ಕರ್ನಾಟಕದಲ್ಲಿರುವ ಮರಾಠಾ ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಸ್ಥಿತಿಗತಿಗಳನ್ನು ನಿಖರವಾಗಿ ಅರಿಯುವ ಉದ್ದೇಶದಿಂದ ಸಮುದಾಯದ ವತಿಯಿಂದ ಪ್ರತ್ಯೇಕ ಮೊಬೈಲ್ ಆ್ಯಪ್ ಮೂಲಕ ರಾಜ್ಯವ್ಯಾಪಿ ಡಿಜಿಟಲ್ ಸಮೀಕ್ಷೆ ಆರಂಭಿಸಲಾಗಿದೆ ಎಂದು ಕ್ಷತ್ರಿಯ ಮರಾಠ ಸಮಾಜದ ಧರ್ಮಗುರು ಪೂಜ್ಯ ದಾದಾ ಮಹಾರಾಜ ನಗರಕರ್ ತಿಳಿಸಿದರು.
ಬೀದರ್ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ಸಮುದಾಯವನ್ನು ಸಂಘಟಿಸುವುದು, ಅಗತ್ಯವಿರುವ ಕುಟುಂಬಗಳನ್ನು ಗುರುತಿಸುವುದು ಹಾಗೂ ಅರ್ಹರಿಗೆ ಸೂಕ್ತ ನೆರವು ಕಲ್ಪಿಸುವ ನಿಟ್ಟಿನಲ್ಲಿ ನಿಖರವಾದ ಅಂಕಿ-ಅಂಶಗಳ ಸಂಗ್ರಹ ಅತ್ಯಂತ ಅಗತ್ಯವಾಗಿದೆ” ಎಂದು ಹೇಳಿದರು.
“ಸಮೀಕ್ಷೆಯಲ್ಲಿ ಪ್ರತಿ ಕುಟುಂಬದ ಸದಸ್ಯರ ಶಿಕ್ಷಣ, ಉದ್ಯೋಗ, ಕೃಷಿ, ಆರೋಗ್ಯ, ಆರ್ಥಿಕ ಸ್ಥಿತಿ ಸೇರಿದಂತೆ ವಿವಿಧ ಮಾಹಿತಿಗಳನ್ನು ಸಂಗ್ರಹಿಸಲಾಗುವುದು. ಬಡವರು, ನಿರುದ್ಯೋಗಿಗಳು, ಕಾರ್ಮಿಕರು, ಕೃಷಿಕರು, ವಿಧವೆಯರು, ನಿರಾಶ್ರಿತ ಮಹಿಳೆಯರು ಹಾಗೂ ವಿಶೇಷಚೇತನರ ಸ್ಥಿತಿಗತಿಗಳ ಬಗ್ಗೆಯೂ ಮಾಹಿತಿ ಪಡೆಯಲಾಗುವುದು” ಎಂದು ತಿಳಿಸಿದರು.
“ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳು ಸಮುದಾಯದ ಜನರಿಗೆ ಎಷ್ಟರ ಮಟ್ಟಿಗೆ ತಲುಪಿವೆ ಎಂಬುದನ್ನು ತಿಳಿಯಲು ಬಿಪಿಎಲ್, ಎಪಿಎಲ್ ಸೇರಿದಂತೆ ಇತರ ವಿವರಗಳನ್ನು ಸಹ ದಾಖಲಿಸಲಾಗುವುದು. ಸಂಗ್ರಹಿಸಲಾದ ಅಂಕಿ-ಅಂಶಗಳು ಭವಿಷ್ಯದಲ್ಲಿ ಸಮುದಾಯದ ಸಾಮಾಜಿಕ ನ್ಯಾಯ, ಮೀಸಲಾತಿ ಹಾಗೂ ರಾಜಕೀಯ ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ಬೇಡಿಕೆಗಳಿಗೆ ಆಧಾರವಾಗಲಿವೆ” ಹೇಳಿದರು.
