ತಾಲೂಕಿನ ಶಿಂಗಾಡಿ ಕದಿರೇನಹಳ್ಳಿ ಗ್ರಾಮದ ದಲಿತರ ಭೂ ಸಮಸ್ಯೆಯನ್ನು ಕೂಡಲೇ ಇತ್ಯರ್ಥಪಡಿಸಬೇಕು ಹಾಗೂ ಅಧಿಕಾರಿಗಳ ದಲಿತ ವಿರೋಧಿ ಧೋರಣೆಯನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ(ದಸಂಸ),ಗಡಿನಾಡು ರೈತ ಸಂಘ ಹಾಗೂ ಗ್ರಾಮಸ್ಥರು ಸೋಮವಾರ ನಗರದ ತಹಶೀಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ಜಿಲ್ಲಾ ಉಪ ಅರಣ್ಯಾಧಿಕಾರಿಗಳ ಕಚೇರಿ ಎದುರು ಕಳೆದ 28 ದಿನಗಳಿಂದ ನಡೆಯುತ್ತಿರುವ ಧರಣಿಯ ಮುಂದುವರಿದ ಭಾಗವಾಗಿ ಪ್ರತಿಭಟನಾಕಾರರು ಅಲ್ಲಿಂದ ಸುಮಾರು ಮೂರು ಕಿಲೋಮೀಟರ್ ಕಾಲ್ನಡಿಗೆ ಜಾಥಾ ನಡೆಸಿ ತಹಶೀಲ್ದಾರ್ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ ಶಿಂಗಾಡಿಕದಿರೇನಹಳ್ಳಿ ದಲಿತರ ಭೂ ಸಮಸ್ಯೆ ಬಗೆಹರಿಸುವುದು,ಮೈಲಪ್ಪನಹಳ್ಳಿ ಹಾಗೂ ಗುವ್ವಲಕಾನಹಳ್ಳಿ ಪ್ರದೇಶದ ಬಡವರಿಗೆ ನಿವೇಶನ ಹಂಚಿಕೆ,ಡೀಮ್ಡ್ ಫಾರೆಸ್ಟ್ ಹೆಸರಿನಲ್ಲಿ ರೈತರ ಭೂಮಿಗಳಿಗೆ ಉಂಟಾಗುತ್ತಿರುವ ತೊಂದರೆ ನಿಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟರು.
ಈ ವೇಳೆ ದಸಂಸ ಮುಖಂಡ ಕೆ.ಸಿ. ರಾಜಕಾಂತ್ ಮಾತನಾಡಿ, 1972-73ರಲ್ಲಿ ಅಕ್ರಮ-ಸಕ್ರಮ ಯೋಜನೆಯಡಿ ದಲಿತರಿಗೆ ಮಂಜೂರಾದ ಭೂಮಿಗೆ ಇದೀಗ ಅರಣ್ಯ ಹಾಗೂ ಕಂದಾಯ ಇಲಾಖೆಗಳ ದಾಖಲೆಗಳಲ್ಲಿನ ಗೊಂದಲದಿಂದ ಸಮಸ್ಯೆ ಉಂಟಾಗಿದೆ. ಸರಿಯಾದ ದಾಖಲೆ ಪರಿಶೀಲನೆ ನಡೆಸದೆ ಅಧಿಕಾರಿಗಳು ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ ಫಲಾನುಭವಿಗಳು ಹಲವು ದಶಕಗಳಿಂದ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದು,1991–92ರಲ್ಲಿ ಆಡಳಿತಾತ್ಮಕ ಲೋಪದಿಂದ ಅರಣ್ಯ ಇಲಾಖೆಗೆ ಈ ಭೂಮಿಯನ್ನು ವರ್ಗಾಯಿಸಲಾಗಿದೆ ಎಂದು ಈಗ ಹೇಳಿ ದಲಿತ ರೈತರನ್ನು ತೆರವುಗೊಳಿಸಲು ಮುಂದಾಗಿರುವುದು ಅನ್ಯಾಯ ಎಂದು ಆರೋಪಿಸಿದರು.1991ರಿಂದ ಈವರೆಗೆ ಅರಣ್ಯ ಇಲಾಖೆ ತನ್ನ ಹಕ್ಕು ಪ್ರತಿಪಾದಿಸದೆ ಈಗ ಏಕಾಏಕಿ ಭೂಮಿ ತಮ್ಮದು ಎಂದು ಹೇಳುತ್ತಿರುವುದು ದಲಿತ ವಿರೋಧಿ ಧೋರಣೆಯಾಗಿದೆ.