ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಹುಮುಖಿ ಪ್ರತಿಭೆಯುಳ್ಳ ಸಾಹಿತಿ, ಲೇಖಕರು, ಕಲಾವಿದರಿದ್ದು, ಅವರಿಗೆ ಸೂಕ್ತ ಅವಕಾಶಗಳು ಕಲ್ಪಿಸಿದಾಗ ಮಾತ್ರ ಲೋಕಪ್ರಜ್ಞೆ ಮೂಡಿಸುವ ನಾಟಕ ಹಾಗೂ ರಂಗರೂಪಕಗಳು ಮೂಡಿಬರಲು ಸಾಧ್ಯ ಎಂದು ರಂಗಾಯಣ ಕಲಬುರಗಿ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ಹೇಳಿದರು.
ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಶನಿವಾರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗಾಯಣ ಕಲಬುರಗಿ, ಜನಪದ ಕಲಾವಿದರ ಬಳಗ, ಮಹರ್ಷಿ ವಾಲ್ಮೀಕಿ ಸೋಶಿಯಲ್ ಆ್ಯಂಡ್ ಕಲ್ಚರಲ್ ಟ್ರಸ್ಟ್ ಹಾಗೂ ರಂಗ ತರಂಗ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ಗಳ ಸಹಯೋಗದಲ್ಲಿ ಆಯೋಜಿಸಿದ್ದ ನಾಡೋಜ ಶಾಂತರಸ ಅವರ ಕಾದಂಬರಿ ಆಧಾರಿತ ‘ಸಣ್ಣಗೌಡಸಾನಿ’ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಇಂದಿನ ಮಕ್ಕಳು ಅಂಕಗಳ ಭಾರದಲ್ಲಿ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯಿಂದ ವಿಮುಖರಾಗುತ್ತಿದ್ದಾರೆ. ಮಕ್ಕಳಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಯ ಆಸಕ್ತಿ ಬೆಳೆಸುವ ಅಗತ್ಯವಿದೆ. ಕಲ್ಯಾಣ ಕರ್ನಾಟಕ ಭಾಗದ ಕಲಾವಿದರು ಈ ನಾಟಕದಲ್ಲಿ ಅಭಿನಯಿಸಿರುವುದು ಸಂತಸ ತಂದಿದೆ” ಎಂದು ಹೇಳಿದರು.
“ಬೀದರ್ ಭಾವೈಕ್ಯತೆಯ ತಾಣವಾಗಿದ್ದು, ಇಲ್ಲಿ ಹಲವು ಭಾಷೆ, ಸಂಸ್ಕೃತಿ ಹಾಗೂ ಪರಂಪರೆಗಳು ಸೌಹಾರ್ದದಿಂದ ಬೆರೆತು ಬದುಕುತ್ತಿವೆ. ನಾಡಿನ ಇತಿಹಾಸ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಂಪರೆ ಶ್ರೀಮಂತವಾಗಿದ್ದು, ಇಂತಹ ನೆಲದಲ್ಲಿ ಸಾಹಿತ್ಯ ಮತ್ತು ರಂಗಭೂಮಿಗೆ ಮತ್ತಷ್ಟು ಅವಕಾಶಗಳು ದೊರೆಯಬೇಕು” ಎಂದರು.

ಜಾನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ಪ್ರಾಸ್ತಾವಿಕವಾಗಿ ಮಾತನಾಡಿ, “ಬೀದರ್ ಜಿಲ್ಲೆಯ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಕೊಡುಗೆ ಇದೆ. ಸ್ಥಳೀಯ ಕಲಾವಿದರು, ಸಾಹಿತಿಗಳಿಗೆ ಹೆಚ್ಚಿನ ಅವಕಾಶಗಳು ದೊರೆಯುವಂತಾಗಬೇಕಾಗಿದೆ. ಜಿಲ್ಲೆಯ ಪ್ರತಿಭಾವಂತ ಕಲಾವಿದರು ಇಂತಹ ನಾಟಕಗಳಲ್ಲಿ ಅಭಿನಯಿಸಬೇಕು” ಎಂದರು.
