ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಲಾಗುವ ಇ-ಚಲನ್‌ಗಳ ಬಾಕಿ ಮೊತ್ತವನ್ನು ವಸೂಲಿ ಮಾಡಲು ಅಧಿಕಾರಿಗಳು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೇವಲ ಇ-ಚಲನ್‌ಗಳನ್ನು ಜಾರಿಗೊಳಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ವಿಚಾರಣೆ ವೇಳೆ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಅವರು, ಜನರು ಟ್ರ್ಯಾಫಿಕ್ ದಂಡ ಪಾವತಿಸದಿದ್ದರೆ ಅದನ್ನು ಇತರೆ ಸರ್ಕಾರಿ ಬಾಕಿಗಳೊಂದಿಗೆ ಜೋಡಿಸುವ ಸಾಧ್ಯತೆಯನ್ನು ಪರಿಶೀಲಿಸಬಹುದು ಎಂದು ಸಲಹೆ ನೀಡಿದ್ದಾರೆ.
“ಜನರು ಟ್ರ್ಯಾಫಿಕ್ ದಂಡ ಪಾವತಿಸುತ್ತಿಲ್ಲ ಎಂದಾದರೆ ಅದನ್ನು ವಿದ್ಯುತ್ ಬಿಲ್‌ಗೆ ಸೇರಿಸುವ ಬಗ್ಗೆ ಯೋಚಿಸಬಹುದು. ವಿದ್ಯುತ್ ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇರುವುದರಿಂದ, ಜನರು ದಂಡವನ್ನೂ ಪಾವತಿಸಬೇಕಾಗುತ್ತದೆ. ಈ ದೇಶದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು” ಎಂದು ನ್ಯಾಯಾಲಯ ಹೇಳಿರುವುದಾಗಿ Bar and Bench ವರದಿ ಮಾಡಿದೆ.
ಆದರೆ ಟ್ರ್ಯಾಫಿಕ್ ದಂಡವನ್ನು ವಿದ್ಯುತ್ ಬಿಲ್‌ಗೆ ಸೇರಿಸುವುದು ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನವಲ್ಲ. ವಿಚಾರಣೆ ವೇಳೆ ನ್ಯಾಯಾಲಯ ನೀಡಿದ ಸಲಹೆ ಮಾತ್ರ ಎಂದು ಸ್ಪಷ್ಟಪಡಿಸಲಾಗಿದೆ.
ವಿಚಾರಣೆ ವೇಳೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು ಸುಮಾರು ₹45 ಸಾವಿರ ಕೋಟಿ ಮೌಲ್ಯದ ಇ-ಚಲನ್‌ಗಳು ಬಾಕಿ ಉಳಿದಿವೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಈ ಪೈಕಿ ಸುಮಾರು ₹25 ಸಾವಿರ ಕೋಟಿ ವಸೂಲಿ ಮಾಡಲಾಗಿದೆ.
ಇ-ಚಲನ್‌ಗಳನ್ನು ಪೊಲೀಸರು ಸಾವಿರಾರು ಅಥವಾ ಲಕ್ಷಾಂತರ ಸಂಖ್ಯೆಯಲ್ಲಿ ಜಾರಿಗೊಳಿಸಬಹುದು. ಆದರೆ ನಿಜವಾದ ಸಮಸ್ಯೆ ದಂಡದ ಮೊತ್ತವನ್ನು ವಸೂಲಿ ಮಾಡುವುದಾಗಿದೆ ಎಂದು ನ್ಯಾಯಮೂರ್ತಿ ಪಾರ್ದಿವಾಲಾ ಹೇಳಿದ್ದಾರೆ.
ಬಾಕಿ ಟ್ರ್ಯಾಫಿಕ್ ದಂಡ ಹೊಂದಿರುವ ವಾಹನಗಳ ನೋಂದಣಿ ಪ್ರಮಾಣಪತ್ರ (RC) ನವೀಕರಣವನ್ನು ತಡೆಹಿಡಿಯುವ ಸಾಧ್ಯತೆಯನ್ನು ಪರಿಶೀಲಿಸುವಂತೆ ನ್ಯಾಯಾಲಯ ಸಲಹೆ ನೀಡಿದೆ.
