ಸಮಾಜದಲ್ಲಿ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಒಡಕು ಮೂಡಿಸಲು ಹಿಂದುತ್ವ ಕೋಮುವಾದಿ ಗುಂಪುಗಳು ಹವಣಿಸುತ್ತಿವೆ. ಅಂತಹದೊಂದು ಕೃತ್ಯವನ್ನು ಟಿ ನರಸೀಪುರದಲ್ಲಿ ವಿಪಕ್ಷ ನಾಯಕ, ಬಿಜೆಪಿಗ ಆರ್ ಅಶೋಕ್ ನೇತೃತ್ವದ ತಂಡ ಭಾನುವಾರ ಎಸಗಿದೆ. ಇಂತಹ ಕೋಮುವಾದಿಗಳ ನಡುವೆ, ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ಪಟ್ಟಣದ ಮುಸ್ಲಿಂ ಮಹಿಳೆಯೊಬ್ಬರು ಧಾರ್ಮಿಕ ಸೌಹಾರ್ದತೆ ಸಾರಲು ಶ್ರಮಿಸುತ್ತಿದ್ದಾರೆ. ಕಳೆದ 18 ವರ್ಷಗಳಿಂದ ಗಣೇಶ ಸಮಿತಿಯೊಂದನ್ನು ಮುನ್ನಡೆಸುತ್ತಿರುವ ಅವರು ಸೌಹಾರ್ದ ಗಣೇಶ ಹಬ್ಬ ಆಚರಿಸುತ್ತಿದ್ದಾರೆ.
ಎನ್.ಆರ್. ಪುರ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷೆಯಾಗಿರುವ ಜುಬೇದಾ ಅವರು ರಾಜೀವನಗರದ ಶ್ರೀ ವಿನಾಯಕ ಸೇವಾ ಸಮಿತಿಯ ಅಧ್ಯಕ್ಷೆಯಾಗಿದ್ದಾರೆ. ಕಳೆದ 18 ವರ್ಷಗಳಿಂದ ಪ್ರತಿ ವರ್ಷ ಮೂರು ದಿನಗಳ ಕಾಲ ಗಣಪತಿ ವಿಗ್ರಹವನ್ನು ಪ್ರತಿಷ್ಠಾಪಿಸಿ ಅದ್ಧೂರಿಯಾಗಿ ಹಬ್ಬ ಆಚರಿಸುತ್ತಾರೆ. ಗಣೇಶೋತ್ಸವದ ಸಮಯದಲ್ಲಿ ನಡೆಯುವ ಗಣಪತಿ ಹೋಮ, ಸತ್ಯನಾರಾಯಣ ಪೂಜೆ ಸೇರಿದಂತೆ ಎಲ್ಲ ಧಾರ್ಮಿಕ ವಿಧಿವಿಧಾನಗಳ ಮೇಲ್ವಿಚಾರಣೆಯನ್ನು ಅವರೇ ವಹಿಸಿಕೊಳ್ಳುತ್ತಾರೆ. ಇದರ ಜೊತೆಗೆ, ಅವರು ಪಟ್ಟಣದ ಕಾರ್ತಿಕ ದೀಪೋತ್ಸವ ಸಮಿತಿಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಹಬ್ಬದ ಸಮಯದಲ್ಲಿ ಗಣೇಶ ಪೆಂಡಾಲಿನ ಆವರಣವನ್ನು ಸಗಣಿಯಿಂದ ಸಾರಿಸಿ, ಬಣ್ಣ ಬಣ್ಣದ ರಂಗೋಲಿಗಳಿಂದ ಅಲಂಕರಿಸಲು ಅವರು ಮಹಿಳೆಯರಿಗೆ ಪ್ರೋತ್ಸಾಹ ನೀಡುತ್ತಾರೆ. ಮೂರ್ತಿ ವಿಸರ್ಜನೆಯಾಗುವವರೆಗೂ ಎಲ್ಲ ಪೂಜಾ ಕೈಂಕರ್ಯಗಳು ಶಾಸ್ತ್ರೋಕ್ತವಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ.
“ನಾನು ನನ್ನನ್ನು ಮೊದಲು ಭಾರತೀಯಳು ಎಂದು ಭಾವಿಸುತ್ತೇನೆ. ಧರ್ಮ ಮತ್ತು ಜಾತಿ ಆಮೇಲೆ ಬರುತ್ತದೆ. ನನ್ನ ಧರ್ಮಕ್ಕೆ ಬದ್ಧಳಾಗಿದ್ದುಕೊಂಡು ಇತರ ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ. ನನಗೆ ಧರ್ಮಕ್ಕಿಂತ ಮಾನವೀಯತೆಯೇ ಮುಖ್ಯ,” ಎಂದು ಜುಬೇದಾ ಹೇಳಿದ್ದಾರೆ.
ಸ್ಥಳೀಯರು ಜುಬೇದಾ ಅವರ ಸಾಮಾಜಿಕ ಮತ್ತು ಧಾರ್ಮಿಕ ಸೇವೆಯನ್ನು ಶ್ಲಾಘಿಸಿದ್ದು, ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತುವವರಿಗೆ ಜುಬೇದಾ ಅವರ ಜೀವನವೇ ಒಂದು ಉತ್ತಮ ಮಾದರಿ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.




