಭಟನೆಯ ಪ್ರಭಾವ ಎಷ್ಟಿತ್ತೆಂದರೆ, ಮಾರ್ಚ್ 16 ರಂದು ಜಾರ್ಖಂಡ್ ಮತ್ತು ಆಂಧ್ರಪ್ರದೇಶದ ಆಲ್ಟ್ರಾಟೆಕ್ ಸ್ಥಾವರಗಳ ಕಾರ್ಮಿಕರು ಸಹ ಸ್ವಯಂಪ್ರೇರಿತರಾಗಿ ಮುಷ್ಕರಕ್ಕೆ ಕೈಜೋಡಿಸಿದರು. ಪ್ರತಿಭಟನೆಗಿಳಿದರು.

ultra tech

ದೇಶದ ಮೂರು ಪ್ರಮುಖ ರಾಜ್ಯಗಳಲ್ಲಿ ಏಕಕಾಲಕ್ಕೆ ಮುಷ್ಕರದ ಬಿಸಿ ತಟ್ಟಿದ್ದರಿಂದ ‘ಅಲ್ಟ್ರಾಟೆಕ್ ಸಿಮೆಂಟ್’ ಆಡಳಿತ ಮಂಡಳಿಯು ಕಾರ್ಮಿಕರ ಹೋರಾಟಕ್ಕೆ ಮಣಿಯಿತು. ಸ್ಥಳೀಯ ಕಾರ್ಮಿಕ ಮುಖಂಡರು, ಜಿಲ್ಲಾ ಆಡಳಿತ ಹಾಗೂ ಕಂಪನಿಯ ಪ್ರತಿನಿಧಿಗಳ ನಡುವೆ ಸುದೀರ್ಘ ಸಭೆ ನಡೆಸಿ, ಕಾರ್ಮಿಕರ ಪ್ರಮುಖ ಬೇಡಿಕೆಗಳಿಗೆ ಭಾಗಶಃ ಒಪ್ಪಿಗೆ ನೀಡಿತು. ವಜಾಗೊಳಿಸಲಾಗಿದ್ದ ಸ್ಥಳೀಯ ಕಾರ್ಮಿಕರನ್ನು ಹಂತಹಂತವಾಗಿ ಮರುನೇಮಕ ಮಾಡಿಕೊಳ್ಳಲು ಮತ್ತು ಮುಂದಿನ ದಿನಗಳಲ್ಲಿ ಸ್ಥಳೀಯ ಉದ್ಯೋಗಿಗಳಿಗೆ ಮೊದಲ ಆದ್ಯತೆ ನೀಡಲು ಕಂಪನಿಯು ಒಪ್ಪಿಕೊಂಡಿತು.

ಮಾರ್ಚ್ ತಿಂಗಳ ಮಧ್ಯಭಾಗದಲ್ಲಿ ದೇಶದ ಪ್ರಮುಖ ಇಂಧನ ಮತ್ತು ವಿದ್ಯುತ್ ದೈತ್ಯರಾದ ಅದಾನಿ ಮತ್ತು ವೇದಾಂತ ಸಮೂಹದ ಸಂಸ್ಥೆಗಳಿಗೂ ಕಾರ್ಮಿಕ ಮುಷ್ಕರದ ಬಿಸಿ ತಟ್ಟಿತು. ಮಾರ್ಚ್ 12ರಂದು ಛತ್ತೀಸ್‌ಗಢದ ‘ವೇದಾಂತ ಪವರ್’ ಮತ್ತು ರಾಜಸ್ಥಾನದ ಚಿತ್ತೋರ್‌ಗಢದ ‘ಹಿಂದುಸ್ತಾನ್ ಜಿಂಕ್’ (ವೇದಾಂತ ಸಂಸ್ಥೆ) ಕಾರ್ಮಿಕರು ಮುಷ್ಕರ ಹೂಡಿದರು. ಭಾರತದಲ್ಲಿನ ಗಣಿಗಾರಿಕೆ ಮತ್ತು ಇಂಧನ ವಲಯದಲ್ಲಿ ಗುತ್ತಿಗೆ ಕಾರ್ಮಿಕರ ಮೇಲಿನ ವ್ಯವಸ್ಥಿತ ಶೋಷಣೆ, ವೇತನ ತಾರತಮ್ಯದ ವಿರುದ್ಧ ಹಾಗೂ ಸಾಮಾಜಿಕ ಭದ್ರತೆ ಮತ್ತು ಸುರಕ್ಷತೆಗಾಗಿ ಒತ್ತಾಯಿಸಿದರು. ಬೃಹತ್ ಹೋರಾಟಕ್ಕೆ ಮಣಿದ ಕಂಪನಿಗಳು ಪಿಎಫ್-ಇಎಸ್‌ಐ ಹಣವನ್ನು ಕಾರ್ಮಿಕರ ಖಾತೆಗಳಿಗೆ ಜಮಾ ಮಾಡುವುದಾಗಿ ಲಿಖಿತ ಭರವಸೆ ನೀಡಿತು. ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲು ಒಪ್ಪಿಕೊಂಡಿತು.

