ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಿರ್ಮಿಸಲಾಗುತ್ತಿರುವ ಆಧುನಿಕ ಅನುಭವ ಮಂಟಪವನ್ನು ಬರುವ ಮಾರ್ಚ್ ತಿಂಗಳೊಳಗೆ ಪೂರ್ಣಗೊಳಿಸಲು ಕಾಮಗಾರಿಯನ್ನು ತ್ವರಿತಗೊಳಿಸುವ ಅಗತ್ಯವಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ಪ್ರತಿಪಾದಿಸಿದ್ದಾರೆ.
ಕಂದಾಯ ಸಚಿವ ಕೃಷ್ಣ ಬೈರೆಗೌಡ ಅವರ ಅಧ್ಯಕ್ಷತೆಯಲ್ಲಿ ವರ್ಚುವಲ್ ಮೂಲಕ ನಡೆದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, “ಕಾಮಗಾರಿ ವಿಳಂಬವಾಗದಂತೆ ಕ್ರಮ ವಹಿಸಿ ಅನುಭವ ಮಂಟಪ ಹಾಗೂ ಇನ್ನಿತರ ಸ್ಮಾರಕಗಳ ಅಭಿವೃದ್ಧಿಯನ್ನು ಗಡುವಿನಲ್ಲಿ ಪೂರ್ಣಗೊಳಿಸಬೇಕು” ಎಂದರು.
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕೂಡ ಪ್ರಗತಿ ಪರಿಶೀಲನೆ ಸಭೆ ನಡೆದಿದ್ದು, ಅವರ ಮಾರ್ಗದರ್ಶನದಂತೆ ಈಗಾಗಲೇ ಕ್ರಮ ವಹಿಸಲಾಗಿದೆ. ಜಿಲ್ಲಾಡಳಿತ ಮತ್ತು ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಹೆಚ್ಚು ಕ್ರಿಯಾಶೀಲವಾಗಿ ನಿಗದಿತ ಕಾಲಮಿತದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಶ್ರಮವಹಿಸಬೇಕು” ಎಂದರು.
“2023ರಿಂದೀಚೆಗೆ ಹಣಕಾಸು ಸಚಿವರೂ ಆದ ಸಿಎಂ ಸಿದ್ದರಾಮಯ್ಯ ಅವರು 280 ಕೋಟಿ ರೂ.ಗಳನ್ನು ಅನುಭವ ಮಂಟಪ ಅಭಿವೃದ್ಧಿಗೆ ಮಂಜೂರು ಮಾಡಿದ್ದು, ಶೇ.65ರಷ್ಟು ಆರ್ಥಿಕ ಪ್ರಗತಿಯಾಗಿದೆ. ಶೇ.70ರಷ್ಟು ಕಾಮಗಾರಿಯೂ ಪೂರ್ಣಗೊಂಡಿದೆ” ಎಂದು ಈಶ್ವರ ಖಂಡ್ರೆ ತಿಳಿಸಿದರು.
ಇದನ್ನೂ ಓದಿ : ಬೀದರ್ | ಶಹಾಪುರನಲ್ಲಿ ಮೇ 15ಕ್ಕೆ ʼಬಸವಾದಿ ಶರಣರ ಜಾಗೃತಿ ಸಮಾವೇಶʼ
ಸಭೆಯಲ್ಲಿ ಬಸವ ಸಮಿತಿಯ ಅರವಿಂದ ಜತ್ತಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ, ಜಿಲ್ಲಾಧಿಕಾರಿ ಶಿಲ್ಪಾಶರ್ಮಾ ಮತ್ತಿತರರು ಪಾಲ್ಗೊಂಡಿದ್ದರು.




