ದೇಶಾದ್ಯಂತ ಎಸ್‌ಐಆರ್ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಕೋಟ್ಯಂತರ ಮತದಾರರನ್ನು ಕೈಬಿಡಲಾಗಿರುವುದನ್ನು ಆರೋಪಿಸಿ, ಅ.12ರಂದು ಬೀದರ್‌ನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ದುಲ್ ಮನ್ನಾನ್ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಕಾಂಗ್ರೆಸ್, ಸಿಪಿಐ(ಎಂ) ಹಾಗೂ ಸಿಪಿಐ ಮುಖಂಡರು ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿನ ಲೋಪಗಳು ಹಾಗೂ ಚುನಾವಣಾ ವ್ಯವಸ್ಥೆಯ ಪಾರದರ್ಶಕತೆ ಕುರಿತು ಆತಂಕ ವ್ಯಕ್ತಪಡಿಸಿದರು.

“ದೇಶದಲ್ಲಿ ಎಸ್‌ಐಆರ್ ಪ್ರಕ್ರಿಯೆಯಿಂದ ಸುಮಾರು 13 ಕೋಟಿ ಹಾಗೂ ಕರ್ನಾಟಕದಲ್ಲಿ 1 ಕೋಟಿಗೂ ಅಧಿಕ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಆರೋಪಗಳಿದ್ದು, ಎಸ್‌ಐಆರ್ ಪ್ರಕ್ರಿಯೆ ಹಾಗೂ ಚುನಾವಣಾ ಆಯೋಗದ ತಂತ್ರಗಾರಿಕೆ ಕುರಿತು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಪ್ರಕಟಿಸಿದ ವರದಿಯಲ್ಲಿ ಹಲವು ಅಂಶಗಳು ಬಹಿರಂಗವಾಗಿದ್ದು, ಮತದಾರರ ಹಕ್ಕುಗಳ ರಕ್ಷಣೆಗಾಗಿ ವಿರೋಧ ಪಕ್ಷಗಳು ಒಗ್ಗೂಡಿ ಹೋರಾಟ ನಡೆಸಬೇಕಿದೆ” ಎಂದರು.
“ಮತದಾನ ಹಕ್ಕು ಕಸಿಯುವ ಎಸ್‌ಐಆರ್ ವಿರೋಧಿಸಿ ಅ.10ರಂದು ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಕ್ಷ ಸೇರಿದಂತೆ ವಿರೋಧ ಪಕ್ಷಗಳು, ಯುವಜನರು ಪ್ರತಿಭಟನೆ ನಡೆಸಲು ಕರೆ ನೀಡಿದ್ದರು. ಆದರೆ ದೆಹಲಿ ಸರ್ಕಾರ ಅಲ್ಲಿನ 57 ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಿ, 50 ಸಾವಿರಕ್ಕೂ ಹೆಚ್ಚು ಅರೆಸೇನಾ ಪಡೆಗಳನ್ನು ನಿಯೋಜಿಸಿ, ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ನಡೆದೆ ಎಂದು ಆರೋಪಿಸಿದರು. ಯುವ ಹೋರಾಟಗಾರರು ಸೇರಿದಂತೆ ವಿರೋಧ ಪಕ್ಷಗಳ ನಾಯಕರನ್ನು ವಶಕ್ಕೆ ಪಡೆದಿರುವುದು ಖಂಡನೀಯ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಕ್ರಮಗಳನ್ನು ಪ್ರಶ್ನಿಸುವ ಜನರ ಹಕ್ಕನ್ನು ಕಸಿದುಕೊಳ್ಳಬಾರದು” ಎಂದು ಹೇಳಿದರು.
ಎಐಸಿಸಿ ನಿರ್ದೇಶನದಂತೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಹೋರಾಟ ತೀವ್ರಗೊಳಿಸಲಾಗುತ್ತಿದೆ. ಇದರ ಭಾಗವಾಗಿ ಅ.12ರಂದು ಬೆಳಿಗ್ಗೆ 11 ಗಂಟೆಗೆ ಬೀದರ್‌ನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಇಂಡಿಯಾ ಮೈತ್ರಿಕೂಟ ಪಕ್ಷಗಳಾದ ಸಿಪಿಐ ಮತ್ತು ಸಿಪಿಐ(ಎಂ) ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಿಪಿಐ(ಎಂ) ಮುಖಂಡ ಬಾಬುರಾವ ಹೊನ್ನಾ ಮಾತನಾಡಿ, “ಕೇಂದ್ರ ಸರ್ಕಾರ ಮತ್ತು ಆರ್‌ಎಸ್‌ಎಸ್ ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ ಎದುರಾಗಿದೆ. ಮಹಾರಾಷ್ಟ್ರ ಚುನಾವಣೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಎತ್ತಿರುವ ಇವಿಎಂ ಹಾಗೂ ಮತಗಳ್ಳತನದ ಪ್ರಶ್ನೆಗಳು ಗಂಭೀರವಾಗಿವೆ. ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇಂತಹ ದೂರುಗಳು ಕೇಳಿಬರುತ್ತಿವೆ. ಕಳೆದ ಒಂದು ದಶಕದಿಂದ ವಿಶ್ವವಿದ್ಯಾಲಯಗಳು, ಚುನಾವಣಾ ಆಯೋಗ ಸೇರಿದಂತೆ ಪ್ರಮುಖ ಸಂಸ್ಥೆಗಳ ಮೇಲೆ ಕೇಂದ್ರ ಸರ್ಕಾರ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ” ಎಂದು ದೂರಿದರು.
ದೇಶದಲ್ಲಿ ಕೋಮುವಾದಿ ಫ್ಯಾಸಿಸಂ ಅನ್ನು ವ್ಯವಸ್ಥಿತವಾಗಿ ಹೇರಲಾಗುತ್ತಿದೆ. ಇದು ಸಮಾಜವನ್ನು ವಿಭಜಿಸುವ ಅಪಾಯಕಾರಿ ಬೆಳವಣಿಗೆಯಾಗಿದ್ದು, ಸರ್ವಾಧಿಕಾರಿ ಧೋರಣೆಗಳ ವಿರುದ್ಧ ಧ್ವನಿ ಎತ್ತುವುದು ಇಂದಿನ ಅಗತ್ಯವಾಗಿದೆ. ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಖಚಿತಪಡಿಸಲು ಅಗತ್ಯ ಬದಲಾವಣೆಗಳನ್ನು ತರಬೇಕು. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗಾಗಿ ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳು ಒಗ್ಗೂಡಿ ಹೋರಾಟ ನಡೆಸಬೇಕು” ಎಂದು ಕರೆ ನೀಡಿದರು.
ಸಿಪಿಐ(ಎಂ) ಜಿಲ್ಲಾ ಮುಖಂಡ ಪ್ರಭು ಸಂತೋಷಕರ್ ಮಾತನಾಡಿ, “ಆಧಾರ್, ಪಾನ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆ ಹೊಂದಿರುವ ಭಾರತೀಯ ನಾಗರಿಕರು ಮತ್ತೆ ಮತ್ತೆ ತಮ್ಮ ಪೌರತ್ವವನ್ನು ಸಾಬೀತುಪಡಿಸುವ ಪರಿಸ್ಥಿತಿ ನಿರ್ಮಾಣವಾಗಬಾರದು. ಇಂತಹ ಪ್ರಕ್ರಿಯೆಗಳು ಜನರಲ್ಲಿ ಗೊಂದಲ ಸೃಷ್ಟಿಸುವುದರ ಜತೆಗೆ ಆದಿವಾಸಿಗಳು ಹಾಗೂ ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ಸಮುದಾಯಗಳ ಮೇಲೆ ಪರಿಣಾಮ ಬೀರಬಹುದು” ಎಂದು ಆತಂಕ ವ್ಯಕ್ತಪಡಿಸಿದರು.

ದೆಹಲಿಯಲ್ಲಿ ನಡೆಯುತ್ತಿರುವ ಶಾಂತಿಯುತ ಪ್ರತಿಭಟನೆಗಳ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದನ್ನು ಖಂಡಿಸಿದ ಅವರು, ಪ್ರಜಾಪ್ರಭುತ್ವದ ಹಕ್ಕುಗಳನ್ನು ಚಲಾಯಿಸಲು ಜನರಿಗೆ ಅವಕಾಶ ನೀಡಬೇಕು. ಸರ್ವಾಧಿಕಾರಿ ಧೋರಣೆಗಳ ವಿರುದ್ಧ ಎಲ್ಲರೂ ಒಗ್ಗೂಡಿ ಹೋರಾಡಬೇಕು ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ
ಪತ್ರಿಕಾಗೋಷ್ಠಿಯಲ್ಲಿ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದಕುಮಾರ ಅಪ್ಪೆ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್, ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಗೋವರ್ಧನ ರಾಠೋಡ, ಸಿಪಿಐ(ಎಂ) ಉಪಾಧ್ಯಕ್ಷೆ ರೇಷ್ಮಾ ಹಂಸರಾಜ, ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಶಫಾಯತ್ ಅಲಿ ಸೇರಿದಂತೆ ವಿವಿಧ ಮುಖಂಡರು ಉಪಸ್ಥಿತರಿದ್ದರು.