ಈ ಲೇಖನ ಓದಿದ್ದೀರಾ?: ‘ಅಮೆರಿಕ ಖಜಾನೆ’ ಜೊತೆ ಡೀಲ್‌ ಕುದುರಿಸಿದ ಅದಾನಿ ಗ್ರೂಪ್; ಕ್ರಿಮಿನಲ್‌ ಕೇಸ್‌ ಖುಲಾಸೆಗೆ ತೆತ್ತ…

ಮಾರ್ಚ್ 14 ರಂದು ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿರುವ ‘ಅದಾನಿ ಪವರ್’ ಸ್ಥಾವರದಲ್ಲಿ ಕಾರ್ಮಿಕನೊಬ್ಬ ಮೃತಪಟ್ಟಿದ್ದರಿಂದ, ಸೂಕ್ತ ಪರಿಹಾರಕ್ಕಾಗಿ ನಡೆದ ಮುಷ್ಕರ ಆರಂಭಿಸಿದರು. ಆದರೆ, ಕಂಪನಿಯು ಸ್ಪಂದಿಸದಿದ್ದಾಗ, ಪ್ರತಿಭಟನೆಗಳು ಮತ್ತಷ್ಟು ತೀವ್ರಗೊಂಡವು. ಸಿಂಗ್ರೌಲಿ ಕಾರ್ಮಿಕರ ಪ್ರತಿಭಟನೆಗೆ ಛತ್ತೀಸ್‌ಗಢದ ಕೋರ್ಬಾದಲ್ಲಿದ್ದ ‘ಅದಾನಿ ಪವರ್‌’ನ 6,000 ಕಾರ್ಮಿಕರು ಹಾಗೂ ರಾಯ್‌ಗಢದ ‘ಜಿಂದಾಲ್ ಸ್ಟೀಲ್’ ಮತ್ತು ‘ಅದಾನಿ ಪವರ್’ ಕಾರ್ಮಿಕರು ಬೆಂಬಲ ಘೋಷಿಸಿ, ಮಾರ್ಚ್ 16 ಮತ್ತು 18 ರಂದು ಸಂಪೂರ್ಣ ಕೆಲಸ ಸ್ಥಗಿತಗೊಳಿಸಿ, ಧರಣಿ ನಡೆಸಿದರು.

ಆರಂಭದಲ್ಲಿ, ಆಡಳಿತವು ಕಾರ್ಮಿಕರನ್ನು ಹತ್ತಿಕ್ಕಲು ಯತ್ನಿಸಿತು. ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಪ್ರಮುಖ ಕಾರ್ಮಿಕ ಮುಖಂಡರ ಮೇಲೆ ಅತ್ಯಂತ ಕಠಿಣವಾದ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ಪ್ರಕರಣ ದಾಖಲಿಸಿತು. ಹಲವರನ್ನು ಸಾಮೂಹಿಕವಾಗಿ ಬಂಧಿಸಿತು. ಆದರೂ, ಕಾರ್ಮಿಕರು ಈ ಬೆದರಿಕೆಗಳಿಗೆ ಮಣಿಯದೆ ತಮ್ಮ ಒಗ್ಗಟ್ಟಿನ ಹೋರಾಟವನ್ನು ಮುಂದುವರೆಸಿದರು.

