ಗ್ರಾಮೀಣ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆ, ಸಾಮರ್ಥ್ಯ ಹಾಗೂ ಲಭ್ಯವಿರುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪದವಿ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅಧ್ಯಯನ ನಡೆಸಬೇಕು ಎಂದು ಬೀದರ್ ಅಪರ ಜಿಲ್ಲಾಧಿಕಾರಿ ಸುರೇಖಾ ಕರೆ ನೀಡಿದರು.
ಬೀದರ್ ತಾಲ್ಲೂಕಿನ ಮನ್ನಳ್ಳಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸ್ವಾಗತ ಸಮಾರಂಭ ಹಾಗೂ ಅಭಿವಿನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಕಠಿಣ ಪರಿಶ್ರಮ, ಶಿಸ್ತು, ಸಮಯಪಾಲನೆ ಹಾಗೂ ನಿರಂತರ ಅಧ್ಯಯನದಿಂದ ಯಾವುದೇ ಗುರಿಯನ್ನು ಸಾಧಿಸಲು ಸಾಧ್ಯ. ಕಾಲೇಜು ಜೀವನ ಕೇವಲ ಪದವಿ ಪಡೆಯುವ ಹಂತವಲ್ಲ. ಜ್ಞಾನ, ಕೌಶಲ್ಯ, ವ್ಯಕ್ತಿತ್ವ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳುವ ಮಹತ್ವದ ಘಟ್ಟವಾಗಿದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು” ಎಂದರು.
ಪ್ರಾಧ್ಯಾಪಕ ಡಾ.ಸಂಗಶೆಟ್ಟ ಶೆಟಕಾರ ಮಾತನಾಡಿ, “ಪದವಿ ಶಿಕ್ಷಣ ಯಶಸ್ವಿ ವೃತ್ತಿಜೀವನಕ್ಕೆ ಭದ್ರ ಬುನಾದಿಯಾಗಬೇಕು. ವಿಶೇಷವಾಗಿ ವಾಣಿಜ್ಯ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್, ವಿಮೆ, ಲೆಕ್ಕಪತ್ರ, ತೆರಿಗೆ ಹಾಗೂ ಹಣಕಾಸು ಕ್ಷೇತ್ರಗಳಲ್ಲಿ ಹಲವು ಅವಕಾಶಗಳಿವೆ. ಹೀಗಾಗಿ ಅವಕಾಶಕ್ಕಾಗಿ ಕಾಯದೆ, ಪದವಿ ಹಂತದಿಂದಲೇ ಗುರಿ ನಿಗದಿಪಡಿಸಿಕೊಂಡು ಸಿದ್ಧತೆ ಆರಂಭಿಸಬೇಕು” ಎಂದು ಸಲಹೆ ನೀಡಿದರು.
“ವಿದ್ಯಾರ್ಥಿಗಳು ಜೀವನಪರ್ಯಂತ ಕಲಿಕೆಯ ಮನೋಭಾವ ಬೆಳೆಸಿಕೊಳ್ಳಬೇಕು. ಪದವಿ ಪೂರ್ಣಗೊಂಡ ಬಳಿಕವೂ ಕಲಿಕೆ ಮುಂದುವರಿಯಬೇಕು. ಪ್ರತಿದಿನ ಹೊಸ ವಿಷಯಗಳನ್ನು ಕಲಿಯುವುದು, ಓದುವುದು, ಪ್ರಶ್ನಿಸುವುದು ಹಾಗೂ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಯಶಸ್ಸಿಗೆ ನೆರವಾಗುತ್ತದೆ” ಎಂದರು.
“ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವ ವಿದ್ಯಾರ್ಥಿಗಳು ಮೊದಲು ತಮ್ಮ ಮೂಲಭೂತ ಜ್ಞಾನವನ್ನು ಬಲಪಡಿಸಿಕೊಳ್ಳಬೇಕು. ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳು, ಗಣಿತ, ತಾರ್ಕಿಕ ಸಾಮರ್ಥ್ಯ, ಇಂಗ್ಲಿಷ್ ಹಾಗೂ ವಿಷಯಾಧಾರಿತ ಜ್ಞಾನವನ್ನು ಹಂತ ಹಂತವಾಗಿ ಬೆಳೆಸಿಕೊಳ್ಳಬೇಕು. ಪ್ರತಿದಿನ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಬೇಕು” ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಶರಣಪ್ಪ ಮಲಗೊಂಡ ಅಧ್ಯಕ್ಷತೆ ವಹಿಸಿ ಮಾತನಾಡಿ, “ವಿದ್ಯಾರ್ಥಿಗಳು ಶಿಸ್ತು, ಸಮಯಪಾಲನೆ ಹಾಗೂ ನಿರಂತರ ಅಧ್ಯಯನಕ್ಕೆ ಆದ್ಯತೆ ನೀಡಿ ಕಾಲೇಜಿನಲ್ಲಿರುವ ಶೈಕ್ಷಣಿಕ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ಸಿಡಿಲು ಬಡಿದು ರೈತ ಸಾವು
ಕಾರ್ಯಕ್ರಮದಲ್ಲಿ ಮನ್ನಳ್ಳಿ ಸರಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಮಾರುತಿರೆಡ್ಡಿ ಪ್ರಮುಖರಾದ ಸೈಯದ್ ಅಹ್ಮದ್, ಡಾ.ನವರಂಗ ಮಾಣಿಕರಾವ, ಡಾ.ರಾಜಕುಮಾರ ಟಿ., ಡಾ.ದಶವಂತ ಬಂಡೆ, ಡಾ. ಶಿವಕುಮಾರ ಬಿರಾದರ, ಡಾ.ಜೈಶ್ರೀ, ಡಾ.ಸುರೇಂದ್ರ ಸಿಂಗ್, ಡಾ.ಪೃಥ್ವಿರಾಜ, ಡಾ.ಸಂಜುಕುಮಾರ ಅಪ್ಪೆ, ಡಾ.ಸುನೀಲಕುಮಾರ, ಡಾ.ಮಮತಾ, ಡಾ.ರೇಣುಕಾ, ಡಾ.ಉಷಾ ಸೇರಿದಂತೆ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




