ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟಿರುವ ಘಟನೆ ಚಿಟಗುಪ್ಪ ತಾಲೂಕಿನ ಉಡಮನಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಮಂಗಳವಾರ ಸಂಜೆ 4:30 ಗಂಟೆ ಸುಮಾರಿಗೆ ಗ್ರಾಮದ ಹೊರವಲಯದ ಜಮೀನಿನಲ್ಲಿ ದುರ್ಘಟನೆ ಸಂಭವಿಸಿದ್ದು, ಉಡಮನಳ್ಳಿ ಗ್ರಾಮದ ಝರಣೆಪ್ಪ ರೇವಣಪ್ಪ (45) ಮೃತಪಟ್ಟ ರೈತ ಎಂದು ತಿಳಿದುಬಂದಿದೆ. ಮೃತರಿಗೆ ಪತ್ನಿ, ಪುತ್ರಿ ಹಾಗೂ ಇಬ್ಬರು ಪುತ್ರರು ಇದ್ದಾರೆ.
ಜಮೀನಿನಲ್ಲಿ ಕೆಲಸ ಮಾಡಿ ಸಂಜೆ ಜಾನುವಾರುಗಳೊಂದಿಗೆ ಮನೆಗೆ ವಾಪಸ್ ಬರಬೇಕೆಂದ ವೇಳೆ ಗುಡುಗು ಸಹಿತ ಮಳೆ ಆರಂಭವಾಗಿದೆ. ಈ ಸಂದರ್ಭದಲ್ಲಿ ರೈತ ಝರಣೆಪ್ಪ ಮಳೆಯಿಂದ ರಕ್ಷಿಸಿಕೊಳ್ಳಲು ಮರದಡಿ ಆಶ್ರಯ ಪಡೆದಿದ್ದಾಗ ಸಿಡಿಲು ಅಪ್ಪಳಿಸಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಮರಾಠಾ ಸಮುದಾಯದ ಸಮಗ್ರ ಸಮೀಕ್ಷೆಗೆ ಡಿಜಿಟಲ್ ಆ್ಯಪ್
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕಿನ ಮನ್ನಾಏಖೆಳ್ಳಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಬೇಮಳಖೇಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