ಅಂತಹ ವಾಹನಗಳಿಗೆ ಡೂಪ್ಲಿಕೇಟ್ ನೋಂದಣಿ ಪ್ರಮಾಣಪತ್ರ ನೀಡುವುದನ್ನು ತಡೆಯುವುದು ಹಾಗೂ ವಾಹನದ ಮಾಲೀಕತ್ವ ವರ್ಗಾವಣೆಯನ್ನೂ ನಿರ್ಬಂಧಿಸುವ ಬಗ್ಗೆ ಯೋಚಿಸಬಹುದು ಎಂದು ಹೇಳಿದೆ.
ಅದೇ ರೀತಿ, ಬಾಕಿ ಚಲನ್‌ಗಳನ್ನು ಪಾವತಿಸುವವರೆಗೆ ವಾಹನಗಳಿಗೆ ಫಿಟ್‌ನೆಸ್ ಪ್ರಮಾಣಪತ್ರ ನೀಡದಿರುವುದು, ಪಾರಿವಾಹನ್ ಪೋರ್ಟಲ್‌ನಲ್ಲಿ ಅಂತಹ ವಾಹನಗಳನ್ನು ಬ್ಲ್ಯಾಕ್‌ಲಿಸ್ಟ್ ಮಾಡುವುದು ಮತ್ತು ಸಂಬಂಧಿತ ಚಾಲನಾ ಪರವಾನಗಿಗಳ ನವೀಕರಣವನ್ನು ತಡೆಹಿಡಿಯುವ ಕ್ರಮಗಳನ್ನೂ ಪರಿಶೀಲಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ಟ್ರ್ಯಾಫಿಕ್ ಲೈಟ್ ದಿನ: ಕೆಂಪು ದೀಪಕ್ಕೆ ನಿಲ್ಲೋಣ, ಹಸಿರು ಬರುವವರೆಗೆ ಕಾಯೋಣ
ಈಗಾಗಲೇ ನೀಡಿರುವ ಚಾಲನಾ ಪರವಾನಗಿಗಳನ್ನು ಅಮಾನತುಗೊಳಿಸುವುದು ಹಾಗೂ ಬಾಕಿ ಚಲನ್ ಹೊಂದಿರುವ ವಾಹನಗಳಿಗೆ ಪಿಯುಸಿ ಪ್ರಮಾಣಪತ್ರ ನೀಡದಿರುವುದು ಸೇರಿದಂತೆ ಹಲವು ಕ್ರಮಗಳ ಬಗ್ಗೆಯೂ ವಿಚಾರಣೆ ವೇಳೆ ಚರ್ಚಿಸಲಾಯಿತು.
ಇದರ ಜೊತೆಗೆ ವಾಹನಗಳ ಯಾದೃಚ್ಛಿಕ ತಪಾಸಣೆ ನಡೆಸಬೇಕು. ಬಾಕಿ ಇ-ಚಲನ್ ಇರುವ ವಾಹನಗಳ ಅಗತ್ಯವಿದ್ದಲ್ಲಿ ವಶಪಡಿಸಿಕೊಳ್ಳುವ ಕ್ರಮ ಕೈಗೊಳ್ಳುವ ಬಗ್ಗೆಯೂ ಪರಿಶೀಲಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ಸಂಚಾರ ದಂಡ ವಸೂಲಿ ವ್ಯವಸ್ಥೆ ಪರಿಣಾಮಕಾರಿಯಾಗಬೇಕಾದರೆ, ದೇಶದ ವಾಸ್ತವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯರೂಪಕ್ಕೆ ತರಬಹುದಾದ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದು ನ್ಯಾಯಮೂರ್ತಿ ಪಾರ್ದಿವಾಲಾ ಹೇಳಿದ್ದಾರೆ.