ಅಂತಿಮವಾಗಿ, ಕಂಪನಿಯು ಕಾರ್ಮಿಕರ ಎದುರು ಮಂಡಿಯೂರಿತು. ಮೃತ ಕಾರ್ಮಿಕನ ಕುಟುಂಬದ ಸದಸ್ಯರೊಬ್ಬರಿಗೆ ಸ್ಥಾವರದಲ್ಲಿ ಉದ್ಯೋಗ ನೀಡುವುದು, ಕೆಲಸದ ಸ್ಥಳದಲ್ಲಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದಾಗಿ ಆಡಳಿತ ಮಂಡಳಿಯು ಲಿಖಿತ ಭರವಸೆ ನೀಡಿತು.

ಹೀಗೆ, ಜನವರಿಯಿಂದ ಮಾರ್ಚ್ ಅವಧಿಯಲ್ಲೇ ದೇಶದ ಇಂಧನ ಮತ್ತು ನಿರ್ಮಾಣ ವಲಯದಲ್ಲಿ ಸುಮಾರು 28ಕ್ಕೂ ಹೆಚ್ಚು ಬೃಹತ್ ಮುಷ್ಕರಗಳು ನಡೆದಿವೆ. ಕಂಪನಿಗಳು ಮತ್ತು ಅವುಗಳ ಆಡಳಿತಗಳು ನಡುಬಗ್ಗಿಸುವಂತೆ ಮಾಡಿವೆ.

ಏಪ್ರಿಲ್ – ಮೇ: ಕೈಗಾರಿಕಾ ಕಾರಿಡಾರ್‌ಗಳಲ್ಲಿ ಕಾರ್ಮಿಕ ಹೋರಾಟ ಪರ್ವ

ಮಾರ್ಚ್ ತಿಂಗಳ ಇಂಧನ ವಲಯದ ಮುಷ್ಕರಗಳ ಯಶಸ್ಸು ಏಪ್ರಿಲ್ ತಿಂಗಳಿನಲ್ಲಿ ಉತ್ತರ ಭಾರತದ ಪ್ರಮುಖ ಕೈಗಾರಿಕಾ ಹಬ್‌ಗಳಾದ ದಿಲ್ಲಿ-ಎನ್‌ಸಿಆರ್, ಮಾನೇಸರ್ ಹಾಗೂ ನೋಯ್ಡಾ ವಲಯಗಳಿಗೆ ಅತ್ಯಂತ ತೀವ್ರವಾಗಿ ಹರಡಿತು. ಏಪ್ರಿಲ್ 1 ರಂದು ಒಟ್ಟಿಗೆ ಜಾರ್ಖಂಡ್‌ನ ಎನ್‌ಟಿಪಿಸಿ ಪತ್ರಾತು, ಬಿಹಾರದ ಎನ್‌ಟಿಪಿಸಿ ನವಾನಗರ್, ಛತ್ತೀಸ್‌ಗಢದ ರಾಯ್‌ಖೇಡಾ ಅದಾನಿ ಪವರ್ ಹಾಗೂ ಪಾಣಿಪತ್ ಐಒಸಿಎಲ್‌ನಲ್ಲಿ ಹಳೆಯ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಏಕಕಾಲದಲ್ಲಿ ಮುಷ್ಕರಗಳು ಆರಂಭವಾದವು. ಇದರ ಬೆನ್ನಲ್ಲೇ, ಹರಿಯಾಣದ ಐಎಂಟಿ ಮಾನೇಸರ್ ವಲಯದ ಆಟೋಮೊಬೈಲ್ ಮತ್ತು ಗಾರ್ಮೆಂಟ್ಸ್ ಉತ್ಪಾದನಾ ಘಟಕಗಳು ಸಂಪೂರ್ಣ ಸ್ತಬ್ಧಗೊಂಡವು.

