ತೃಣಮೂಲ ಕಾಂಗ್ರೆಸ್ (TMC) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸದ ಮೇಲೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಭಾರತೀಯ ಜನತಾ ಪಾರ್ಟಿ (BJP) ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಕೋಲ್ಕತ್ತಾ ಪೊಲೀಸರ ಕಾವಲಿದ್ದರೂ ಈ ಘಟನೆ ನಡೆದಿದ್ದು, ಇದನ್ನು ತಡೆಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿರುವ ಅವರು, “ಬೆಳಗ್ಗೆ ನಾನು ಗುಪ್ತ ಪರಿಶೀಲನೆ (recce) ಮಾಡುತ್ತಿದ್ದವರ ವಿಡಿಯೋವನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ, ಮಧ್ಯರಾತ್ರಿ 2 ಗಂಟೆಗೆ ಬಿಜೆಪಿ ಗೂಂಡಾಗಳು ನನ್ನ ಮನೆಯ ಮೇಲೆ ದಾಳಿ ಮಾಡಿದ್ದಾರೆ,” ಎಂದು ಹೇಳಿದ್ದಾರೆ. ದಾಳಿಯ ದೃಶ್ಯಗಳಿರುವ ವಿಡಿಯೋವನ್ನು ಸಹ ಅವರು ಹಂಚಿಕೊಂಡಿದ್ದಾರೆ.
ಕಳೆದ ಎರಡು ದಿನಗಳಿಂದ ಕೆಲ ಅಪರಿಚಿತ ವ್ಯಕ್ತಿಗಳು ನನ್ನ ಕಚೇರಿ ಮತ್ತು ನಿವಾಸದ ಸುತ್ತಮುತ್ತ ಗುಪ್ತ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಬ್ಯಾನರ್ಜಿ ಶುಕ್ರವಾರವೇ ಆರೋಪಿಸಿದ್ದರು. ಅವರನ್ನು ಪ್ರಶ್ನಿಸಿದಾಗ, ತಾವು ಪೊಲೀಸ್ ಸಿಬ್ಬಂದಿ ಎಂದು ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಶ್ನೆ ಎತ್ತಿರುವ ಬ್ಯಾನರ್ಜಿ, ಚುನಾಯಿತ ಸಂಸದನ ಕಚೇರಿ ಮತ್ತು ನಿವಾಸದ ಮೇಲೆ ಗೂಢಚಾರಿಕೆ ನಡೆಸಲು ರಾಜ್ಯ ಪೊಲೀಸರಿಗೆ ಯಾರು ಅನುಮತಿ ನೀಡಿದರು ಮತ್ತು ಇದರ ಉದ್ದೇಶವೇನು ಎಂದು ಕೇಳಿದ್ದಾರೆ.
ಇದೊಂದು ಅನುಮಾನಾಸ್ಪದ ಸಂಚು ಎಂದು ಬಣ್ಣಿಸಿರುವ ಅವರು, ಈ ಬಗ್ಗೆ ತುರ್ತು ಮತ್ತು ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದವರನ್ನು ಗುರುತಿಸಿ, ಈ ಕಾರ್ಯಾಚರಣೆಯನ್ನು ಯಾರು ಆದೇಶಿಸಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಲೋಕಸಭಾ ಸ್ಪೀಕರ್, ಕೋಲ್ಕತ್ತಾ ಪೊಲೀಸ್, ಕೇಂದ್ರ ಗೃಹ ಸಚಿವಾಲಯ ಮತ್ತು ಪಶ್ಚಿಮ ಬಂಗಾಳ ಪೊಲೀಸರಿಗೆ ಅವರು ಒತ್ತಾಯಿಸಿದ್ದಾರೆ.
ಕಳೆದ ಆರು ತಿಂಗಳಲ್ಲಿ ನನ್ನ ಪ್ರಾಣ ತೆಗೆಯಲು ನಡೆದಿರುವ 7ನೇ ಯತ್ನ ಇದಾಗಿದೆ ಎಂದು ಅಭಿಷೇಕ್ ಬ್ಯಾನರ್ಜಿ ಆತಂಕ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲಾ ಜೀವಬೆದರಿಕೆ ಬಂದರೂ ಪೊಲೀಸರಾಗಲಿ, ನ್ಯಾಯಾಲಯವಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಖೇದ ವ್ಯಕ್ತಪಡಿಸಿದ್ದಾರೆ. “ಇದೆಲ್ಲಾ ನಡೆಯುತ್ತಿದ್ದರೂ ಮೂಕ ಪ್ರೇಕ್ಷಕರಾಗಿರುವ ಕಲ್ಕತ್ತಾ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ಧನ್ಯವಾದಗಳು,” ಎಂದು ನ್ಯಾಯಾಂಗದ ನಿಷ್ಕ್ರಿಯತೆಯ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಆದರೆ, ಬ್ಯಾನರ್ಜಿ ಅವರ ಈ ಆರೋಪಗಳನ್ನು ಬಿಜೆಪಿ ತಳ್ಳಿಹಾಕಿದೆ. ಪಶ್ಚಿಮ ಬಂಗಾಳದ ಸಚಿವ ದಿಲೀಪ್ ಘೋಷ್ ಅವರು ಇದನ್ನು ‘ಜನರನ್ನು ದಾರಿತಪ್ಪಿಸುವ ಯತ್ನ’ ಎಂದು ಜರಿದಿದ್ದಾರೆ. “ಟಿಎಂಸಿ ನಾಯಕನನ್ನು ಕೊಲ್ಲಲು ಯಾರಿಗೆ ಇಷ್ಟ ಇದೆ? ಯಾರಾದರೂ ಅಶಾಂತಿ ಸೃಷ್ಟಿಸಿದರೆ, ಅದಕ್ಕೆ ಪ್ರತಿಕ್ರಿಯೆ ಇದ್ದೇ ಇರುತ್ತದೆ. ಅಲ್ಲದೆ, ಅಭಿಷೇಕ್ ಬ್ಯಾನರ್ಜಿ ಅವರನ್ನು ಕೊಲ್ಲಲು ಯಾರಿಗೂ ಸಮಯವಿಲ್ಲ. ಅವರಿಗೆ ಹೇಳಲು ಬೇರೆ ಏನೂ ವಿಷಯ ಇಲ್ಲದಿದ್ದಕ್ಕಾಗಿ ಈ ರೀತಿ ಆರೋಪ ಮಾಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ,” ಎಂದು ಘೋಷ್ ತಿರುಗೇಟು ನೀಡಿದ್ದಾರೆ.