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ವಿನೋದಕುಮಾರ ಅಪ್ಪೆ, ಬೀದರ್ ಪಶು ವೈದ್ಯಕೀಯ ಮಹಾವಿದ್ಯಾಲಯದ ನಾಮನಿರ್ದೇಶಿತ ಸದಸ್ಯ ವಿಜಯಕುಮಾರ ಪಾಟೀಲ್ ಗಾದಗಿ, ಬೀದರ್ ವಿಶ್ವವಿದ್ಯಾಲಯದ ನಾಮನಿರ್ದೇಶಿತ ಸದಸ್ಯ ಜಗನ್ನಾಥ ಪಾಟೀಲ್, ಗೌರವ ಡಾಕ್ಟರೇಟ್ ಪುರಸ್ಕೃತ ಸಾಹಿತಿ ಎಸ್.ಎಂ.ಜನವಾಡಕರ್ ಹಾಗೂ ಸಮಾಜ ಸೇವಕ ಶಿವಯ್ಯ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ನಾಡೋಜ ಡಾ.ಶಾಂತರಸ ಅವರ ಕಾದಂಬರಿ ಆಧಾರಿತ ‘ಸಣ್ಣಗೌಡಸಾನಿ’ ನಾಟಕದ ರಂಗರೂಪಕವನ್ನು ಮಹಾಂತೇಶ ನವಲಕಲ್ ನಿರ್ವಹಿಸಿದ್ದಾರೆ. ರಾಘವ ಕಮ್ಮಾರ ಸಂಗೀತ ಸಂಯೋಜಿಸಿದರೆ, ಪ್ರವೀಣ ರೆಡ್ಡಿ ಗುಂಜಹಳ್ಳಿ ರಂಗಪಠ್ಯ ವಿನ್ಯಾಸ ಹಾಗೂ ನಿರ್ದೇಶನದ ಹೊಣೆ ಹೊತ್ತಿದ್ದರು. ರಾಜಕುಮಾರ ಎಸ್.ಕೆ.ರಂಗಸಜ್ಜಿಕೆ ನಿರ್ಮಿಸಿದರೆ, ಶ್ರೀನಿವಾಸ ದೋರನಹಳ್ಳಿ ಸಹ ನಿರ್ದೇಶನ ಹಾಗೂ ಬೆಳಕಿನ ವಿನ್ಯಾಸದಲ್ಲಿ ಕಾರ್ಯನಿರ್ವಹಿಸಿದರು.

‘ಸಣ್ಣಗೌಡಸಾನಿ’ ನಾಟಕವು ಬಹುಭಾಷೆ, ವೈವಿಧ್ಯತೆ ಹಾಗೂ ಸೌಹಾರ್ದತೆಯಿಂದ ಕೂಡಿರುವ ಕಲ್ಯಾಣ ಕರ್ನಾಟಕ ಭಾಗದ ಬದುಕಿನ ಹಲವು ಆಯಾಮಗಳನ್ನು ಕಟ್ಟಿಕೊಟ್ಟಿತು. ಅಂದಿನ ಸಮಾಜದಲ್ಲಿ ಬೇರೂರಿದ್ದ ಅಸ್ಪೃಶ್ಯತೆ, ಜಾತಿ-ಜನಾಂಗಗಳ ನಡುವಿನ ಒಳಜಗಳ, ಸಂಚು ಹಾಗೂ ದರ್ಪದಿಂದ ಮನುಷ್ಯರನ್ನು ಒಡೆದುಹಾಕುವ ಸಾಮಾಜಿಕ ವ್ಯವಸ್ಥೆಯ ಕರಾಳ ಮುಖವನ್ನು ನಾಟಕ ಪರಿಣಾಮಕಾರಿಯಾಗಿ ತೆರೆದಿಟ್ಟಿತು.
ಸಮಾಜದ ಹಲವು ಸಂಕಷ್ಟಗಳ ನಡುವೆ ಬದುಕು ಸಾಗಿಸುವ ಒಂಟಿ ಹೆಣ್ಣಿನ ನೋವು, ವ್ಯಥೆ ಹಾಗೂ ಹೋರಾಟ ಕಥಾವಸ್ತುವಿನ ನಾಟಕವು ನೋಡುಗರ ಮನ ಗೆದ್ದಿತು.
ಇದನ್ನೂ ಓದಿ : ಬೀದರ್ | ಬರ : ಪ್ರತಿ ಎಕರೆಗೆ ₹50 ಸಾವಿರ ಪರಿಹಾರ, ರೈತರ ಸಾಲ ಮನ್ನಾಗೆ ಆಗ್ರಹಿಸಿ ರೈತರಿಂದ ಬೈಕ್ ರ‍್ಯಾಲಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ, ಮುಖಂಡ ಮಾರುತಿ ಬೌದ್ದೆ, ಯುವ ನಾಯಕ ಫರ್ನಾಂಡಿಸ್ ಹಿಪ್ಪಳಗಾಂವ್, ಮಹರ್ಷಿ ವಾಲ್ಮೀಕಿ ಸೋಶಿಯಲ್ ಆ್ಯಂಡ್ ಕಲ್ಚರಲ್ ಟ್ರಸ್ಟ್ ಅಧ್ಯಕ್ಷ ಸುನೀಲ ಭಾವಿಕಟ್ಟಿ ಹಾಗೂ ರಂಗ ತರಂಗ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಎಂ.ಪಿ.ಮುದಾಳೆ ಸೇರಿದಂತೆ ಕಲಾಸಕ್ತರು ಇದ್ದರು.




