ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣದ ಜೊತೆಗೆ ಸಂವಹನ, ಮಾತುಗಾರಿಕೆ, ಸುದ್ದಿ ನಿರೂಪಣೆ ಹಾಗೂ ವರದಿಗಾರಿಕೆಯಂತಹ ಪ್ರಾಯೋಗಿಕ ಕೌಶಲಗಳನ್ನು ಬೆಳೆಸಿಕೊಂಡರೆ ಉದ್ಯೋಗದ ಜೊತೆಗೆ ಸ್ವಯಂ ಉದ್ಯೋಗಕ್ಕೂ ವಿಪುಲ ಅವಕಾಶಗಳು ದೊರೆಯಲಿವೆ ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕಲಾ ನಿಕಾಯದ ಸ್ನಾತಕ ವಿಭಾಗದ ಸಂಯೋಜಕ ಡಾ. ಅಕ್ಷಯ ಯಾರ್ದಿ ಹೇಳಿದರು.
ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಸ್ನಾತಕ ವಿದ್ಯಾರ್ಥಿನಿಯರಿಗಾಗಿ ಶುಕ್ರವಾರ ಆಯೋಜಿಸಿದ್ದ ಒಂದು ದಿನದ ಟೆಲಿವಿಷನ್ ನಿರೂಪಣೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿನಿಯರು ಕೇವಲ ಪದವಿ ಪಡೆಯುವುದಕ್ಕೆ ಸೀಮಿತವಾಗದೆ, ವೃತ್ತಿ ಬದುಕಿಗೆ ಪೂರಕವಾದ ಸಂವಹನ ಕೌಶಲಗಳನ್ನು ರೂಢಿಸಿಕೊಳ್ಳಬೇಕು. ಪ್ರಸ್ತುತ ಯೂಟ್ಯೂಬ್, ಪಾಡ್‌ಕಾಸ್ಟ್ ಹಾಗೂ ಸ್ವಂತ ಮಾಧ್ಯಮ ವೇದಿಕೆಗಳ ಮೂಲಕವೂ ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ವಿಶ್ವವಿದ್ಯಾಲಯದಲ್ಲಿರುವ ಸುಸಜ್ಜಿತ ಸ್ಟುಡಿಯೋ ಸೌಲಭ್ಯವನ್ನು ಬಳಸಿಕೊಂಡು ಇಂತಹ ಕಾರ್ಯಾಗಾರಗಳ ಮೂಲಕ ಪ್ರಾಯೋಗಿಕ ಜ್ಞಾನ ಗಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸ್ನಾತಕ ವಿಭಾಗದ ವಾಣಿಜ್ಯ ನಿಕಾಯದ ಸಂಯೋಜಕ ಡಾ. ಗಣೇಶ್ ಎ.ಆರ್. ಮಾತನಾಡಿ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದರೂ ಮಾನವೀಯ ಭಾವನೆಗಳು ಹಾಗೂ ಸಂದರ್ಭಕ್ಕೆ ತಕ್ಕಂತೆ ಸ್ಪಂದಿಸುವ ಸಾಮರ್ಥ್ಯಕ್ಕೆ ಪರ್ಯಾಯವಾಗಲು ಸಾಧ್ಯವಿಲ್ಲ. ನಿರೂಪಣೆ ಎಂದರೆ ಕೇವಲ ಸ್ಕ್ರಿಪ್ಟ್ ಓದುವುದಲ್ಲ; ಅನಿರೀಕ್ಷಿತ ಸಂದರ್ಭಗಳನ್ನು ಆತ್ಮವಿಶ್ವಾಸದಿಂದ ನಿಭಾಯಿಸುವ ಸಾಮರ್ಥ್ಯವೂ ಮುಖ್ಯ. ವಿದ್ಯಾರ್ಥಿನಿಯರು ಇಂತಹ ಕಾರ್ಯಾಗಾರಗಳ ಸದುಪಯೋಗ ಪಡೆದುಕೊಂಡು ತಮ್ಮ ಸಂವಹನ ಹಾಗೂ ನಿರೂಪಣಾ ಕೌಶಲಗಳನ್ನು ವೃದ್ಧಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರು, ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿನಿಯರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.