ಈ ಅನ್ಯಾಯಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.ಬಡ ರೈತರನ್ನು ರಕ್ಷಿಸಬೇಕಾದ ಕಂದಾಯ ಇಲಾಖೆ ಅಧಿಕಾರಿಗಳು ಕಳೆದ ಹಲವು ದಿನಗಳಿಂದ ಹೋರಾಟ ನಡೆಯುತ್ತಿದ್ದರೂ ಸಮಸ್ಯೆ ಬಗೆಹರಿಸಲು ಮುಂದಾಗದಿರುವುದು ಬೇಸರದ ಸಂಗತಿ.ತಹಶೀಲ್ದಾರ್ ಇಚ್ಛಾಶಕ್ತಿ ತೋರಿದರೆ ಸಮಸ್ಯೆ ಶೀಘ್ರ ಪರಿಹಾರವಾಗಬಹುದು ಎಂದು ಹೇಳಿದರು.ಜಿಲ್ಲೆಯಲ್ಲಿ ಸಾಕಷ್ಟು ಅರಣ್ಯ ಭೂಮಿ ಒತ್ತುವರಿಯಾಗಿದ್ದರೂ ದೊಡ್ಡ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿಗಳು,ಕೇವಲ ಬಡ ದಲಿತ ರೈತರನ್ನೇ ಗುರಿಯಾಗಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಜೆ.ಪ್ರಭು, ಕಾನೂನಿನ ಚೌಕಟ್ಟಿನೊಳಗೆ ಬಡ ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಜಿಲ್ಲಾಡಳಿತ ಮಾಡಲಿದೆ ಎಂದು ಭರವಸೆ ನೀಡಿದರು.ಜಿಲ್ಲಾಧಿಕಾರಿಗಳ ಮನವೊಲಿಕೆಯ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು ಇದೆ ವೇಳೆ ಪ್ರತಿಭಟನಾಕಾರರ ಮನವಿಯನ್ನು ಜಿಲ್ಲಾಧಿಕಾರಿಗಳು ಸ್ವೀಕರಿಸಿದರು.
ಇದನ್ನು ಓದಿದ್ದೀರಾ..? ಮುಳಬಾಗಿಲು | ಪ್ರಯತ್ನ ಮತ್ತು ನಿರಂತರ ಅಭ್ಯಾಸವೇ ಯಶಸ್ಸಿನ ಮಂತ್ರ: ಗೋಪಿನಾಥ್ ಕರವಿ
ಪ್ರತಿಭಟನೆಯಲ್ಲಿ ದಸಂಸ ರಾಜ್ಯ ಮುಖಂಡ ಗಡ್ಡಂ ವೆಂಕಟೇಶ್,ಕೆ.ಸಿ.ರಾಜಕಾಂತ್, ಜಿಲ್ಲಾ ಸಂಚಾಲಕ ಸಿ.ಜೆ. ಗಂಗಪ್ಪ,ಜಿಲ್ಲಾ ಸಂಘಟನಾ ಸಂಚಾಲಕ ಶ್ರೀರಂಗಪ್ಪ,ಜಿಲ್ಲಾ ಕಲಾ ಮಂಡಳಿ ಸಂಚಾಲಕ ತಾಲೂಕು ಸಂಚಾಲಕ ಎನ್.ಪರಮೇಶ್,ತಾಲೂಕು ಸಂಘಟನಾ ಸಂಚಾಲಕ ಮುನಿರಾಜು,ತ್ಯಾಗರಾಜು,ಚಿನ್ನಪ್ಪ,ಮುನಿಯಪ್ಪ,ವೆಂಕಟೇಶ್,ರಾಮಕೃಷ್ಣ,ಲಕ್ಷ್ಮಯ್ಯ,ಗಡಿನಾಡು ರೈತ ಸಂಘದ ರಾಜಶೇಖರ್,ಮುನಿರಾಜು,ರಾಮಕೃಷ್ಣಪ್ಪ,
ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಚಿಕ್ಕಬಳ್ಳಾಪುರ | ಶಿಂಗಾಡಿ ಕದಿರೇನಹಳ್ಳಿ ಗ್ರಾಮದ ದಲಿತರ ಭೂ ಸಮಸ್ಯೆಯನ್ನು ಕೂಡಲೇ ಇತ್ಯರ್ಥಪಡಿಸಬೇಕು ಎಂದು ಬೃಹತ್ ಪ್ರತಿಭಟನೆ
ಪೋಸ್ಟ್ ಹಂಚಿಕೊಳ್ಳಿ:




