ಹೊಸ ಮತದಾರರಿಗೆ ಆನ್ಲೈನ್ ‘ಫಾರ್ಮ್ 6’ ರಲ್ಲಿ ಪೋಷಕರು ಅಥವಾ ಅಜ್ಜ-ಅಜ್ಜಿಯರ ಚುನಾವಣಾ ವಿವರಗಳ ಘೋಷಣೆಯನ್ನು ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ, ಸಿಪಿಎಂ ರಾಜ್ಯಸಭಾ ನಾಯಕ ಜಾನ್ ಬ್ರಿಟ್ಟಾಸ್ ಅವರು ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರಿಗೆ ಸೋಮವಾರ ಪತ್ರ ಬರೆದಿದ್ದಾರೆ. ಚುನಾವಣಾ ಆಯೋಗದ ಈ ಕ್ರಮದ ‘ಕಾನೂನುಬದ್ಧತೆ’ಯನ್ನು ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಆನ್ಲೈನ್ ಫಾರ್ಮ್ 6 ರಲ್ಲಿ ಈ ವಿಭಾಗವನ್ನು ಕಡ್ಡಾಯ ಎಂದು ಗುರುತಿಸದೇ ಇದ್ದರೂ, ಇದನ್ನು ಭರ್ತಿ ಮಾಡದೆ ಫಾರ್ಮ್ ಅನ್ನು ಸಲ್ಲಿಸಲು ಆನ್ಲೈನ್ ವ್ಯವಸ್ಥೆಯು ಅನುಮತಿಸುತ್ತಿಲ್ಲ ಎಂದು ಬ್ರಿಟ್ಟಾಸ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಎಎಪಿ ಸಂಸದರು ಬಿಜೆಪಿ ಸೇರ್ಪಡೆ: ‘ತನಿಖಾ ಸಂಸ್ಥೆಗಳ ದುರುಪಯೋಗದ ಪರಿಣಾಮ’ ಎಂದ ಸಿಪಿಐಎಂ ನಾಯಕ
ಕಾನೂನು ಮತ್ತು ನ್ಯಾಯ ಸಚಿವಾಲಯದ ಅಧಿಕೃತ ಗೆಜೆಟ್ನಲ್ಲಿ ಯಾವುದೇ ತಿದ್ದುಪಡಿ ಅಥವಾ ಅಧಿಸೂಚನೆ ಹೊರಡಿಸದೆ, ಚುನಾವಣಾ ಆಯೋಗವು (EC) 1960 ರ ಎಲೆಕ್ಟರ್ಸ್ ನೋಂದಣಿ ನಿಯಮಾವಳಿಗಳ ಶಾಸನಬದ್ಧ ‘ಫಾರ್ಮ್ 6’ ಅನ್ನು ನಿಯಮಬಾಹಿರವಾಗಿ ಮಾರ್ಪಡಿಸಿದೆ ಎಂದು ದೂರಿದ್ದಾರೆ.
“ಫಾರ್ಮ್ 6 ಎಂಬುದು ಕೇವಲ ಆಡಳಿತಾತ್ಮಕ ದಾಖಲೆಯಲ್ಲ. ಇದು 1950 ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 28 ರ ಅಡಿಯಲ್ಲಿ ಕೇಂದ್ರ ಸರ್ಕಾರ ರೂಪಿಸಿದ ನಿಯಮಗಳ ಭಾಗವಾಗಿದೆ. ಇಂತಹ ಶಾಸನಬದ್ಧ ಫಾರ್ಮ್ ಅನ್ನು ಕೇವಲ ಸಾಫ್ಟ್ವೇರ್ ಬದಲಾವಣೆ ಅಥವಾ ಆಡಳಿತಾತ್ಮಕ ಆದೇಶಗಳ ಮೂಲಕ ಮಾರ್ಪಡಿಸಲು ಸಾಧ್ಯವಿಲ್ಲ,” ಎಂದು ಜಾನ್ ಬ್ರಿಟ್ಟಾಸ್ ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ಹೊಸ ನಿಯಮವು ದೇಶದ ಪ್ರಜಾಪ್ರಭುತ್ವ ಹಕ್ಕುಗಳ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದಿರುವ ಅವರು, ಸಂವಿಧಾನದ ವಿಧಿ 326ರ ಪ್ರಕಾರ ಪ್ರತಿಯೊಬ್ಬ ವಯಸ್ಕ ನಾಗರಿಕನಿಗೂ ಮತದಾನದ ಹಕ್ಕಿದೆ. ಅದಕ್ಕೆ ಕಾನೂನುಬಾಹಿರವಾಗಿ ಯಾವುದೇ ಹೆಚ್ಚುವರಿ ಷರತ್ತುಗಳನ್ನು ವಿಧಿಸುವಂತಿಲ್ಲ ಎಂದಿದ್ದಾರೆ.
ಪೋಷಕರ ಹಳೆಯ ಚುನಾವಣಾ ದಾಖಲೆಗಳನ್ನು ಕಡ್ಡಾಯವಾಗಿ ಕೇಳುವುದರಿಂದ ಮೊದಲ ಬಾರಿಗೆ ಮತದಾನ ಮಾಡುವ ಯುವಕರು, ವಲಸಿಗರು, ದತ್ತು ಪಡೆದ ಮಕ್ಕಳು, ಅನಾಥರು ಮತ್ತು ದಶಕಗಳ ಹಿಂದಿನ ದಾಖಲೆಗಳನ್ನು ಹೊಂದಿಲ್ಲದ ಲಕ್ಷಾಂತರ ಸಾಮಾನ್ಯ ನಾಗರಿಕರಿಗೆ ಅನಗತ್ಯ ತೊಂದರೆಯಾಗಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕೂಡಲೇ ಇಸಿಐನೆಟ್ (ECINET) ಪೋರ್ಟಲ್ನಲ್ಲಿರುವ ಈ ಕಡ್ಡಾಯ ಘೋಷಣೆಯ ನಿಯಮವನ್ನು ಹಿಂಪಡೆಯಬೇಕು ಎಂದು ಬ್ರಿಟ್ಟಾಸ್ ಆಗ್ರಹಿಸಿದ್ದಾರೆ. ಒಂದು ವೇಳೆ ಈ ಘೋಷಣೆ ಸಾರ್ವಜನಿಕ ಹಿತಾಸಕ್ತಿಗೆ ಅಗತ್ಯವೆಂದು ಆಯೋಗ ಭಾವಿಸಿದರೆ, ನಿಯಮಾನುಸಾರ ಕಾನೂನು ತಿದ್ದುಪಡಿ ಪ್ರಕ್ರಿಯೆಯನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಅಲ್ಲಿಯವರೆಗೆ, ಕೇವಲ ಪೋಷಕರ ವಿವರಗಳ ಘೋಷಣೆ ಇಲ್ಲ ಎಂಬ ಕಾರಣಕ್ಕಾಗಿ ಯಾವುದೇ ಹೊಸ ಮತದಾರರ ಅರ್ಜಿಯನ್ನು ತಿರಸ್ಕರಿಸಬಾರದು ಅಥವಾ ಬಾಕಿ ಉಳಿಸಿಕೊಳ್ಳಬಾರದು ಎಂದು ಅವರು ಪತ್ರದ ಮೂಲಕ ಮುಖ್ಯ ಚುನಾವಣಾ ಆಯುಕ್ತರನ್ನು ಒತ್ತಾಯಿಸಿದ್ದಾರೆ.




