ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ-3 ಆಗಿ ನೇಮಕಗೊಂಡಿದ್ದ ರಾಘವೇಂದ್ರ ಭಟ್ ಅವರ ನೇಮಕಾತಿ ಆದೇಶವನ್ನು ತೀವ್ರ ವಿರೋಧ ಹಾಗೂ ವಿವಾದಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತಾತ್ಕಾಲಿಕವಾಗಿ ತಡೆಹಿಡಿದಿದೆ.
ಇತ್ತೀಚೆಗೆ ರಾಜ್ಯ ಸರ್ಕಾರವು ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಮೂವರು ಮಾಧ್ಯಮ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧಿಸೂಚನೆಯಂತೆ, ಪಿ. ತ್ಯಾಗರಾಜ್ (ಮಾಧ್ಯಮ ಕಾರ್ಯದರ್ಶಿ-1), ಆರ್ ಜಯಪ್ರಕಾಶ್ (2ನೇ ಕಾರ್ಯದರ್ಶಿ) ಮತ್ತು ರಾಘವೇಂದ್ರ ಭಟ್ ಅವರನ್ನು 3ನೇ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಈ ಪೈಕಿ ರಾಘವೇಂದ್ರ ಭಟ್ ಅವರ ನೇಮಕ ತೀವ್ರ ವಿವಾದಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಅಂಡೆಪಿರ್ಕಿ ಎಂದಿದ್ದ ರಾಘವೇಂದ್ರ ಭಟ್ ಈಗ ಸಿಎಂ ಮಾಧ್ಯಮ ಕಾರ್ಯದರ್ಶಿ; 2021ರ ಪೋಸ್ಟ್ ವೈರಲ್!
ನೇಮಕಾತಿ ಆದೇಶದ ಬಳಿಕ ರಾಘವೇಂದ್ರ ಭಟ್ ಅವರು 2021ರಲ್ಲಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕರ್ನಾಟಕ ಕಾಂಗ್ರೆಸ್ ನಾಯಕರ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿ (ʼಫಟಿಂಗʼ, ʼಅಂಡೆ ಪಿರ್ಕಿʼ, ʼಓಡುಗಳ್ಳʼ ) ಕಟುವಾಗಿ ಟೀಕಿಸಿದ್ದ ಹಳೆಯ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ವೈರಲ್ ಆಗಿದ್ದವು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ರಾಹುಲ್ ಗಾಂಧಿಯವರನ್ನು ಹೀಯಾಳಿಸಿದ ವ್ಯಕ್ತಿಗೆ ಉನ್ನತ ಹುದ್ದೆ ನೀಡಿದ್ದಕ್ಕೆ ಕಾಂಗ್ರೆಸ್ನ ನೂರಾರು ಕಾರ್ಯಕರ್ತರು ಮತ್ತು ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಎಐಸಿಸಿ (AICC) ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ರಾಹುಲ್ ಗಾಂಧಿ ಅವರಿಗೆ ಅಧಿಕೃತ ದೂರು ನೀಡಿದ್ದರು.
ಕಾಂಗ್ರೆಸ್ ವಲಯದಿಂದ ವ್ಯಕ್ತವಾದ ಭಾರಿ ಒತ್ತಡ ಮತ್ತು ತೀವ್ರ ಅಸಮಾಧಾನಕ್ಕೆ ಮಣಿದ ರಾಜ್ಯ ಸರ್ಕಾರವು, ರಾಘವೇಂದ್ರ ಭಟ್ ಅವರ ನೇಮಕಾತಿಯನ್ನು ತುರ್ತಾಗಿ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.




