ಡಾ.ಬಿ.ಆರ್.ಅಂಬೇಡ್ಕರ ಅವರು ಕೇವಲ ದಲಿತ ಸಮುದಾಯದ ನಾಯಕರಲ್ಲ. ಅವರು ಇಡೀ ಮನುಕುಲದ ನಾಯಕರಾಗಿದ್ದು, ಭಾರತದ ಹೃದಯವೇ ಅಂಬೇಡ್ಕರ್ ಎಂದು ಬೀದರ್ ವಿಶ್ವವಿದ್ಯಾಲಯದ ವಿಶ್ರಾಂತ ಡೀನ್ ಡಾ.ಜಗನ್ನಾಥ ಹೆಬ್ಬಾಳೆ ಅಭಿಪ್ರಾಯಪಟ್ಟರು.
ಬೀದರ್ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ‘ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮ’ ಹಾಗೂ ಪ್ರಬಂಧ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
“ಅಂಬೇಡ್ಕರ್ ಅವರು ಅಪಾರ ಜ್ಞಾನ ಹೊಂದಿದ್ದ ಮಹಾನ್ ಚಿಂತಕರಾಗಿದ್ದರು. ಅವರೇ ಒಂದು ನಿಘಂಟಿನಂತಿದ್ದರು. ಅವರ ಮನೆಯಲ್ಲಿ ಸುಮಾರು 50 ಸಾವಿರ ಪುಸ್ತಕಗಳಿದ್ದವು ಎನ್ನುವುದು ಅವರ ಓದು ಮತ್ತು ಅಧ್ಯಯನದ ಆಳವನ್ನು ತೋರಿಸುತ್ತದೆ. ಪುಸ್ತಕ ಓದುವುದು ಮತ್ತು ಜ್ಞಾನ ಸಂಪಾದಿಸುವುದು ಅವರ ಜೀವನದ ಅವಿಭಾಜ್ಯ ಅಂಗವಾಗಿತ್ತು” ಎಂದು ಹೇಳಿದರು.
ಶಿಕ್ಷಕ ಸಿಂಗೆ ಸೂರ್ಯಕಾಂತ ಮಾತನಾಡಿ, “ಡಾ. ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಜೀವನದಲ್ಲಿ ಎದುರಿಸಿದ ಅವಮಾನ, ಅಸ್ಪೃಶ್ಯತೆ ಹಾಗೂ ಸಾಮಾಜಿಕ ಅಪಮಾನಗಳನ್ನು ಮೆಟ್ಟಿನಿಂತು, ತಮ್ಮ ಛಲವನ್ನು ಎಂದಿಗೂ ಬಿಡದೆ ದೇಶದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಎಂಬ ಉದ್ದೇಶದಿಂದ ಸಂವಿಧಾನ ರಚಿಸಿ ಭವ್ಯ ಭಾರತಕ್ಕೆ ಅರ್ಪಿಸಿದ್ದಾರೆ” ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದೇಶಕ ಸಿದ್ರಾಮ ಸಿಂಧೆ ಮಾತನಾಡಿ, “ಈ ಕಾರ್ಯಕ್ರಮವು ಶಾಲಾ-ಕಾಲೇಜುಗಳಲ್ಲಿ ಮಾಡುವುದರಿಂದ ಮಕ್ಕಳಲ್ಲಿ ಅಂಬೇಡ್ಕರ್ ಅವರ ವಿಚಾರ ಧಾರೆಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಮೂಲಕ ಸಮಾನತೆ, ಸಾಮಾಜಿಕ ನ್ಯಾಯ, ಶಿಕ್ಷಣದ ಮಹತ್ವ ಹಾಗೂ ಸಂವಿಧಾನದ ಆಶಯಗಳ ಕುರಿತು ಅರಿವು ಮೂಡಿಸಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ. ಸರ್ಕಾರ ರೂಪಿಸಿರುವ ಇಂತಹ ಮಹತ್ವದ ಕಾರ್ಯಕ್ರಮಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು” ಎಂದು ಸಲಹೆ ನೀಡಿದರು.

ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ಸುಪ್ರಿಯಾ ಸಂಜುಕುಮಾರ ಪ್ರಥಮ ಸ್ಥಾನ, ನಂದಿನಿ ಪಾಂಡುರಂಗ ದ್ವಿತೀಯ ಸ್ಥಾನ, ಅಂಕಿತ ಅನಿಲ್ ತೃತೀಯ ಸ್ಥಾನ ಪಡೆದರೆ, ಸುಮಾ ದೀಪಕ, ಭಾಗ್ಯಲಕ್ಷ್ಮಿ ಹನುಮಂತ್ ಅವರಿಗೆ ಸಮಾಧಾನಕರ ಬಹುಮಾನಗಳನ್ನು ಪುಸ್ತಕ ರೂಪದಲ್ಲಿ ನೀಡಿ, ಪ್ರಮಾಣ ಪತ್ರ ವಿತರಿಸಲಾಯಿತು.
ಇದನ್ನೂ ಓದಿ : ಬೀದರ್ | ಸಂವಿಧಾನ ಮೌಲ್ಯಗಳಿಂದ ಸಾಮರಸ್ಯ ಸಮಾಜ ನಿರ್ಮಾಣ : ಸಚಿವ ಈಶ್ವರ ಖಂಡ್ರೆ
ಕಾಲೇಜಿನ ಪ್ರಾಂಶುಪಾಲ ವಿಜಯಕುಮಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರೌಢ ವಿಭಾಗದ ಉಪ ಪ್ರಾಂಶುಪಾಲ ಗುಂಡಪ್ಪ ಹುಡಗೆ, ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಜಗದೇವಿ ಭೋಸ್ಲೆ, ಮೌಲಾನ ಅಬುಲ್ ಕಲಾಂ ಆಜಾದ್ ಶಾಲೆ ಪ್ರಾಚಾರ್ಯ ನಾಗನಾಥ ಪಾಟೀಲ್, ಕಲಾವಿದ ಶಂಭುಲಿಂಗ ವಾಲ್ದೋಡ್ಡಿ, ಕುಮಾರಿ. ಕ್ಲೈಮೆಂಟಿನಾ, ಗುರುರಾಜ್, ಪ್ರವೀಣ ಹಾಗೂ ಕಾಲೇಜಿನ ಉಪನ್ಯಾಸಕರು ಮಕ್ಕಳು ಉಪಸ್ಥಿತರಿದ್ದರು. ಸಂಜುಕುಮಾರ ಸ್ವಾಗತಿಸಿದರು, ಬಸವರಾಜ ಮಯೂರ್ ನಿರೂಪಿಸಿದರು, ಮಹಮ್ಮದ್ ಮಾಜೀದ್ ವಂದಿಸಿದರು.




