ಮಳೆ ಕೊರತೆ ಹಾಗೂ ಬೆಳೆ ಹಾನಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಕಮಲನಗರ ತಾಲೂಕನ್ನು ರಾಜ್ಯ ಸರ್ಕಾರವು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೊಳಿಸಿರುವುದಕ್ಕೆ ಮದನೂರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪೂಜಾ ಗುಂಡಪ್ಪಾ ಬೇಲ್ಲೆ ಮದನೂರ ಅವರು ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ರಾಜ್ಯ ಸರ್ಕಾರವು ಸೆ. 22ರಂದು ಹೊರಡಿಸಿರುವ ಅಧಿಕೃತ ಆದೇಶದ ಮೂಲಕ ಕಮಲನಗರ ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೊಳಿಸಿದೆ. ಸರ್ಕಾರದ ಈ ನಿರ್ಧಾರವನ್ನು ತಾಲೂಕಿನ ಸಮಸ್ತ ರೈತರ ಪರವಾಗಿ ಸ್ವಾಗತಿಸುವುದಾಗಿ ಅವರು ತಿಳಿಸಿದ್ದಾರೆ.
ಮಳೆ ಕೊರತೆಯಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತು, ಜಮೀನುಗಳಿಗೆ ಭೇಟಿ ನೀಡಿ ‘ಗ್ರೌಂಡ್ ಟ್ರೂಥಿಂಗ್’ ಸರ್ವೇ ನಡೆಸಿ ನೈಜ ಪರಿಸ್ಥಿತಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಅವರು ಶ್ಲಾಘಿಸಿದ್ದಾರೆ.
ಕಮಲನಗರ ತಾಲೂಕಿನ ಅನ್ನದಾತರು ಅನುಭವಿಸುತ್ತಿದ್ದ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸಿ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಬೀದರ್ ಲೋಕಸಭಾ ಕ್ಷೇತ್ರದ ಸಂಸದ ಸಾಗರ್ ಈಶ್ವರ ಖಂಡ್ರೆ ಅವರಿಗೆ ತಾಲೂಕಿನ ರೈತರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುವುದಾಗಿ ಪೂಜಾ ಗುಂಡಪ್ಪಾ ಬೇಲ್ಲೆ ಮದನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಸಿಡಿಲು ಬಡಿದು ರೈತ ಸಾವು
ಅಧಿಕಾರಿಗಳು ನಡೆಸಿದ ನೈಜ ಸಮೀಕ್ಷೆ ಹಾಗೂ ಸರ್ಕಾರದ ನಿರ್ಧಾರದಿಂದಾಗಿ ತಾಲೂಕಿನ ರೈತರಿಗೆ ಬೆಳೆ ಪರಿಹಾರ, ಬೆಳೆ ವಿಮೆ ಹಾಗೂ ಇತರ ಆರ್ಥಿಕ ನೆರವು ದೊರೆಯಲು ದಾರಿ ಸುಗಮವಾಗಿದೆ. ಅರ್ಹ ರೈತರಿಗೆ ಪರಿಹಾರ ಮತ್ತು ಇತರ ಸೌಲಭ್ಯಗಳನ್ನು ಶೀಘ್ರವಾಗಿ ತಲುಪಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.




