ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ, ಸಿದ್ದಾರ್ಥ ಪದವಿ ಪೂರ್ವ ಕಾಲೇಜು, ಟೀಮ್ ಯುವಾ ಹಾಗೂ ಬುದ್ಧ ಬೆಳಕು ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಬೀದರ್ ಸಹಯೋಗದಲ್ಲಿ ಸೆ.29ರಂದು ಬೆಳಿಗ್ಗೆ 10.30ಕ್ಕೆ ಬೀದರ್ ನಗರದ ಸಿದ್ದಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ‘ನೀರು, ಬರ, ಪರಿಸರ ಮತ್ತು ಬೀದರಿನ ಕರೇಜ್ ಹಾಗೂ ನೀರಿನ ಭವಿಷ್ಯಕ್ಕೆ ಭೂತಕಾಲದ ಪಾಠ ವಿಷಯ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿದೆ.
ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅವರು ವಿಚಾರ ಸಂಕಿರಣವನ್ನು ಉದ್ಘಾಟಿಸುವರು. ಸಿದ್ದಾರ್ಥ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಏಕನಾಥ ಸುಣಗಾರ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಕರಾದಸಂಸ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಹಿರಿಯ ಪತ್ರಕರ್ತ ಶಶಿಕಾಂತ ಶೆಂಬೆಳ್ಳಿ, ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ವಿಠಲದಾಸ ಪ್ಯಾಗೆ, ಜ್ಞಾನೋದಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಕಾಶಿನಾಥ ಚೆಲ್ವಾ, ಕರ್ನಾಟಕ ಪಶುವೈದ್ಯಕೀಯ ವಿಶ್ವವಿದ್ಯಾಲಯದ ನಿವೃತ್ತ ಸಹಾಯಕ ರಿಜಿಸ್ಟ್ರಾರ್ ಕಂಟೆಪ್ಪಾ ಪೂಜಾರಿ ಹಾಗೂ ಸಾಮಾಜಿಕ ಕಾರ್ಯಕರ್ತ ಜಗದೀಶ್ವರ ಬಿರಾದಾರ್ ಭಾಗವಹಿಸುವರು.
ಟೀಂ ಯುವಾ ಮುಖ್ಯಸ್ಥ ವಿನಯಕುಮಾರ ಮಾಳಗೆ ಅವರು ‘ನೀರು, ಬರ, ಪರಿಸರ ಮತ್ತು ಬೀದರಿನ ಕರೇಜ್- ನೀರಿನ ಭವಿಷ್ಯಕ್ಕೆ ಭೂತಕಾಲದ ಪಾಠ’ ವಿಷಯ ಕುರಿತು ವಿಷಯ ಮಂಡನೆ ಮಾಡಲಿದ್ದಾರೆ.
ಕರ್ನಾಟಕ ವಿದ್ಯಾವರ್ಧಕ ಸಂಘದ ಜಿಲ್ಲಾ ಸಂಚಾಲಕ ಮಹೇಶ ಗೋರನಾಳಕರ್ ಪ್ರಾಸ್ತಾವಿಕವಾಗಿ ಮಾತನಾಡುವರು. ಸಂಘದ ಜಿಲ್ಲಾ ಸಮಿತಿ ಸದಸ್ಯರು ಉಪಸ್ಥಿತರಿರುವರು. ಸಂಘದ ಸದಸ್ಯ ಶಾಮರಾವ ನೆಲವಾಡೆ ನಿರೂಪಿಸುವರು. ಸದಸ್ಯ ರಮೇಶ ಹಡಪದ ಸ್ವಾಗತಿಸುವರು. ಬುದ್ಧ ಬೆಳಕು ಟ್ರಸ್ಟ್ ಕಾರ್ಯದರ್ಶಿ ಕಲ್ಪನಾ ಗೋರನಾಳಕರ್ ವಂದಿಸುವರು.
ಇದನ್ನೂ ಓದಿ : ಬೀದರ್ | ಶಿಕ್ಷಕರು ಸಮಾಜದ ಭವಿಷ್ಯ ನಿರ್ಮಿಸುವ ಶಿಲ್ಪಿಗಳು: ಪುಣ್ಯವತಿ ವಿಸಾಜಿ
ವಿಚಾರ ಸಂಕಿರಣದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು, ಪರಿಸರಾಸಕ್ತರು ಹಾಗೂ ನೀರಿನ ಸಂರಕ್ಷಣೆಯಲ್ಲಿ ಆಸಕ್ತಿ ಹೊಂದಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರ್ನಾಟಕ ವಿದ್ಯಾವರ್ಧಕ ಸಂಘದ ಜಿಲ್ಲಾ ಸಂಚಾಲಕ ಮಹೇಶ ಗೋರನಾಳಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




