ಈದ್‌ಮಿಲಾದ್ ಹಬ್ಬದ ಪ್ರಯುಕ್ತ ಆಗಸ್ಟ್ 26 ರಂದು ನಗರದಲ್ಲಿ ಬೃಹತ್ ಮೆರವಣಿಗೆ ನಡೆಯಲಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಸುಗಮ ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾಡಳಿತ ವಾಹನ ಸಂಚಾರ ಮಾರ್ಗಗಳಲ್ಲಿ ಮಹತ್ವದ ಬದಲಾವಣೆ ಮಾಡಿ ಆದೇಶಿಸಿದೆ. ಮಧ್ಯಾಹ್ನ 2 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಮೆರವಣಿಗೆ ಸಾಗುವ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಸಾರ್ವಜನಿಕ ವಾಹನಗಳಿಗೆ ಮುಂಜಾಗ್ರತಾ ಕ್ರಮವಾಗಿ ಬದಲಿ ಮಾರ್ಗಗಳನ್ನು ನಿಗದಿಪಡಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಭಂವರ್ ಸಿಂಗ್ ಮೀನಾ ಆದೇಶ ಹೊರಡಿಸಿದ್ದಾರೆ.
ನಗರದ ಅಂಡೆ ಛತ್ರದಿಂದ ಪ್ರಾರಂಭವಾಗಲಿರುವ ಮೆರವಣಿಗೆಯು ಎಂ.ಜಿ. ರಸ್ತೆ, ಪೋಸ್ಟ್ ಆಫೀಸ್ ಸರ್ಕಲ್, ನಾಯ್ಡು ರಸ್ತೆ, ತೊಗರಿಹಂಕಲ್ ಸರ್ಕಲ್, ಐ.ಜಿ. ರಸ್ತೆ, ಎನ್‌ಎಂಸಿ ಸರ್ಕಲ್, ಶೃಂಗಾರ್ ಸರ್ಕಲ್, ಆಶೀರ್ವಾದ್ ಸರ್ಕಲ್, ಬಸವನಹಳ್ಳಿ ಶಾಲೆ ರಸ್ತೆ, ಬಸವನಹಳ್ಳಿ ಮುಖ್ಯ ರಸ್ತೆ ಹಾಗೂ ಹನುಮಂತಪ್ಪ ವೃತ್ತದ ಮೂಲಕ ಹಾದು ಮತ್ತೆ ಅಂಡೆ ಛತ್ರವನ್ನು ತಲುಪಲಿದೆ. ಮೆರವಣಿಗೆ ಸಾಗುವ ಈ ಮಾರ್ಗಗಳಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ಅಡಚಣೆಯಾಗದಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಪ್ರಸ್ತಾವನೆಯ ಆಧಾರದ ಮೇಲೆ ಮಾರ್ಗ ಬದಲಾವಣೆ ಕ್ರಮ ಕೈಗೊಳ್ಳಲಾಗಿದೆ.
ಬದಲಾದ ಸಂಚಾರ ಮಾರ್ಗಗಳ ವಿವರದಂತೆ, ಹನುಮಂತಪ್ಪ ವೃತ್ತದಿಂದ ಪೋಸ್ಟ್ ಆಫೀಸ್ ಸರ್ಕಲ್‌ವರೆಗೆ ಎಂ.ಜಿ. ರಸ್ತೆ ಮುಖಾಂತರ ಸಂಚರಿಸುವ ವಾಹನಗಳು ಮಾರ್ಕೆಟ್ ರಸ್ತೆ ಮೂಲಕ ಹಾಗೂ ಪೋಸ್ಟ್ ಆಫೀಸ್ ಸರ್ಕಲ್‌ನಿಂದ ತೊಗರಿಹಂಕಲ್‌ವರೆಗೆ ನಾಯ್ಡು ರಸ್ತೆ ಮುಖಾಂತರ ಸಾಗುವ ವಾಹನಗಳು ಪ್ರಭು ರಸ್ತೆ ಮೂಲಕ ತೆರಳಬೇಕಿದೆ. ತೊಗರಿಹಂಕಲ್ ಸರ್ಕಲ್‌ನಿಂದ ಶೃಂಗಾರ್ ಸರ್ಕಲ್‌ವರೆಗೆ ಐ.ಜಿ. ರಸ್ತೆ ಮುಖಾಂತರ ಸಂಚರಿಸುವ ವಾಹನಗಳು ಬಾರ್‌ಲೇನ್ ಮತ್ತು ಮಾರ್ಕೆಟ್ ರಸ್ತೆ ಮೂಲಕ ಚಲಿಸಬೇಕು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಎರಡು ದಿನ ನೀರಿನ ವ್ಯತ್ಯಾಯ
ಅದೇ ರೀತಿ, ಶೃಂಗಾರ್ ಸರ್ಕಲ್ ಹಾಗೂ ಆಶೀರ್ವಾದ್ ಸರ್ಕಲ್ ಕಡೆಯಿಂದ ಸಂಚರಿಸುವ ವಾಹನಗಳು ಬಸವನಹಳ್ಳಿ ರಸ್ತೆ, ವಿಜಯಪುರ ಫುಡ್ಕೊರ್ಟ್ ರಸ್ತೆ ಮತ್ತು ಮಲ್ಲಂದೂರು ರಸ್ತೆ ಮೂಲಕ ಸಾಗಬೇಕು. ಜೊತೆಗೆ ತಾಲ್ಲೂಕು ಕಚೇರಿಯಿಂದ ಹನುಮಂತಪ್ಪ ವೃತ್ತದವರೆಗೆ ಬಸವನಹಳ್ಳಿ ರಸ್ತೆ ಮುಖಾಂತರ ಸಂಚರಿಸುವ ಸಾರ್ವಜನಿಕ ವಾಹನಗಳು ಆರ್.ಜಿ. ರಸ್ತೆ, ಕೆಂಪನಹಳ್ಳಿ ರಸ್ತೆ ಹಾಗೂ ವೀರಭದ್ರೇಶ್ವರ ದೇವಸ್ಥಾನದ ರಸ್ತೆ ಮುಖಾಂತರ ಸಂಚರಿಸುವಂತೆ ಜಿಲ್ಲಾಧಿಕಾರಿಗಳು ಸ್ಪಷ್ಟ ಸೂಚನೆ ನೀಡಿದ್ದಾರೆ.




