ಭೂಮಿ ಹಕ್ಕು, ವಸತಿ, ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ, ವಿಶೇಷ ಘಟಕ ಯೋಜನೆಗೆ ಏಕಗವಾಕ್ಷಿ ನೀತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜುಲೈ 3ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ರಾಜ್ಯ ಸಮಿತಿಯಿಂದ ದಲಿತ ಜನಾಗ್ರಹ ಸಮಾವೇಶ ಆಯೋಜಿಸಲಾಗಿದೆ ಎಂದು ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರ ಭೂಮಿ ಹಕ್ಕಿಗಾಗಿ ದಸಂಸ ಹಲವು ದಶಕಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದು, ಅದರ ಫಲವಾಗಿ ಪಿಟಿಸಿಎಲ್ ಕಾಯ್ದೆ ಜಾರಿಗೆ ಬಂದರೂ ದಲಿತರಿಗೆ ಸಮರ್ಪಕವಾಗಿ ಭೂಮಿ ಮರಳಿ ದೊರೆತಿಲ್ಲ ಎಂದು ಆರೋಪಿಸಿದರು.
ಪ್ರಸ್ತುತ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾಗಿರುವ ಡಾ.ಜಿ. ಪರಮೇಶ್ವರ್ ಅವರು ಆದ್ಯತೆಯ ಮೇರೆಗೆ ದಲಿತರ ಭೂ ಹಕ್ಕುಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ ಅವರು, 1978–79ರಲ್ಲಿ ಜಾರಿಗೆ ಬಂದ ಪಿಟಿಸಿಎಲ್ ಕಾಯ್ದೆಯಿದ್ದರೂ ಇದುವರೆಗೆ ಕೇವಲ ಶೇ.11ರಷ್ಟು ಭೂಮಿ ಮಾತ್ರ ದಲಿತರಿಗೆ ಮರಳಿದ್ದು, ಅದೂ ಬಹುತೇಕ ಕೃಷಿಗೆ ಯೋಗ್ಯವಲ್ಲದ ಬಂಜರು ಭೂಮಿಯಾಗಿದೆ ಎಂದು ದೂರಿದರು.
ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಗೋಮಾಳ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ದಲಿತರಿಗೆ ಸಾಗುವಳಿ ಚೀಟಿ ನೀಡಬೇಕು ಎಂಬುದು ಸಮಾವೇಶದ ಪ್ರಮುಖ ಬೇಡಿಕೆಗಳಲ್ಲೊಂದು ಎಂದು ಅವರು ಹೇಳಿದರು.
ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗಳಡಿ ಮೀಸಲಾದ ಅನುದಾನವನ್ನು ಮೂಲ ಉದ್ದೇಶಕ್ಕೆ ಬಳಸದೆ, ಗ್ಯಾರಂಟಿ ಯೋಜನೆಗಳು ಹಾಗೂ ರಸ್ತೆ ಕಾಮಗಾರಿಗಳಂತಹ ಇತರ ಉದ್ದೇಶಗಳಿಗೆ ಬಳಸಲಾಗಿದೆ ಎಂದು ಆರೋಪಿಸಿದ ಮಾವಳ್ಳಿ ಶಂಕರ್, ದಲಿತರಿಗೆ ಮೀಸಲಾದ ಅನುದಾನದ ಸಂಪೂರ್ಣ ಲೆಕ್ಕವನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಈ ಕುರಿತು ವಿಶೇಷ ಅಧಿವೇಶನ ಕರೆದು ದಲಿತರ ಅಭಿವೃದ್ಧಿಗೆ ಎಷ್ಟು ಅನುದಾನ ಮೀಸಲಾಗಿದೆ ಹಾಗೂ ಎಷ್ಟು ವೆಚ್ಚವಾಗಿದೆ ಎಂಬುದರ ಕುರಿತು ಅಂಕಿ-ಅಂಶಗಳ ಸಮೇತ ಚರ್ಚೆ ನಡೆಸಬೇಕು. ಜುಲೈ 3ರಂದು ನಡೆಯುವ ಸಮಾವೇಶಕ್ಕೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಆಗಮಿಸಿ ಮನವಿ ಸ್ವೀಕರಿಸಿ ಸ್ಪಷ್ಟ ಭರವಸೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯ ಸಮಿತಿ ಸದಸ್ಯ ಕುಂದೂರು ತಿಮ್ಮಯ್ಯ ಮಾತನಾಡಿ, ದಲಿತ ಚಳವಳಿಗೆ ಪ್ರಮುಖ ನೆಲೆಯಾದ ತುಮಕೂರು ಜಿಲ್ಲೆಯಿಂದ ಸುಮಾರು 1,500ಕ್ಕೂ ಹೆಚ್ಚು ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು. ರಾಜ್ಯದ ವಿವಿಧ ಭಾಗಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ದಸಂಸ ಸದಾ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದ್ದು, ಈ ಬಾರಿಯ ಸಮಾವೇಶವೂ ದಲಿತರ ಹಕ್ಕುಗಳಿಗಾಗಿ ಮಹತ್ವದ ಘಟ್ಟವಾಗಲಿದೆ ಎಂದು ಹೇಳಿದರು.
ಸಂಘಟನಾ ಸಂಚಾಲಕರಾದ ವಿರೂಪಾಕ್ಷ ಡ್ಯಾಗೇರಹಳ್ಳಿ ಹಾಗೂ ಚೇಳೂರು ಶಿವನಂಜಪ್ಪ ಮಾತನಾಡಿ, ಜಿಲ್ಲೆಯ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸ್ವಯಂಪ್ರೇರಿತರಾಗಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಕುಂದೂರು ಮುರುಳಿ, ಮುಖಂಡರಾದ ಬಿ.ಕೆ. ಕೃಷ್ಣಕುಮಾರ್, ನರಸೀಯಪ್ಪ, ಚಂದ್ರಶೇಖರ್, ದಾದಾಪೀರ್ (ಕೊರಟಗೆರೆ), ಚೇತನ್ (ಗುಬ್ಬಿ), ರಂಜನ್ (ತುಮಕೂರು), ಕೃಷ್ಣಸ್ವಾಮಿ, ಸುರೇಶ್, ಕರುಣಾಕರ್, ನರಸಿಂಹಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.




