ಸಿಇಸಿ ಗ್ಯಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸುವುದು ಮಾತ್ರವಲ್ಲ, ದೇಶದ್ರೋಹದ ಆರೋಪದಡಿ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ನವದೆಹಲಿಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಸಿಇಸಿ ಅವರ ಸಾಂಕೇತಿಕ “ಸಾರ್ವಜನಿಕ ಮಹಾಭಿಯೋಗ” ಕಾರ್ಯಕ್ರಮದಲ್ಲಿ ಅವರು ಈ ಕಠಿಣ ಮಾತುಗಳನ್ನಾಡಿದರು. ಕಾಂಗ್ರೆಸ್ ಈ ಕಾರ್ಯಕ್ರಮವನ್ನು ‘ಅಣಕು ಸಂಸತ್ತು’ ಎಂದು ಆಯೋಜಿಸಲು ಯೋಜಿಸಿ, ಬಳಿಕ ‘ಸಾರ್ವಜನಿಕ ಮಹಾವಿಯೋಗ’ ಎಂದು ಮರುನಾಮಕರಣ ಮಾಡಲಾಗಿತ್ತು. ಶುಕ್ರವಾರ ಮಳೆಯಿಂದಾಗಿ ಕಾರ್ಯಕ್ರಮ ಒಂದು ದಿನ ಮುಂದೂಡಲ್ಪಟ್ಟಿತ್ತು.
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ ರಾಹುಲ್, ದೇಶದ ಶೇಕಡಾ 15ರಷ್ಟು, ಅಂದರೆ 13.3 ಕೋಟಿ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಮತ್ತು ಗೆದ್ದವರ ನಡುವಿನ ಮತಗಳ ಅಂತರ ಕೇವಲ ಶೇಕಡಾ 3ರಷ್ಟಿತ್ತು. ಆದರೆ, 13.3 ಕೋಟಿ ಮತಗಳನ್ನು ಅಳಿಸಿಹಾಕಿ 2024ರ ಚುನಾವಣೆ ಕಾನೂನುಬದ್ಧವಾಗಿತ್ತು ಎಂದು ವಾದಿಸಲು ಸಾಧ್ಯವಿಲ್ಲ. ಚುನಾವಣಾ ಆಯೋಗದ ಕ್ರಮಗಳಿಂದ 2024ರ ಲೋಕಸಭಾ ಚುನಾವಣೆ ಸಂಪೂರ್ಣ ಅಕ್ರಮವಾಗಿದೆ ಮತ್ತು ಅಕ್ರಮವಾಗಿ ಬಿಜೆಪಿ ನಾಯಕರು ಲೋಕಸಭೆ ಪ್ರವೇಶಿಸಿದ್ದಾರೆ ಎಂದು ಅವರು ಟೀಕಿಸಿದರು.
ಗ್ಯಾನೇಶ್ ಕುಮಾರ್ ಅವರು ಸಿಇಸಿ ಆಗಿ ಮುಂದುವರಿಯಲು ಸಾಧ್ಯವಿಲ್ಲ, ಅವರನ್ನು ಕೆಳಗಿಳಿಸಲು ನಮ್ಮ ಬಳಿ ಸಾಕಷ್ಟು ಪುರಾವೆಗಳಿವೆ ಎಂದು ರಾಹುಲ್ ಸ್ಪಷ್ಟಪಡಿಸಿದರು. ಇದು ಕೇವಲ ಸಂಸದರು ಮತ್ತು ಸಾಮಾನ್ಯ ನಾಗರಿಕರ ಸಭೆಯಂತೆ ಕಾಣಬಹುದು, ಆದರೆ ವಾಸ್ತವದಲ್ಲಿ, ಭಾರತೀಯರ ಮತಗಳನ್ನು ನಾಶಮಾಡಲು ಶಾಮೀಲಾಗಿರುವ ಗ್ಯಾನೇಶ್ ಕುಮಾರ್ ಅವರಿಂದ ಹಿಡಿದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರವರೆಗಿನ ಪ್ರತಿಯೊಬ್ಬರನ್ನೂ ಗುರಿ ಮಾಡಲಾಗಿರುವ ಅತ್ಯಂತ ಅಪಾಯಕಾರಿ ರಾಜಕೀಯ ಅಸ್ತ್ರ ಇದಾಗಿದೆ ಎಂದು ಅವರು ಹೇಳಿದರು. ಸಂಸ್ಥೆಗಳ ಹಿಂದೇಗಡೆ ಅವರು ಶಾಶ್ವತವಾಗಿ ಅಡಗಿತಿರಲು ಸಾಧ್ಯವಿಲ್ಲ, ಒಂದು ದಿನ ಅವರು ದೇಶದ ಜನರ ಪ್ರತಿನಿಧಿಗಳನ್ನು ಎದುರಿಸಲೇಬೇಕಾಗುತ್ತದೆ ಎಂದು ಗುಡುಗಿದ ಅವರು, ನಾವು ಇದನ್ನು ಕ್ಷಮಿಸುವುದಿಲ್ಲ ಮತ್ತು ಮರೆಯುವುದಿಲ್ಲ ಎಂದು ಎಚ್ಚರಿಸಿದರು.