“ಸಮುದಾಯದ ಪ್ರತಿಯೊಬ್ಬರೂ ಮೊಬೈಲ್ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡು ಅಗತ್ಯ ಮಾಹಿತಿಯನ್ನು ಒದಗಿಸಬೇಕು. ಯಾವುದೇ ಕುಟುಂಬವೂ ಸಮೀಕ್ಷೆಯಿಂದ ಹೊರಗುಳಿಯದಂತೆ ಸಹಕರಿಸುವ ಮೂಲಕ ಈ ಮಹತ್ವದ ಕಾರ್ಯವನ್ನು ಯಶಸ್ವಿಗೊಳಿಸಬೇಕು” ಎಂದು ಮನವಿ ಮಾಡಿದರು.
ಕ್ಷತ್ರಿಯ ಮರಾಠಾ ಪರಿಷತ್ ಅಧ್ಯಕ್ಷ ದಿಗಂಬರರಾವ ಮಾನಕಾರಿ ಮಾತನಾಡಿ, “ಸಮುದಾಯದ ಜನಸಂಖ್ಯೆಯನ್ನು ಕೆಲವೆಡೆ ಕಡಿಮೆ ಪ್ರಮಾಣದಲ್ಲಿ ತೋರಿಸಲಾಗುತ್ತಿದೆ. ಆದ್ದರಿಂದ ರಾಜ್ಯದಲ್ಲಿರುವ ಮರಾಠಾ ಸಮುದಾಯದ ನೈಜ ಜನಸಂಖ್ಯೆ ಹಾಗೂ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ದಾಖಲಿಸುವುದು ಸಮೀಕ್ಷೆಯ ಪ್ರಮುಖ ಉದ್ದೇಶವಾಗಿದೆ” ಎಂದರು.
ವೆಂಕಟರಾವ ಮೆಂದೆ ಮಾತನಾಡಿ, “ಈಗಾಗಲೇ ಬೆಳಗಾವಿಯಲ್ಲಿ ಸಮೀಕ್ಷೆಗೆ ಚಾಲನೆ ನೀಡಲಾಗಿದ್ದು, ಇದೀಗ ಬೀದರ್ ಜಿಲ್ಲೆಯಲ್ಲಿಯೂ ಕಾರ್ಯ ಆರಂಭಿಸಲಾಗಿದೆ. ಗ್ರಾಮ ಮಟ್ಟದಲ್ಲಿ ಯುವಕರ ತಂಡ, ಹಿರಿಯರ ಮಾರ್ಗದರ್ಶನದಲ್ಲಿ ಮನೆ-ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಲಿವೆ. ಎರಡು-ಮೂರು ತಿಂಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಿ ಸಮಗ್ರ ಅಂಕಿ-ಅಂಶ ಸಿದ್ಧಪಡಿಸುವ ಗುರಿ ಹೊಂದಲಾಗಿದೆ” ಎಂದರು.
ಇದನ್ನೂ ಓದಿ : ಬೀದರ್ | ವಿದ್ಯುತ್ ಸ್ಪರ್ಶಿಸಿ ವಿಬಿ-ಜಿ ರಾಮ್ ಜಿ ಕಾರ್ಮಿಕ ಮಹಿಳೆ ಸಾವು
ಸುದ್ದಿಗೋಷ್ಠಿಯಲ್ಲಿ ಸಮುದಾಯದ ಹಿರಿಯ ಮುಖಂಡರಾದ ಜನಾರ್ಧನ ಬಿರಾದಾರ, ಕಿಶನರಾವ ಪಾಟೀಲ ಇಂಚೂರಕರ್, ವಕೀಲ ನಾರಾಯಣ ಗಣೇಶ, ಸತೀಶ ಮುಳೆ, ತಾತ್ಯಾರಾವ ಪಾಟೀಲ, ರಾವಸಾಹೇಬ ಬಿರಾದಾರ, ಅನಿಲ ಕಾಳೆ, ಸಮಾಜದ ಸಂಯೋಜಕರಾದ ಪ್ರದೀಪ ಬಿರಾದಾರ, ಅಮರ ಜಾಧವ, ಗೋರಖ ಶ್ರೀಮಾಳೆ, ವಿದ್ಯಾವಾನ ಪಾಟೀಲ, ಬಾಲಾಜಿ ವಾಡಿಕರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.