ಈ ಲೇಖನ ಓದಿದ್ದೀರಾ?: ಅಪ್ಪಳಿಸಲಿದೆ ಆರ್ಥಿಕ ದುರ್ದಿನಗಳ ಸುಂಟರಗಾಳಿ: ಈ ಹಿಂದಿನಂತೆ ಈ ಸಲವೂ ನಿಜವಾಗುತ್ತಾ ರಾಹುಲ್ ಭವಿಷ್ಯ?

ಏಪ್ರಿಲ್ 2ರಂದು ಹೋಂಡಾ ಕಾರ್ಖಾನೆಯ ಕಾರ್ಮಿಕರು ಆರಂಭಿಸಿದ ಮುಷ್ಕರವು ಎರಡು ದಿನಗಳ ಸತತ ಹೋರಾಟದ ನಂತರ ಜಯಗಳಿಸಿತು. ಇದು ಇಡೀ ವಲಯದ ಇತರೆ ಕಾರ್ಖಾನೆಗಳ ಕಾರ್ಮಿಕರಲ್ಲಿ ಹೊಸ ಭರವಸೆ ಮೂಡಿಸಿತು. ಈ ಭರವನೆಯೊಂದಿಗೆ, ಏಪ್ರಿಲ್ 4 ರಿಂದ 8ರ ಅವಧಿಯಲ್ಲಿ ಮುಂಜಾಲ್ ಶೋವಾ, ಸತ್ಯಂ ಆಟೋ ಕಾಂಪೊನೆಂಟ್ಸ್, ರೂಪ್ ಪಾಲಿಮರ್ಸ್, ರಿಚಾ ಗ್ಲೋಬಲ್‌ನ ವಿವಿಧ ಘಟಕಗಳು, ಮಾಡೆಲಾಮಾ ಎಕ್ಸ್‌ಪೋರ್ಟ್ಸ್, ರಿಕೋ ಆಟೋ, ಸುಪ್ರಾಜಿತ್ ಇಂಜಿನಿಯರಿಂಗ್, ಸಿರ್ಮಾ ಎಸ್‌ಜಿಎಸ್ ಟೆಕ್ನಾಲಜಿ ಹಾಗೂ ಪ್ರೆಕೋಲ್ ಲಿಮಿಟೆಡ್ ಸೇರಿದಂತೆ ಹತ್ತಾರು ಪ್ರಮುಖ ಕಾರ್ಖಾನೆಗಳ ಗುತ್ತಿಗೆ ಕಾರ್ಮಿಕರು ರಸ್ತೆಗಿಳಿದರು.

ಉತ್ತರ ಪ್ರದೇಶದ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ಕೈಗಾರಿಕಾ ವಲಯಗಳಲ್ಲಿ ಏಪ್ರಿಲ್ 9 ರಿಂದ 20 ರವರೆಗೆ ಮುಷ್ಕರದ ಅಲೆ ತಾರಕಕ್ಕೇರಿತು. ರಿಚಾ ಗ್ಲೋಬಲ್, ಮದರ್‌ಸನ್, ಲಕ್ಸರ್ ಇಂಟರ್ನ್ಯಾಷನಲ್, ಡಿಕ್ಸನ್, ಕೆಂಟ್ ಆರ್‌ಒ, ಐಸಿಎಲ್ ಲೈಟಿಂಗ್, ಆಟೋಮೊಬೈಲ್ ಬಿಡಿಭಾಗಗಳ ದೈತ್ಯ ಸ್ಪಾರ್ಕ್ ಮಿಂಡಾ, ಬಿಪಿಎಲ್ ಹಾಗೂ ಗ್ರೇಟರ್ ನೋಯ್ಡಾದಲ್ಲಿರುವ ಪ್ರಸಿದ್ಧ ಮೊಬೈಲ್ ಉತ್ಪಾದನಾ ಸಂಸ್ಥೆ ವಿವೋ ಕಾರ್ಖಾನೆಯ ಕಾರ್ಮಿಕರು ವೇತನ ಹೆಚ್ಚಳಕ್ಕಾಗಿ ಬೃಹತ್ ಪ್ರತಿಭಟನೆಗಳನ್ನು ನಡೆಸಿದರು. ಕೇವಲ ಕೈಗಾರಿಕಾ ಕಾರ್ಮಿಕರಷ್ಟೇ ಅಲ್ಲದೆ, ಸೆಕ್ಟರ್ 43ರ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳ ಸೆಕ್ಯುರಿಟಿ ಗಾರ್ಡ್‌ಗಳು ಸಹ ತಮ್ಮ ಶೋಷಣೆಯ ವಿರುದ್ಧ ಧರಣಿ ಕುಳಿತರು.

