ಶಿಕ್ಷಕರು ಕೇವಲ ಪಾಠ ಬೋಧಿಸುವವರಲ್ಲ. ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ಜೊತೆಗೆ ಸಮಾಜದ ಭವಿಷ್ಯ ನಿರ್ಮಾಣದಲ್ಲೂ ಮಹತ್ವದ ಪಾತ್ರ ವಹಿಸುತ್ತಾರೆ ಎಂದು ಹಿರಿಯ ಸಾಹಿತಿ ಪುಣ್ಯವತಿ ವಿಸಾಜಿ ಹೇಳಿದರು.
ಬೀದರ್ ನಗರದ ಕುಂಬಾರವಾಡ ರಸ್ತೆಯ ಅತಿವಾಳೆ ಸಾಂಸ್ಕೃತಿಕ ಸಭಾಂಗಣದಲ್ಲಿ ಶನಿವಾರ ಸಮಾಜ ಸೇವಾ ಸಮಿತಿ ಬೆಂಗಳೂರು, ಜಿಲ್ಲಾ ಶಾಖೆ ಬೀದರ್ ಹಾಗೂ ಜನಪರ ಸಾಂಸ್ಕೃತಿಕ ಪ್ರತಿಷ್ಠಾನ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಅಂಗವಾಗಿ ಉಪನ್ಯಾಸ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
“ಶಿಕ್ಷಕರು ತಮ್ಮ ವೃತ್ತಿಯನ್ನು ಸೇವಾ ಮನೋಭಾವದಿಂದ ನಿರ್ವಹಿಸಬೇಕು. ವಿದ್ಯಾರ್ಥಿಗಳಿಗೆ ವಿಷಯ ಜ್ಞಾನದ ಜತೆಗೆ ಮಾನವೀಯ ಮೌಲ್ಯಗಳು, ಸಾಮಾಜಿಕ ಜವಾಬ್ದಾರಿ, ಸಮಾನತೆ ಹಾಗೂ ಸಹಬಾಳ್ವೆಯ ಮಹತ್ವವನ್ನು ತಿಳಿಸಬೇಕು. ಶಿಕ್ಷಕರ ಮಾರ್ಗದರ್ಶನದಿಂದ ಉತ್ತಮ ನಾಗರಿಕರನ್ನು ರೂಪಿಸಲು ಸಾಧ್ಯ” ಎಂದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ ಅಧ್ಯಕ್ಷತೆವಹಿಸಿ ಮಾತನಾಡಿ, “ಸಮಾಜದ ಅಭಿವೃದ್ಧಿಯಲ್ಲಿ ಶಿಕ್ಷಕರ ಕೊಡುಗೆ ಅಪಾರವಾಗಿದೆ. ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿ ಮೂಡಿಸುವ ಮೂಲಕ ಅವರ ಬದುಕಿನಲ್ಲಿ ಬದಲಾವಣೆ ತರಲು ಶಿಕ್ಷಕರು ಶ್ರಮಿಸಬೇಕು” ಎಂದರು.
ಸಮಾಜ ಸೇವಾ ಸಮಿತಿ ಕಾರ್ಯದರ್ಶಿ ಬಿ.ಎಂ.ಶಶಿಕಲಾ ಪ್ರಾಸ್ತಾವಿಕವಾಗಿ ಮಾತನಾಡಿ, “ಸಮಾಜದ ಶೈಕ್ಷಣಿಕ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಉತ್ತಮ ಶಿಕ್ಷಕರನ್ನು ಗುರುತಿಸಿ ಅವರ ಸೇವೆಯನ್ನು ಗೌರವಿಸುವ ಕಾರ್ಯ ಶ್ಲಾಘನೀಯವಾಗಿದೆ” ಎಂದರು.
ನಿವೃತ್ತ ಪ್ರಾಧ್ಯಾಪಕಿ ಡಾ.ಭಾಗೀರಥಿ ಕೊಂಡ ವಿಶೇಷ ಉಪನ್ಯಾಸ ನೀಡಿ, “ಶಿಕ್ಷಕರ ವ್ಯಕ್ತಿತ್ವ ಹಾಗೂ ಬೋಧನಾ ಗುಣಮಟ್ಟ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಆದ್ದರಿಂದ ಶಿಕ್ಷಕರು ನಿರಂತರ ಅಧ್ಯಯನಶೀಲರಾಗಿದ್ದು, ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಕೇವಲ ಅಂಕ ಗಳಿಸುವ ಮನೋಭಾವ ಬೆಳೆಸುವುದಕ್ಕಿಂತ ಮಾನವೀಯ ಮೌಲ್ಯಗಳು, ಶಿಸ್ತು, ಸಾಮಾಜಿಕ ಹೊಣೆಗಾರಿಕೆ ಹಾಗೂ ಉತ್ತಮ ಚಿಂತನೆ ಬೆಳೆಸುವತ್ತ ಶಿಕ್ಷಕರು ಗಮನ ಹರಿಸಬೇಕು” ಎಂದು ಹೇಳಿದರು.

ಸಮಾರಂಭದಲ್ಲಿ ನಿವೃತ್ತ ಪ್ರಾಚಾರ್ಯ ಅಶೋಕ ಬೂದಿಹಾಳ, ಬೆಳಗು ಸಾಂಸ್ಕೃತಿಕ ಮತ್ತು ಸಾಮಾಜಿಕ ಟ್ರಸ್ಟ್ ಅಧ್ಯಕ್ಷ ಅನಿಲಕುಮಾರ ದೇಶಮುಖ, ಬಿಆರ್‌ಪಿ ಗಾಯಿತ್ರಿ ನಾಗೇಂದ್ರ ಕಮಲಾಪುರೆ ಸೇರಿದಂತೆ ಇತರರಿದ್ದರು. ವಿದ್ಯಾರ್ಥಿಗಳಾದ ರಾಮೇಶ್ವರಿ ನಾಗನಾಥ, ದಿವ್ಯಾಶ್ರೀ, ಜಗದೀಶ ಹಾಗೂ ಸಂಸ್ಕೃತಿ ವಿದ್ಯಾಲಯ ಪಟ್ಟದ್ದೇವರ ಪ್ರಸಾದ ನಿಲಯದ ವಿದ್ಯಾರ್ಥಿಗಳು ಭಾಷಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶ್ರೀಲತಾ ಅತಿವಾಳೆ ಸ್ವಾಗತಿಸಿದರು. ಪ್ರೇಮ್ ಅವಿನಾಶ ನಿರೂಪಿಸಿದರು. ಸರಿತಾ ಹುಡಗಿಕರ್ ವಂದಿಸಿದರು. ಸಮಿತಿ ಜಿಲ್ಲಾ ಶಾಖೆ ಸಂಚಾಲಕ ಮಹಾದೇವಿ ಬಿರಾದಾರ ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್ | ಅಂಬೇಡ್ಕರ್ ಚಿಂತನೆ ವಿದ್ಯಾರ್ಥಿಗಳ ಬದುಕಿಗೆ ಮಾರ್ಗದರ್ಶನವಾಗಲಿ: ಸಿದ್ರಾಮ ಸಿಂಧೆ
ಗೌರವ ಡಾಕ್ಟರೇಟ್ ಪುರಸ್ಕೃತರಾದ ಡಾ. ಎಸ್.ಎಂ.ಜನವಾಡಕರ್ ಹಾಗೂ ಡಾ.ಶಿವಯ್ಯಾ ಸ್ವಾಮಿ ಅವರನ್ನು ವಿಶೇಷವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಿಗೆ ‘ಉತ್ತಮ ಶಿಕ್ಷಕ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಹಣಮಂತರಾವ ಘೋಡಂಪಳ್ಳಿ, ವಿಜಯಕುಮಾರ ಗೌರೆ, ರಾಜಮ್ಮ ಚಿಕಪೇಟೆ, ಶ್ರೀದೇವಿ ಚಾಂಡೆಶ್ವರೆ, ಪ್ರಭಾವತಿ ಕುಲಕರ್ಣಿ, ಶಾಂತಮ್ಮ ಕಲ್ಲಪ್ಪ, ವಿದ್ಯಾವತಿ ನೌಬಾದೆ ಹಾಗೂ ಶಶಿಕಲಾ ಟಿ. ಅವರನ್ನು ಸನ್ಮಾನಿಸಲಾಯಿತು.




