ಐದು ದಶಕಗಳ ಹೋರಾಟದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಂಡಿದ್ದು, ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದರೂ 3 ಟಿಎಂಸಿ ಅಡಿ ಭದ್ರಾ ನೀರನ್ನು ಮೀಸಲಿಟ್ಟು ಪ್ರಾಯೋಗಿಕವಾಗಿ ಹರಿಸಲು ಸರ್ಕಾರ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ ಎಂದು ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ ಹಾಗೂ ಪ್ರಧಾನ ಸಂಚಾಲಕ ಡಾ. ಬಂಜಗೆರೆ ಜಯಪ್ರಕಾಶ್ ತಿಳಿಸಿದ್ದಾರೆ.
ನೀರು ಹರಿಸಲು ಅಗತ್ಯ ಸಿದ್ಧತೆಗಳನ್ನು ಈಗಾಗಲೇ ಕೈಗೊಳ್ಳಲಾಗಿದ್ದು, ವಿಶ್ವೇಶ್ವರ ಜಲನಿಗಮದ ಕೋರಿಕೆ ಮೇರೆಗೆ ಯೋಜನೆಯ ಮೊದಲ ಹಂತದ ಪ್ರಾಯೋಗಿಕ ಚಾಲನೆಗಾಗಿ ನೀರು ಹರಿಸಲು ಸರ್ಕಾರ ಆದೇಶಿಸಿರುವುದು ಸಂತಸ ತಂದಿದೆ. ಕೂಡಲೇ ನೀರು ಹರಿಸುವ ದಿನಾಂಕವನ್ನು ನಿಗದಿಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕಾಡಾ ಸಮಿತಿಯೂ ಬಯಲುಸೀಮೆಯ ಜನರ ಸಂಕಷ್ಟಗಳನ್ನು ಅರಿತು ಮುಂದಿನ ದಿನಗಳಲ್ಲಿಯೂ ಚಿತ್ರದುರ್ಗ, ಕಡೂರು ಹಾಗೂ ತುಮಕೂರು ಜಿಲ್ಲೆಗಳಿಗೆ ಕಾಲಕಾಲಕ್ಕೆ ನೀರು ಹರಿಸಲು ಸಹಕಾರ ನೀಡಬೇಕು. ನೀರಿನ ವಿಚಾರದಲ್ಲಿ ಪರಸ್ಪರ ಸಂಘರ್ಷಕ್ಕೆ ಅವಕಾಶ ನೀಡದೆ, ಒಡಹುಟ್ಟಿದ ಅಣ್ಣತಮ್ಮಂದಿರಂತೆ ಪರಸ್ಪರ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಕೃಷಿ ಹಾಗೂ ಕುಡಿಯುವ ನೀರಿಗೆ ಆದ್ಯತೆ ನೀಡಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರೂಪಿಸಲಾಗಿತ್ತು. ಯೋಜನೆ ನಿಗದಿತ ಅವಧಿಯೊಳಗೆ ಪೂರ್ಣಗೊಂಡಿದ್ದರೆ ಬರಗಾಲದ ಸಂಕಷ್ಟದಿಂದ ಜಿಲ್ಲೆಯ ಜನರು ಸಾಕಷ್ಟು ಮಟ್ಟಿಗೆ ಪಾರಾಗಬಹುದಿತ್ತು. ಆದರೆ, ಕಾಮಗಾರಿ ವಿಳಂಬವಾಗಿರುವುದರಿಂದ ಜಿಲ್ಲೆಯ ಜನರು ಇಂದಿಗೂ ನೀರಿನ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಾಯೋಗಿಕವಾಗಿ ನೀರು ಹರಿಸಲು ಅನುಮತಿ ನೀಡಿರುವ ಸರ್ಕಾರ, ಕೂಡಲೇ ನೀರು ಹರಿಸುವ ಮಾರ್ಗಗಳ ತಪಾಸಣೆ ನಡೆಸಿ, ಯಾವುದೇ ತಾಂತ್ರಿಕ ತೊಂದರೆಗಳಿದ್ದರೆ ಅವುಗಳನ್ನು ನಿವಾರಿಸಿ ತಕ್ಷಣ ನೀರು ಹರಿಸುವ ದಿನಾಂಕವನ್ನು ಪ್ರಕಟಿಸಬೇಕು. ಪ್ರಾಯೋಗಿಕವಾಗಿ ನೀರು ಹರಿಸುವ ನಿರ್ಧಾರದಿಂದ ಜನರಲ್ಲಿ ಸಂತಸ ಮೂಡಿಸುವುದರ ಜೊತೆಗೆ ಬರಪೀಡಿತ ಪ್ರದೇಶಗಳಿಗೆ ಶಾಶ್ವತವಾಗಿ ನೀರು ಒದಗಿಸುವ ಉದ್ದೇಶದಿಂದ ಯೋಜನೆಯ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಗೆ 2009ರಲ್ಲಿ ಭೂಮಿಪೂಜೆ ನೆರವೇರಿಸಲಾಗಿದ್ದು, ನಂತರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳು ತಮ್ಮ ಅವಧಿಯಲ್ಲಿ ಅನುದಾನ ಬಿಡುಗಡೆ ಮಾಡಿವೆ. ಪ್ರಸ್ತುತ ರಾಜ್ಯ ಸರ್ಕಾರ ನೀರು ಹರಿಸಲು ನಿರ್ಧರಿಸಿರುವುದು ಉತ್ತಮ ನಡೆ. ಆದರೆ ಯೋಜನೆಯನ್ನು ಪೂರ್ಣಗೊಳಿಸಲು ಹಾಗೂ ಇರುವ ಕಾನೂನು ತೊಡಕುಗಳನ್ನು ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಮುಖ್ಯವಾಗಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಬೇಕು. ಕೇಂದ್ರ ಬಜೆಟ್‌ನಲ್ಲಿ 2023ರಲ್ಲಿ ಘೋಷಿಸಲಾದ ₹5,300 ಕೋಟಿ ಹಾಗೂ ಪರಿಷ್ಕೃತ ₹6,200 ಕೋಟಿ ಅನುದಾನವನ್ನು ಯಾವುದೇ ಷರತ್ತುಗಳಿಲ್ಲದೆ ಬಿಡುಗಡೆಗೊಳಿಸಬೇಕು. ಈ ಕುರಿತು ರಾಜ್ಯದ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಹಾಗೂ ಪ್ರಧಾನಮಂತ್ರಿಗಳ ಬಳಿ ನಿಯೋಗ ಕರೆದೊಯ್ಯಲು ಮುಖ್ಯಮಂತ್ರಿ ಸರ್ವಪಕ್ಷ ಸಭೆ ಕರೆಯಬೇಕು ಎಂದು ಆಗ್ರಹಿಸಿದ್ದಾರೆ.
ಅನೇಕ ಸಂಕಷ್ಟಗಳು ಹಾಗೂ ವಿಳಂಬದ ನಡುವೆಯೂ ಜಿಲ್ಲೆಯ ಜನರು ತಾಳ್ಮೆಯಿಂದ ಶಾಂತಿಯುತ ಹೋರಾಟದ ಹಾದಿಯಲ್ಲಿ ಸಾಗಿದ್ದಾರೆ. ಭದ್ರಾ ನೀರು ಪ್ರಾಯೋಗಿಕವಾಗಿ ಹರಿಯುವ ದಿನ ಜಿಲ್ಲೆಯ ಜನರಿಗೆ ಸಂಭ್ರಮದ ದಿನವಾಗಲಿದೆ. ಆದರೆ ಈ ಸಂಭ್ರಮ ಕೆಲವೇ ದಿನಗಳಿಗೆ ಸೀಮಿತವಾಗದೆ, ಚಿತ್ರದುರ್ಗ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸುವುದು ಹಾಗೂ ಯಾವುದೇ ಕೃಷಿ ಭೂಮಿಯನ್ನು ಕೈಬಿಡದೆ ಎಲ್ಲ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಸರ್ಕಾರದ ಹೊಣೆಗಾರಿಕೆಯಾಗಿದೆ ಎಂದು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಎಲ್ಲರನ್ನು ಒಳಗೊಂಡು ಹೋರಾಟವನ್ನು ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಎಂದಿನಂತೆ ಮುಂದುವರಿಸಲಿದೆ ಎಂದು ಸಂಚಾಲಕರಾದ ಚಳ್ಳಕೆರೆ ಬಸವರಾಜ್, ನರೇನಹಳ್ಳಿ ಅರುಣ್‌ಕುಮಾರ್, ಜೋಗಿಮಟ್ಟಿ ಮಹೇಶಬಾಬು ಹಾಗೂ ಮುಖಂಡರಾದ ಆರ್. ಶೇಷಣ್ಣಕುಮಾರ್, ಕೂನಿಕೆರೆ ರಾಮಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