image 130 6

ಈ ಹೋರಾಟದ ಕಿಚ್ಚು ಹರಿಯಾಣದ ಫರಿದಾಬಾದ್‌ನ ಭಾರತ್ ಗೇರ್ಸ್ ಮತ್ತು ಸಾಯಿ ಆಟೋಮೊಬೈಲ್, ಉತ್ತರಾಖಂಡದ ರುದ್ರಾಪುರದಲ್ಲಿರುವ ವಾರೋಕ್ ಇಂಜಿನಿಯರಿಂಗ್, ಯಾಜಾಕಿ ಆಟೋಮೋಟಿವ್, ಹರಿದ್ವಾರದ ಪ್ರಮುಖ ಫಾರ್ಮಾಸ್ಯುಟಿಕಲ್ಸ್ ಕಂಪನಿಗಳು ಹಾಗೂ ಡೆಹ್ರಾಡೂನ್‌ನ ಡಿಕ್ಸನ್ ಫಾರ್ಮಾ ಸಂಸ್ಥೆಗಳಿಗೆ ವ್ಯಾಪಿಸಿತು. ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಭಿವಾಡಿ, ನೀಮ್ರಾನಾ ಹಾಗೂ ತಪುಕರ ಕೈಗಾರಿಕಾ ಪ್ರದೇಶಗಳ ನೂರಾರು ಸಣ್ಣ ಮತ್ತು ಬೃಹತ್ ಉತ್ಪಾದನಾ ಘಟಕಗಳ ಕಾರ್ಮಿಕರು ಈ ಬೃಹತ್ ದಂಗೆಯ ಭಾಗವಾದರು.

ಈ ಎಲ್ಲ ಪ್ರತಿಭಟನೆಗಳು ಬಹುತೇಕ ಯಶಸ್ವಿಯಾದವು. ಕೆಲಸದ ಸಮಯ, ಓವರ್‌ಟೈಮ್‌ಗೆ ದುಪ್ಪಟ್ಟು ವೇತನ, ಸುರಕ್ಷತಾ ಕ್ರಮಗಳ ಅನುಸರಣೆಗೆ ಕಂಪನಿಗಳು ಒಪ್ಪಿಕೊಂಡವು. ಹೋರಾಟದ ಮತ್ತೊಂದು ಮೈಲಿಗಲ್ಲಾಗಿ, ಹರಿಯಾಣದಲ್ಲಿ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಹೆಚ್ಚಿಸಬೇಕೆಂದು ಕಂಪನಿಗಳಿಗೆ ಕಡ್ಡಾಯ ಆದೇಶವನ್ನು ಹರಿಯಾಣ ಸರ್ಕಾರ ಹೊರಡಿಸಿತು.

ಕಾರ್ಮಿಕ ಮುಷ್ಕರದ ಅಲೆ ಮತ್ತು ಗಮನಿಸಬೇಕಾದ ಅಂಶಗಳು

ಈ ಮೂರು ತಿಂಗಳ ನಿರಂತರ ಹೋರಾಟಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಈ ಹೋರಾಟಗಳು ಭಾರತೀಯ ಕಾರ್ಮಿಕ ಚಳುವಳಿಯ ಸಾಂಪ್ರದಾಯಿಕ ಚೌಕಟ್ಟನ್ನು ಮೀರಿ, ಹೊಸ ಅಲೆಯನ್ನು ಸೃಷ್ಟಿಸಿವೆ. ಈ ಮುಷ್ಕರಗಳಲ್ಲಿ ಗಮನಿಸಬೇಕಾದ ಕೆಲ ಅಂಶಗಳೂ ಇವೆ.

