ಪ್ರವಾದಿ ಮಹಮದ್ (ಸ) ಅವರ ಜನ್ಮದಿನದ ಅಂಗವಾಗಿ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ವತಿಯಿಂದ ‘ಕ್ರಾಂತಿ ಜ್ಯೋತಿ’ ಹೆಸರಿನಲ್ಲಿ ಆ.26ರಿಂದ ಸೆ.6ರವರೆಗೆ ರಾಜ್ಯಾದ್ಯಂತ ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಾಲಿಡಾರಿಟಿ ಇಂಡಿಯಾದ ರಾಜ್ಯ ಕಾರ್ಯದರ್ಶಿ ಮೊಹಮದ್ ಇಸ್ಮಾಯಿಲ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾದಿ ಮಹಮದ್ (ಸ) ಅವರ ಜೀವನ, ಸಂದೇಶ ಹಾಗೂ ಮಾನವೀಯ ಮೌಲ್ಯಗಳನ್ನು ಯುವಜನರಿಗೆ ಪರಿಚಯಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದರು.
ಸತ್ಯ, ನ್ಯಾಯ, ಕರುಣೆ, ಮಾನವ ಸಮಾನತೆ, ಮಾನವ ಘನತೆ ಹಾಗೂ ಮಾನವಕುಲದ ಏಕತೆಯಂತಹ ಮೌಲ್ಯಗಳಿಗೆ ಪ್ರವಾದಿ ಮಹಮದ್ (ಸ) ಅವರು ನೀಡಿದ ಮಹತ್ವವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಪ್ರವಚನ, ವಿಚಾರಗೋಷ್ಠಿ, ಸಂವಾದ, ಚರ್ಚಾಗೋಷ್ಠಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಅರಬ್‌ನಲ್ಲಿ ಅಶಾಂತಿ, ಅನೀತಿ, ದೌರ್ಜನ್ಯ, ದಬ್ಬಾಳಿಕೆ ಸೇರಿದಂತೆ ಹಲವು ಸಾಮಾಜಿಕ ಸಮಸ್ಯೆಗಳು ವ್ಯಾಪಕವಾಗಿದ್ದ ಸಂದರ್ಭದಲ್ಲಿ ಅವುಗಳನ್ನು ನಿವಾರಿಸಲು ಪ್ರವಾದಿ ಮಹಮದ್ (ಸ) ಅವರು ಕೈಗೊಂಡ ಕ್ರಮಗಳು ಹಾಗೂ ತೋರಿಸಿಕೊಟ್ಟ ಮಾರ್ಗೋಪಾಯಗಳನ್ನು ಜನರಿಗೆ ಪರಿಚಯಿಸುವ ಉದ್ದೇಶವನ್ನು ಅಭಿಯಾನ ಹೊಂದಿದೆ ಎಂದರು.
ಎಸ್‌ಎಸ್‌ಎಲ್‌ಸಿ ಮೇಲ್ಪಟ್ಟ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದ್ದು, ಉತ್ತಮ ಬರಹಗಳಿಗೆ ಬಹುಮಾನ ನೀಡಲಾಗುವುದು. ಅಭಿಯಾನದ ಬಹುತೇಕ ಪ್ರವಚನಗಳು ಕನ್ನಡದಲ್ಲಿಯೇ ನಡೆಯಲಿದ್ದು, ಸ್ಥಳೀಯ ಭಾಷೆಯ ಮೂಲಕ ಪ್ರವಾದಿ ಮಹಮದ್ ಅವರ ಸಂದೇಶಗಳನ್ನು ಜನರಿಗೆ ತಲುಪಿಸಿ, ಅವರ ಕುರಿತು ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸುವುದು ಹಾಗೂ ವಿವಿಧ ಸಮುದಾಯಗಳ ನಡುವೆ ಬಾಂಧವ್ಯ ವೃದ್ಧಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾಹಿತಿ ಯೋಗೀಶ್ ಮಾಸ್ಟರ್ ಬರೆದಿರುವ ‘ಮಾನವ ಮನಸ್ಸಿನ ಕೃಷಿಕ–ಮನದೊಡೆಯ ಪ್ರವಾದಿ ಮಹಮದ್ (ಸ)’ ಹಾಗೂ ವಾರ್ತಾಭಾರತಿ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಬರೆದಿರುವ ‘ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮಹಮದ್ (ಸ)’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ಅಭಿಯಾನದ ಅಂಗವಾಗಿ ವೈಯಕ್ತಿಕ ಭೇಟಿ, ವಿಚಾರಗೋಷ್ಠಿ, ಸಾರ್ವಜನಿಕ ಸಮಾವೇಶ, ಸಂವಾದ, ಚರ್ಚಾಗೋಷ್ಠಿ, ಸೀರತ್ ಪ್ರವಚನ, ಪ್ರದರ್ಶನ, ಸಮಾಜ ಸೇವಾ ಚಟುವಟಿಕೆ ಹಾಗೂ ಸೌಹಾರ್ದ ಸಂದೇಶ ರ‍್ಯಾಲಿಗಳನ್ನು ಆಯೋಜಿಸಲಾಗುತ್ತಿದೆ. ಎಲ್ಲ ಸಮುದಾಯದವರಿಗೂ ಅಭಿಯಾನದಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ ಎಂದು ಮೊಹಮದ್ ಇಸ್ಮಾಯಿಲ್ ಹೇಳಿದರು.
ಜಮಾಅತೆ ಇಸ್ಲಾಮಿ ಹಿಂದ್‌ನ ತುಮಕೂರು ಜಿಲ್ಲಾಧ್ಯಕ್ಷ ಅಸ್ಸರ್ ಅಲಿಂವುಲ್ಲಾ ಮಾತನಾಡಿ, ಅಭಿಯಾನದ ಅಂಗವಾಗಿ ಸೆ.12ರಂದು ಸಂಜೆ 4 ಗಂಟೆಗೆ ನಗರದ ಎಂ.ಜಿ.ರಸ್ತೆಯ ಬಾಲಭವನದಲ್ಲಿ ಸೀರತ್ ಪ್ರವಚನ ಆಯೋಜಿಸಲಾಗಿದೆ. ಶಾಂತಿ ಪ್ರಕಾಶನದ ಮೊಹಮದ್ ಕುಯಿ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್‌ನ ಮುಖಂಡರಾದ ಇಮಾಮ್ ಬೇಗ್, ಶೇಖತುಲ್ ಉಲಮಾ, ಅಸಾದುಲ್ಲಾ ಖಾನ್, ಅಮೀದ್ ಅಫ್ಜಲ್, ತಮೀಜ್ ಉದ್ದೀನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.




