ಕಮಲನಗರ ತಾಲ್ಲೂಕಿನ ರೈತರಿಗೆ 2025-26ನೇ ಸಾಲಿನ ಬೆಳೆ ವಿಮೆ ಪರಿಹಾರವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಈ ಸಂಬಂಧ ಸೋಮವಾರ ಕಮಲನಗರ ಜಿಲ್ಲಾಧಿಕಾರಿ ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಹೆಸರಿಗೆ ಬರೆದ ಮನವಿ ಪತ್ರವನ್ನು ಗ್ರೇಡ್-2 ತಹಶೀಲ್ದಾರ್ ರಮೇಶ ಪೆದ್ದೆ ಅವರಿಗೆ ಸಲ್ಲಿಸಿದರು.
ರೈತ ಸಂಘದ ತಾಲೂಕಾಧ್ಯಕ್ಷ ಪ್ರವೀಣ ಕುಲಕರ್ಣಿ ಮಾತನಾಡಿ, “ಬೀದರ್ ಜಿಲ್ಲೆಯ ಎಲ್ಲಾ ತಾಲ್ಲೂಕಿನ ರೈತರಿಗೆ ಬೆಳೆ ವಿಮೆ ಪರಿಹಾರ ಜಮೆಯಾಗಿದೆ. ಆದರೆ, ಕಮಲನಗರ ತಾಲ್ಲೂಕಿನ ರೈತರ ಖಾತೆಗೆ ಬೆಳೆ ವಿಮೆ ಪರಿಹಾರ ಮೊತ್ತ ಇನ್ನೂ ಜಮೆ ಆಗಿಲ್ಲ. ಶೀಘ್ರದಲ್ಲಿ ತಾಲ್ಲೂಕಿನ ಅರ್ಹ ರೈತರಿಗೆ ಬೆಳೆ ವಿಮೆ ಪರಿಹಾರ ವಿತರಿಸಲು ಸಂಬಂಧಿತ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.
‘ನಮ್ಮ ತಾಲೂಕಿನ ರೈತರಿಗೆ ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಈಗಲಾದರೂ ಅಧಿಕಾರಿಗಳೂ ಎಚ್ಚೆತ್ತು ವಾರದೊಳಗೆ ರೈತರ ಬೆಳೆ ವಿಮೆ ಪರಿಹಾರವನ್ನು ವಿತರಿಸಬೇಕು. ಇಲ್ಲದಿದ್ದರೆ ಹೋರಾಟ ರೂಪಿಸಲಾಗುವುದು’ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಲಿ : ಬಿ.ವೈ.ವಿಜಯೇಂದ್ರ
ರೈತ ಸಂಘದ ತಾಲೂಕು ಉಪಾಧ್ಯಕ್ಷ ವೈಜಿನಾಥ ವಡ್ಡೆ, ಕಾರ್ಯದರ್ಶಿ ವಿಠಲರಾವ ಪಾಟೀಲ, ರಾಮೇಶ್ವರ ಶಿವಣಕರ, ಗುಂಡಪ್ಪಾ ದಾನಾ, ಪ್ರಶಾಂತ ಖಾನಾಪುರೆ, ಶ್ರೀರಂಗ ಪರಿಹಾರ, ಶೆಟಕಾರ ವಿಜಯಕುಮಾರ, ರಾಜಕುಮಾರ ರಾಂಪೂರೆ, ಬಾಬು ಸಿದ್ರಾಮ, ದಿನೇಶ ಪ್ರಲಾದರಾವ, ರಾಜಕುಮಾರ ಮೇತ್ರೆ, ಬಸ್ವರಾಜ ಶಿವಶೇಟ್ಟಿ, ಭಿಮರಾವ ವಿಶ್ವನಾಥ ಸೇರಿದಂತೆ ಮತ್ತಿತರರಿದ್ದರು.