1. ಗುತ್ತಿಗೆ ಕಾರ್ಮಿಕರೇ ಮುಖ್ಯ ಶಕ್ತಿ: ಇಡೀ ಚಳುವಳಿಯ ಅತ್ಯಂತ ಗಮನಾರ್ಹ ಅಂಶವೆಂದರೆ, ಎಲ್ಲ ಮುಷ್ಕರಗಳ ಮುಂಚೂಣಿಯಲ್ಲಿ ಮತ್ತು ತಳಮಟ್ಟದಲ್ಲಿ ನಿಂತವರು ಗುತ್ತಿಗೆ ಕಾರ್ಮಿಕರು. ಖಾಯಂ ನೌಕರರಿಗೆ ಸಿಗುವ ಯಾವುದೇ ಸೌಲಭ್ಯಗಳಿಲ್ಲದೆ, ಕನಿಷ್ಠ ವೇತನವಿಲ್ಲದೆ ಮತ್ತು ಹೆಚ್ಚಿನ ಶೋಷಣೆಗೆ ಒಳಗಾಗುವ ಈ ಕಾರ್ಮಿಕರು ಯಾವುದೇ ಅಧಿಕೃತ ಯೂನಿಯನ್‌ಗಳಿಗಾಗಿ ಕಾಯದೆ, ತಾವಾಗಿಯೇ ಸ್ವಯಂಪ್ರೇರಿತರಾಗಿ ರಸ್ತೆಗಿಳಿದಿದ್ದರು. ಆಶ್ಚರ್ಯಕರವಾಗಿ, ಈ ಹೋರಾಟಗಳಿಂದ ಬಹುತೇಕ ಕಾರ್ಖಾನೆಗಳ ಖಾಯಂ ನೌಕರರು ಮತ್ತು ಒಕ್ಕೂಟಗಳು ಸಂಪೂರ್ಣವಾಗಿ ದೂರ ಉಳಿದಿದ್ದವು ಅಥವಾ ತಟಸ್ಥವಾಗಿದ್ದವು.

2. ಕೇಂದ್ರ ಕಾರ್ಮಿಕ ಸಂಘಟನೆಗಳ ನಿಷ್ಕ್ರಿಯತೆ: ದೇಶದ ಪ್ರಮುಖ ಕೇಂದ್ರ ಕಾರ್ಮಿಕ ಸಂಘಟನೆಗಳ ಒಕ್ಕೂಟಗಳು (ಟ್ರೇಡ್‌ ಯೂನಿಯನ್‌) ತಳಮಟ್ಟದಲ್ಲಿ ಹಠಾತ್ತನೆ ಭುಗಿಲೆದ್ದ ಈ ಸ್ವಯಂಪ್ರೇರಿತ ಹೋರಾಟಗಳನ್ನು ಕಂಡು ದಿಗ್ಭ್ರಮೆಗೊಂಡವು. ಕಾರ್ಮಿಕರು ಬೀದಿಗೆ ಬಂದು ಹೋರಾಡುತ್ತಿದ್ದಾಗ ಈ ಸಂಘಟನೆಗಳು ಕೇವಲ ಮೌಖಿಕ ಬೆಂಬಲದ ಹೇಳಿಕೆಗಳನ್ನು ನೀಡುವುದಕ್ಕೆ ಸೀಮಿತವಾದವು. ಇದು ಭಾರತದಲ್ಲಿ ಸಾಂಪ್ರದಾಯಿಕ ಯೂನಿಯನ್‌ಗಳ ಮುಖಂಡತ್ವ ಕುಸಿಯುತ್ತಿರುವುದನ್ನು ತೋರಿಸುತ್ತದೆ.