ಪ್ರಜಾಪ್ರಭುತ್ವದ ಎಲ್ಲಾ ಸಂಸ್ಥೆಗಳ ಬಾಗಿಲು ನಮಗೆ ಮುಚ್ಚಲಾಗಿದೆ. ಹೀಗೆ ಎಲ್ಲವೂ ಬಂದ್ ಆಗಿರುವುದರಿಂದ ವಿರೋಧ ಪಕ್ಷದ ನಾಯಕನ ಮನೆಯ ಉದ್ಯಾನವನದಲ್ಲಿ ಕುಳಿತು ಸಿಇಸಿ ಮಹಾಭಿಯೋಗದ ಬಗ್ಗೆ ಚರ್ಚಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ಇತಿಹಾಸದಲ್ಲೇ ಹಿಂದೆಂದು ನಡೆದಿರದ ಅತ್ಯಂತ ಅಸಂಬದ್ಧ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಖರ್ಗೆ ಅವರು ಮಂಡಿಸಿದ ಸಿಇಸಿ ವಜಾ ನಿರ್ಣಯವನ್ನು ಸಭೆಯಲ್ಲಿದ್ದ 250 ವಿಪಕ್ಷ ಸಂಸದರು, ನಾಗರಿಕ ಸಮಾಜದ ಸದಸ್ಯರು ಮತ್ತು ಮಾಧ್ಯಮದವರು ಒಮ್ಮತದಿಂದ ಕೈಎತ್ತುವುದರ ಮೂಲಕ ಬೆಂಬಲಿಸಿದರು. ಈ ಅಧಿವೇಶನದಲ್ಲಿ ವಿವಿಧ ಪಕ್ಷಗಳ ನಾಯಕರು, ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾದವರು ಹಾಗೂ ಸಾಮಾಜಿಕ ಕಾರ್ಯಕರ್ತೆ ನೇಹಾ ಬೋರಾ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಗ್ಯಾನೇಶ್ ಕುಮಾರ್ ವಿರುದ್ಧ ಪ್ರಮುಖ ಆರೋಪಗಳು:
- ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಲು ಸಂಚು ರೂಪಿಸಿರುವುದು.
- 13.2 ಕೋಟಿ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿರುವುದು.
- ಸಂಸತ್ತಿನ ಅನುಮೋದನೆಯಿಲ್ಲದೆ ಮತದಾರರ ನೋಂದಣಿಗೆ ಸಂಬಂಧಿಸಿದ ‘ಫಾರ್ಮ್ 6’ ಅನ್ನು ಬದಲಾಯಿಸಿರುವುದು.
- ಇಸಿನೆಟ್ (ECINET) ಆನ್ಲೈನ್ ವ್ಯವಸ್ಥೆಯ ಮೂಲಕ ಮತದಾರರ ಪಟ್ಟಿಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿರುವುದು.
- ಇತರ ಇಬ್ಬರು ಚುನಾವಣಾ ಆಯುಕ್ತರನ್ನು ನಿರ್ಲಕ್ಷಿಸಿ, ಪ್ರಕ್ರಿಯೆಯಿಂದ ಹೊರಗಿಟ್ಟಿರುವುದು.
- ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ನಿರ್ದೇಶನದಂತೆ ಕಾರ್ಯನಿರ್ವಹಿಸಿರುವುದು.




