ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆ ಹಾಗೂ ಯುವಜನರಲ್ಲಿ ಸಂವಿಧಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನ.26ರಂದು ಸಂಜೆ 5 ಗಂಟೆಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ‘ಸಂವಿಧಾನ ಉಳಿಸಿ, ಪ್ರಜಾಪ್ರಭುತ್ವ ಉಳಿಸಿ’ ಘೋಷವಾಕ್ಯದಡಿ ಬೃಹತ್ ಜನಾಂದೋಲನ ಸಮಾವೇಶ ಆಯೋಜಿಸಲಾಗಿದೆ ಎಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅಂಬಾದಾಸ್ ಗಾಯಕವಾಡ್ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಹಾಗೂ ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, “ಭಾರತದ ಸಂವಿಧಾನವನ್ನು 1949ರ ನವೆಂಬರ್ 26ರಂದು ಅಂಗೀಕರಿಸಲಾಗಿದ್ದು, ಸಂವಿಧಾನ ದಿನದ ಅಂಗವಾಗಿ ಈ ಬಾರಿ ಬೃಹತ್ ಜನಾಂದೋಲನದ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ” ಎಂದರು.
ಕರ್ನಾಟಕ ದಲಿತ ರಕ್ಷಣಾ ವೇದಿಕೆಯು 2008ರಿಂದ ನಿರಂತರವಾಗಿ ಸಂವಿಧಾನ ದಿನಾಚರಣೆ ಆಚರಿಸಿಕೊಂಡು ಬರುತ್ತಿದ್ದು, ಈ ಬಾರಿ ಜಿಲ್ಲೆಯ ವಿವಿಧ ದಲಿತ ಸಂಘಟನೆಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಿ ಸುಮಾರು 5-10 ಸಾವಿರ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಸಂವಿಧಾನ ಸಂರಕ್ಷಣಾ ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿ ಅನೀಲಕುಮಾರ ಬೆಲ್ದಾರ್ ಮಾತನಾಡಿ, “ಡಾ.ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನವು ದೇಶದ ಪ್ರಜಾಪ್ರಭುತ್ವದ ಆಧಾರ ಸ್ತಂಭವಾಗಿದೆ. ಜಾತಿ, ಧರ್ಮ, ವರ್ಗದ ಭೇದವಿಲ್ಲದೆ ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಹಾಗೂ ಮೂಲಭೂತ ಹಕ್ಕುಗಳನ್ನು ಕಲ್ಪಿಸಿರುವ ಸಂವಿಧಾನದ ಆಶಯಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವುದು ಎಲ್ಲರ ಜವಾಬ್ದಾರಿಯಾಗಿದೆ” ಎಂದರು.
ದೇಶದಲ್ಲಿ ಕೆಲವು ಜಾತೀಯವಾದಿ ಹಾಗೂ ಕೋಮುವಾದಿ ಶಕ್ತಿಗಳು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ. ಜನಸಾಮಾನ್ಯರ ಹಕ್ಕುಗಳು ಹಾಗೂ ಪತ್ರಿಕಾ ಸ್ವಾತಂತ್ರ್ಯದ ವಿಚಾರದಲ್ಲಿಯೂ ಆತಂಕಕಾರಿ ಬೆಳವಣಿಗೆಗಳು ನಡೆಯುತ್ತಿವೆ ಎಂದು ಆರೋಪಿಸಿದರು.
ಸಮಾವೇಶದಲ್ಲಿ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ, ನೇಹಾ ಬೋರಾ, ನೇಹಾ ಸಿಂಗ್ ರಾಥೋಡ್ ಸೇರಿದಂತೆ ರಾಷ್ಟ್ರಮಟ್ಟದ ಹೋರಾಟಗಾರರು ಹಾಗೂ ಚಿಂತಕರು ಭಾಗವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಂದ ಕಾರ್ಯಕ್ರಮ ಉದ್ಘಾಟಿಸಲು ಉದ್ದೇಶಿಸಲಾಗಿದೆ.
ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಸೂರ್ಯವಂಶಿ ವೆಂಕಟೇಶ್, ಗೌರವಾಧ್ಯಕ್ಷ ದೇವೇಂದ್ರ ರಾಮಚಂದ್ರ ಸೂರಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಜನಪ್ರತಿನಿಧಿಗಳು, ಸಾಹಿತಿಗಳು ಹಾಗೂ ಪ್ರಗತಿಪರ ಚಿಂತಕರನ್ನು ಆಹ್ವಾನಿಸಲಾಗುತ್ತಿದೆ ಎಂದು ತಿಳಿಸಿದರು.
ಹುಮನಾಬಾದ್ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ರಮೇಶ ಡಾಕುಳಗಿ ಮಾತನಾಡಿ, “ಪ್ರಜಾಪ್ರಭುತ್ವವು ಕೇವಲ ಮತದಾನಕ್ಕೆ ಸೀಮಿತವಾದ ವ್ಯವಸ್ಥೆಯಲ್ಲ. ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶ, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಗೌರವಯುತ ಬದುಕನ್ನು ಖಾತ್ರಿಪಡಿಸುವ ವ್ಯವಸ್ಥೆಯಾಗಿದೆ. ಇಂದಿನ ಯುವಜನತೆ ಹಾಗೂ ಹೊಸ ಪೀಳಿಗೆಯಲ್ಲಿ ಸಂವಿಧಾನದ ಮಹತ್ವದ ಕುರಿತು ಅರಿವು ಮೂಡಿಸುವುದು ಅತ್ಯಗತ್ಯ” ಎಂದರು.
ಮಾಜಿ ನಗರಸಭೆ ಸದಸ್ಯ ಬಾಬುರಾವ ಪಾಸ್ವಾನ್ ಮಾತನಾಡಿ, “ಸಮಾವೇಶದ ಯಶಸ್ಸಿಗಾಗಿ ಜಿಲ್ಲೆಯ ಎಂಟು ತಾಲೂಕುಗಳಲ್ಲಿ ಜಾಗೃತಿ ಪ್ರವಾಸ ಕೈಗೊಳ್ಳಲು ನಿರ್ಧರಿಸಲಾಗಿದೆ. ದಲಿತಪರ, ಪ್ರಗತಿಪರ ಹಾಗೂ ಸಂವಿಧಾನಪರ ಸಂಘಟನೆಗಳ ಮುಖಂಡರನ್ನು ಸಂಪರ್ಕಿಸಿ, ಎಲ್ಲರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು. ಸಂವಿಧಾನ ರಕ್ಷಣೆಯ ಸಂದೇಶವನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ತಲುಪಿಸುವುದು ಸಮಾವೇಶದ ಉದ್ದೇಶವಾಗಿದೆ” ಎಂದು ಹೇಳಿದರು.
ಪ್ರದೀಪ ನಾಟೇಕರ್ ಮಾತನಾಡಿ, “ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಮಾಜ ನಿರ್ಮಾಣವಾಗಬೇಕು. ಸಂವಿಧಾನದ ರಕ್ಷಣೆ ಕೇವಲ ದಲಿತ ಸಂಘಟನೆಗಳ ಜವಾಬ್ದಾರಿಯಲ್ಲ. ಎಲ್ಲ ಸಮುದಾಯಗಳ ಜನರು, ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ಬೌದ್ಧ ಉಪಾಸಕ–ಉಪಾಸಕಿಯರು ಹಾಗೂ ಪ್ರಜ್ಞಾವಂತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಜನಾಂದೋಲನದಲ್ಲಿ ಪಾಲ್ಗೊಳ್ಳಬೇಕು” ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಮುಖಂಡರಾದ ಶಿವಕುಮಾರ ನೀಲಿಕಟ್ಟಿ, ರಘುನಾಥ ಗಾಯಕವಾಡ, ಮುಕೇಶ ರಾಯ್, ಸುನಿಲ ಸಂಗಮ, ಪ್ರಸನ್ನ ಡಾಂಗೆ, ಜನಾರ್ಧನ್ ದೀನೆ, ಅವಿನಾಶ ದೀನೆ, ಪುಟ್ಟರಾಜ ದೀನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್ | SBI ಎಟಿಎಂ ಕಳವು ಪ್ರಕರಣ: ನಾಲ್ವರು ಅಂತರರಾಜ್ಯ ಆರೋಪಿಗಳ ಬಂಧನ