3. ದಮನಕಾರಿ ಕ್ರಮಗಳ ನಡುವೆಯೂ ಮುಂದುವರಿದ ಹೋರಾಟ: ಮಾನೇಸರ್, ನೋಯ್ಡಾ ಮತ್ತು ಪಾಣಿಪತ್‌ಗಳಲ್ಲಿ ಆಡಳಿತ ಮಂಡಳಿಗಳು ಮತ್ತು ಪೊಲೀಸರು ಕಾರ್ಮಿಕರ ಧ್ವನಿಯನ್ನು ಅಡಗಿಸಲು ತೀವ್ರ ದಮನಕಾರಿ ನೀತಿಗಳನ್ನು ಬಳಸಿದರು. ಕಾರ್ಮಿಕ ಮುಖಂಡರ ಮೇಲೆ ಕೊಲೆ ಯತ್ನದಂತಹ ಗಂಭೀರ ಪ್ರಕರಣಗಳನ್ನು ದಾಖಲಿಸುವುದು, ಸಾಮೂಹಿಕ ಬಂಧನ ಮಾಡುವುದು ಹಾಗೂ ಕೆಲವು ಕಡೆಗಳಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯಂತಹ (NSA) ಅತ್ಯಂತ ಕಠಿಣ ಕಾನೂನುಗಳನ್ನು ಪ್ರಯೋಗಿಸಿದ ಹೊರತಾಗಿಯೂ, ಈ ಕಾರ್ಮಿಕರ ಒಗ್ಗಟ್ಟು ಕುಗ್ಗದೆ ದಿನದಿಂದ ದಿನಕ್ಕೆ ಇನ್ನೂ ಹಲವು ಕೈಗಾರಿಕಾ ವಲಯಗಳಿಗೆ ವಿಸ್ತರಿಸುತ್ತಲೇ ಸಾಗಿತು. ಈಗಲೂ ಸಾಗಿದೆ.

ಪ್ರಸ್ತುತ ಸಂದರ್ಭದಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವಿದೆ; ಭಾರತ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ನಾಲ್ಕು ಹೊಸ ‘ಕಾರ್ಮಿಕ ಸಂಹಿತೆಗಳು’ ಸಂಘಟಿತ ವಲಯದ ಕಾರ್ಮಿಕರ ಮುಷ್ಕರದ ಹಕ್ಕುಗಳನ್ನು ಮತ್ತು ಕಾನೂನಾತ್ಮಕ ರಕ್ಷಣೆಯನ್ನು ಗಮನಾರ್ಹವಾಗಿ ಮೊಟಕುಗೊಳಿಸುತ್ತವೆ ಎಂಬ ಆತಂಕ ಕಾರ್ಮಿಕ ವಲಯದಲ್ಲಿದೆ. ಈ ನೀತಿಗಳಿಗೆ ತಳಮಟ್ಟದ ಕಾರ್ಮಿಕ ವರ್ಗವು, ವಿಶೇಷವಾಗಿ ವಲಸೆ ಮತ್ತು ಗುತ್ತಿಗೆ ಕಾರ್ಮಿಕರು ಮುಷ್ಕರಗಳ ಮೂಲಕವೇ ತಮ್ಮ ಪ್ರಬಲ ಪ್ರತಿರೋಧ ನೀಡುತ್ತಿದ್ದಾರೆ. ಈ ನಿರಂತರ ಹೋರಾಟಗಳ ತೀವ್ರತೆಗೆ ಮಣಿದು ಈಗಾಗಲೇ ದೇಶದ ಮೂರು ಪ್ರಮುಖ ರಾಜ್ಯ ಸರ್ಕಾರಗಳು – ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ – ತಮ್ಮ ರಾಜ್ಯಗಳಲ್ಲಿ ಕನಿಷ್ಠ ವೇತನವನ್ನು ಅಧಿಕೃತವಾಗಿ ಹೆಚ್ಚಿಸಬೇಕಾದ ಅನಿವಾರ್ಯತೆಗೆ ಸಿಲುಕಿವೆ.

