ಮಳೆಗಾಲ ಮುಗಿಯುವ ಹಂತದಲ್ಲಿದ್ದರೂ ಬಾಗಲಕೋಟೆ ಜಿಲ್ಲೆಯಲ್ಲಿ ವಾತಾವರಣ ಮಾತ್ರ ಬೇಸಿಗೆಯ ಸ್ವರೂಪ ಪಡೆದುಕೊಂಡಿದೆ. ಮಳೆಗಾಗಿ ಎದುರು ನೋಡುತ್ತಿರುವ ರೈತರಿಗೆ ಬಿಸಿಲು ಮತ್ತಷ್ಟು ಆತಂಕ ಮೂಡಿಸಿದ್ದು, ಜಿಲ್ಲೆಯಲ್ಲಿ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಬೆಳಗ್ಗೆಯಿಂದಲೇ ಬಿಸಿಲಿನ ತೀವ್ರತೆ ಕಂಡುಬಂದಿದ್ದು, ಮಧ್ಯಾಹ್ನದ ವೇಳೆಗೆ ಉಷ್ಣಾಂಶ ಮತ್ತಷ್ಟು ಏರಿಕೆಯಾಯಿತು. ರಸ್ತೆಗಳಲ್ಲಿ ಸಂಚರಿಸುವವರು ಬಿಸಿಲಿನ ಝಳಕ್ಕೆ ಬಸವಳಿದರೆ, ಮನೆ, ಕಚೇರಿ ಹಾಗೂ ಅಂಗಡಿಗಳಲ್ಲಿ ಮತ್ತೆ ಫ್ಯಾನ್, ಕೂಲರ್, ಎಸಿಗಳ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಹಲವು ಭಾಗಗಳಲ್ಲಿ ಆಗಾಗ ಮೋಡ ಕವಿಯುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯುತ್ತಿಲ್ಲ. ಇದರಿಂದ ಮಳೆಯನ್ನೇ ನಂಬಿಕೊಂಡಿರುವ ರೈತರಲ್ಲಿ ಆತಂಕ ಹೆಚ್ಚಾಗಿದೆ. ಮುಂಗಾರು ಹಂಗಾಮಿನ ಕೊನೆಯ ಹಂತದಲ್ಲಾದರೂ ಉತ್ತಮ ಮಳೆಯಾದರೆ ಬೆಳೆಗಳಿಗೆ ಅನುಕೂಲವಾಗಬಹುದು ಎಂಬ ನಿರೀಕ್ಷೆಯಲ್ಲಿ ರೈತರು ಆಕಾಶದತ್ತ ಕಣ್ಣು ನೆಟ್ಟಿದ್ದಾರೆ. ಸದ್ಯದ ಬಿಸಿಲಿನ ವಾತಾವರಣ ಮುಂದುವರಿದರೆ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಈದಿನ.ಕಾಮ್ ಜೊತೆಗೆ ಮಾತನಾಡಿದ ರೈತ ಸಂಘಟನೆ ಬಾಗಲಕೋಟೆ ಮುಖಂಡ ಮುತ್ತಪ್ಪ ಕೊಮಾರ, “ಸರ್ಕಾರ ಬಾಗಲಕೋಟೆ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿರುವುದು ಕೇವಲ ಕಾಗದದ ಮೇಲಿನ ಆದೇಶವಾಗಬಾರದು. ಬರದಿಂದ ಸಂಕಷ್ಟಕ್ಕೀಡಾಗಿರುವ ರೈತರ ಕೈಗೆ ಪರಿಹಾರ ಮತ್ತು ನೆರವು ತಕ್ಷಣ ತಲುಪುವಂತೆ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ಬರಗಾಲ ಘೋಷಣೆ ಮಾಡಿ ಸುಮ್ಮನಿರುವುದರಿಂದ ರೈತರ ಸಂಕಷ್ಟ ದೂರವಾಗುವುದಿಲ್ಲ. ಮಳೆ ಕೈಕೊಟ್ಟು ಬೆಳೆ ನಷ್ಟವಾಗಿರುವ ಸಂದರ್ಭದಲ್ಲಿ ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸಿದರೆ ರೈತರ ಸಂಕಷ್ಟ ಮತ್ತಷ್ಟು ಗಂಭೀರವಾಗಲಿದೆ” ಎಂದು ಅವರು ಎಚ್ಚರಿಸಿದರು.
