ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಇಬ್ಬರು ಎಂಓಬಿ ಶೀಟರ್‌ಗಳನ್ನು ಬೀದರ್ ಜಿಲ್ಲೆಯಿಂದ ಗಡಿಪಾರು ಮಾಡಿ ಜಿಲ್ಲಾ ಪೊಲೀಸ್ ಇಲಾಖೆ ಆದೇಶಿಸಿದೆ.
ಗಾಂಧಿಗಂಜ ಪೊಲೀಸ್ ಠಾಣೆ ವ್ಯಾಪ್ತಿಯ ಇರಾನಿ ಕಾಲೋನಿಯ ನಿವಾಸಿಗಳಾದ ರಹಮತ್ ಹುಸೇನ್ (25) ಹಾಗೂ ಜಾವಿದ್ ಅಲಿ ಅಲಿಯಾಸ್ ಜಂಬೂ (38) ಗಡಿಪಾರಾದವರು.
ರಹಮತ್ ಹುಸೇನ್ ಉತ್ತರ ಕನ್ನಡ ಜಿಲ್ಲೆಗೆ ಮತ್ತು ಜಾವೀದ್ ಅಲಿಗೆ ಚಾಮರಾಜನಗರ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ ಎಂದು ಎಸ್ಪಿ ಪ್ರದೀಪ ಗುಂಟಿ ಅವರು ಬುಧವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಬ್ಬರು ಮಾರಕ ಆಯುಧ ಹೊಂದುವುದು, ಸಾರ್ವಜನಿಕರಿಗೆ ಬೆದರಿಕೆಗೆ ಹಾಕುವುದು, ಕಳ್ಳತನ, ಗಾಂಜಾ ಮಾರಾಟ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಪದೇ ಪದೇ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ಇಬ್ಬರಿಗೆ ಗಡಿಪಾರು ಮಾಡಲಾಗಿದೆ.
ಸಾರ್ವಜನಿಕರ ಶಾಂತಿ, ನೆಮ್ಮದಿಗೆ ಕಂಟಕವಾಗಿದ್ದ ಇಬ್ಬರು ರೌಡಿಗಳನ್ನು ಜೂ.15ರಂದು ಬೇರೆ ಜಿಲ್ಲೆಗಳಿಗೆ ಗಡಿಪಾರು ಮಾಡಿ ಎಸ್ಪಿ ಪ್ರದೀಪ ಗುಂಟಿ ಅವರು ಆದೇಶ ಹೊರಡಿಸಿದ್ದರು. ಇದೀಗ ಮತ್ತಿಬ್ಬರನ್ನು ಗಡಿಪಾರು ಮಾಡುವ ಮೂಲಕ ಅಪರಾಧಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಹೆದ್ದಾರಿಯಲ್ಲಿ ಬೈಕ್‌ಗೆ ಕಾರು ಡಿಕ್ಕಿ: ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ, ಓರ್ವ ಗಂಭೀರ ಗಾಯ
ಜಿಲ್ಲೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿ ಕಾನೂನು ಸುವ್ಯವಸ್ಥೆಯಲ್ಲಿ ಅಡೆತಡೆ ಉಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಿ ಗಡಿಪಾರು ಮಾಡಲಾಗುವುದು. ಜಿಲ್ಲೆಯ ನಾಗರಿಕರು ಯಾವುದೇ ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿ ತಮ್ಮ ಅಮೂಲ್ಯ ಜೀವನ ಹಾಳುಮಾಡಿಕೊಳ್ಳಬೇಡಿ ಎಂದು ಎಸ್ಪಿ ಪ್ರದೀಪ್ ಗುಂಟಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.