ಗಮನಾರ್ಹವಾಗಿ, ಹೋರಾಟ ಇಲ್ಲಿಗೇ ಮುಗಿದಿಲ್ಲ. ಕಾಗದದ ಮೇಲೆ ಘೋಷಣೆಯಾಗಿರುವ ಈ ಹೆಚ್ಚುವರಿ ವೇತನ ಮತ್ತು ಸೌಲಭ್ಯಗಳನ್ನು ಪ್ರತಿಯೊಂದು ಕಾರ್ಖಾನೆಯ ಮಾಲೀಕರು ಮತ್ತು ಗುತ್ತಿಗೆದಾರರು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಮಾಡಬೇಕಿದೆ. ಅದಕ್ಕಾಗಿ, ಕಾರ್ಮಿಕರು ನಿರಂತರ ಹೋರಾಟಗಳನ್ನು ನಡೆಸಲೇಬೇಕಿದೆ. ವಲಸೆ ಕಾರ್ಮಿಕರ ಒಕ್ಕೂಟಗಳು ಮತ್ತು ತಳಮಟ್ಟದ ಕಾರ್ಯಕರ್ತರ ವರದಿಗಳ ಪ್ರಕಾರ, ಈ ಮೂರು ತಿಂಗಳ ಅವಧಿಯು ಭಾರತದ ಶ್ರಮಿಕ ವರ್ಗದ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನು ಬರೆದಿದೆ. ಭವಿಷ್ಯದ ಉದ್ಯೋಗದ ಹಕ್ಕುಗಳು ಮತ್ತು ಕೈಗಾರಿಕಾ ಸಂಬಂಧಗಳನ್ನು ನಿರ್ಧರಿಸುವಲ್ಲಿ ಇದು ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ. ಇದರಲ್ಲಿ, ಯಾವುದೇ ಅನುಮಾನಗಳಿಲ್ಲ!

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹವಾಮಾನ ವರದಿ | ಮುಂದಿನ 3 ದಿನ ಗುಡುಗು ಸಹಿತ ಭಾರೀ ಮಳೆ

ಮನ್ನಾರ್ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮತ್ತು ಮೇಲ್ಮೈ ಸುಳಿಗಾಳಿಯ ಪ್ರಭಾವದಿಂದ...

ಬೀದರ್‌ | ವಿದ್ಯಾರ್ಥಿಗಳು ಸಮಯ ಪ್ರಜ್ಞೆ, ಶಿಸ್ತು ಮೈಗೂಡಿಸಿಕೊಳ್ಳಿ : ಜಯಕುಮಾರ ಶಿಂಧೆ

ಸಮಯ ಪ್ರಜ್ಞೆ ಹಾಗೂ ಶಿಸ್ತು ಮೈಗೂಡಿಸಿಕೊಳ್ಳುವುದರಿಂದ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು...

ಮುದ್ದೇಬಿಹಾಳದಲ್ಲಿ ತೀವ್ರ ಬರ; ಕಾಲುವೆಗಳಿಗೆ ನೀರು ಹರಿಸಲು ಶಾಸಕ ನಾಡಗೌಡ ಮನವಿ

ಬರದ ಬಿಸಿಲಿಗೆ ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕುಗಳ ಗ್ರಾಮೀಣ ಬದುಕು ತತ್ತರಿಸುತ್ತಿರುವ...

ಈ ದಿನ ಸಂಪಾದಕೀಯ | ಪ್ರಧಾನಿಗೂ ಸಿಗದ ʼಬಾರಾಖೂನ್ ಮಾಫಿʼ ಗ್ಯಾನೇಶ್ ಕುಮಾರ್‌ಗೆ ಯಾಕೆ? ಕೊಡಿಸಿದವರು ಯಾರು?

ಚುನಾವಣೆಯ ಕಾವಲುಗಾರನಿಗೆ ಕಾನೂನಿನ ಕವಚ ಕುಂಡಲಗಳನ್ನು ನೀಡಿ, ಕಾನೂನಿನ ಕೈಗಳು ಮುಟ್ಟದಂತೆ,...