ಮಳೆಗಾಲದಲ್ಲಿ ಕೆಲಕಾಲ ಮೂಲೆಗುಂಪಾಗಿದ್ದ ಫ್ಯಾನ್, ಕೂಲರ್ ಹಾಗೂ ಎಸಿಗಳು ಇದೀಗ ಮತ್ತೆ ನಿರಂತರವಾಗಿ ಕಾರ್ಯನಿರ್ವಹಿಸುವಂತಾಗಿದೆ. ಬಿಸಿಲಿನ ತಾಪದ ಜತೆಗೆ ಕೆಲವೆಡೆ ವಿದ್ಯುತ್ ವ್ಯತ್ಯಯವೂ ಕಾಣಿಸಿಕೊಂಡಿರುವುದು ಜನರಿಗೆ ಮತ್ತಷ್ಟು ತೊಂದರೆ ತಂದಿದೆ.
This video cannot be played in your browser. Open the video directly
ಮಕ್ಕಳು ಹಾಗೂ ವಯೋವೃದ್ಧರು ಬಿಸಿಲಿನ ತೀವ್ರತೆಗೆ ಹೆಚ್ಚು ತೊಂದರೆ ಅನುಭವಿಸುವ ಸಾಧ್ಯತೆ ಇರುವುದರಿಂದ ಮಧ್ಯಾಹ್ನದ ವೇಳೆ ಅನಗತ್ಯವಾಗಿ ಹೊರಗೆ ಸಂಚರಿಸದಂತೆ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ.
ವಾತಾವರಣದಲ್ಲಿ ಬದಲಾವಣೆ?
ಸೆಪ್ಟೆಂಬರ್ ಕೊನೆಯ ದಿನಗಳಲ್ಲಿ ಜಿಲ್ಲೆಯಲ್ಲಿ ಮಳೆಯಾಗುವ ಸೂಚನೆಗಳಿದ್ದು, ಸೆ.25ರವರೆಗೆ ಗರಿಷ್ಠ ತಾಪಮಾನ ಸುಮಾರು 33 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಭಾರಿ ಮಳೆಯೂ ಸಂಭವಿಸುವ ಮುನ್ಸೂಚನೆ ಇದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಇದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗಗಳಲ್ಲಿ ಸೆಪ್ಟೆಂಬರ್ 24ರವರೆಗೆ ವ್ಯಾಪಕ ಮಳೆಯ ಮುನ್ಸೂಚನೆ ನೀಡಲಾಗಿದೆ.
ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಗದಗ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಮಳೆಯ ಸಾಧ್ಯತೆ ಇದ್ದು, ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ವಿಜ್ಞಾನಿ ಸಿ.ಎಸ್. ಪಾಟೀಲ ತಿಳಿಸಿದ್ದಾರೆ.
ಒಂದೆಡೆ ಮಳೆಗಾಲದ ಕೊನೆಯ ಹಂತ, ಮತ್ತೊಂದೆಡೆ 35 ಡಿಗ್ರಿ ತಾಪಮಾನ. ಈ ವೈರುಧ್ಯದ ವಾತಾವರಣದಲ್ಲಿ ಬಾಗಲಕೋಟೆ ಜಿಲ್ಲೆಯ ರೈತರು ಮತ್ತೆ ಆಕಾಶದತ್ತ ನೋಡುತ್ತಿದ್ದಾರೆ. ಮುನ್ಸೂಚನೆಯಂತೆ ಮಳೆ ಸುರಿದರೆ ಬೆಳೆಗಳಿಗೆ ಎಷ್ಟು ಜೀವ ತುಂಬಲಿದೆ? ಇಲ್ಲವೇ ಬಿಸಿಲಿನ ಅಬ್ಬರವೇ ಮುಂದುವರಿಯಲಿದೆಯೇ? ಎಂಬ ಪ್ರಶ್ನೆಗೆ ಮುಂದಿನ ಕೆಲವು ದಿನಗಳ ವಾತಾವರಣವೇ ಉತ್ತರ ನೀಡಬೇಕಿದೆ.





