RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್ಎಸ್ಎಸ್ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ ಎಂದು ಅದು ಉಲ್ಲೇಖಿಸಿದೆ.
ಭಾರತದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ನೋಂದಣಿ ಇಲ್ಲದಿರುವುದನ್ನು ಕಾಂಗ್ರೆಸ್ ನಿರಂತರವಾಗಿ ಪ್ರಶ್ನಿಸುತ್ತಿರುವ ಬೆನ್ನಲ್ಲೇ, ಅದರ ಅಂಗಸಂಸ್ಥೆಯೊಂದು ಅಮೆರಿಕ ಸರ್ಕಾರದಲ್ಲಿ ನೋಂದಾಯಿಸಿಕೊಂಡಿದೆ. ಆದರೆ, ಆರ್ಎಸ್ಎಸ್ ಅನ್ನು ‘ಭಾರತ ಮೂಲದ, ನೋಂದಣಿಯಾಗದ ವ್ಯಕ್ತಿಗಳ ಸಂಘಟನೆ’ ಎಂದು ಬಣ್ಣಿಸಿರುವ ಅದು, ಆರ್ಎಸ್ಎಸ್ ಜೊತೆ ಮೌಖಿಕ ಒಪ್ಪಂದ ಮಾತ್ರವಿದ್ದು, ಯಾವುದೇ ಲಿಖಿತ ಒಪ್ಪಂದ ಮಾಡಿಕೊಂಡಿಲ್ಲ ಎಂದು ಹೇಳಿದೆ.
RSS Friends ಎಂಬ ಸಂಘಟನೆಯು ಅಮೆರಿಕದ ನ್ಯಾಯಾಂಗ ಇಲಾಖೆಯಲ್ಲಿ (Department of Justice) ಆರ್ಎಸ್ಎಸ್ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. 1938ರ ವಿದೇಶಿ ಏಜೆಂಟ್ಗಳ ನೋಂದಣಿ ಕಾಯ್ದೆ (Foreign Agents Registration Act- FARA) ಅಡಿಯಲ್ಲಿ 2026ರ ಆಗಸ್ಟ್ 27ರಂದು RSS Friends ನೋಂದಣಿ ಮಾಡಿಸಿಕೊಂಡಿದೆ.
RSS Friends ತನ್ನ ವಿಳಾಸವನ್ನು ಜಾರ್ಜಿಯಾ ರಾಜ್ಯದಲ್ಲಿ ನಮೂದಿಸಿದ್ದರೆ, ತನ್ನ ‘ವಿದೇಶಿ ಮೂಲ ಸಂಸ್ಥೆ’ (Foreign Principal) ಎಂದು ಉಲ್ಲೇಖಿಸಿರುವ ಆರ್ಎಸ್ಎಸ್ನ ವಿಳಾಸವನ್ನು ದೆಹಲಿಯ ಕೇಶವ ಕುಂಜ್ನಲ್ಲಿರುವ ಅದರ ಕೇಂದ್ರ ಕಚೇರಿಯದ್ದಾಗಿ ದಾಖಲಿಸಿದೆ.
ನೋಂದಣಿ ದಾಖಲೆಯಲ್ಲಿ ಆರ್ಎಸ್ಎಸ್ ಅನ್ನು ‘ಭಾರತ ಮೂಲದ, ನೋಂದಣಿಯಾಗದ ವ್ಯಕ್ತಿಗಳ ಸಂಘಟನೆ ಅಥವಾ ಸ್ವಯಂಸೇವಾ ಸಂಘ’ ಎಂದು ವಿವರಿಸಲಾಗಿದೆ. ಭಾರತೀಯ ಕಾನೂನಿನ ಅಡಿಯಲ್ಲಿ ಆರ್ಎಸ್ಎಸ್ ಅನ್ನು ಸೊಸೈಟಿ, ಟ್ರಸ್ಟ್, ಕಂಪನಿ ಅಥವಾ ಲಾಭರಹಿತ ಸಂಸ್ಥೆಯಾಗಿ ನೋಂದಾಯಿಸಲಾಗಿದೆಯೇ ಇಲ್ಲವೇ ಎಂಬುದನ್ನು ಲೆಕ್ಕಿಸದೆ, FARA ಕಾಯ್ದೆಯಡಿ ಅದನ್ನು ಸ್ವೀಕಾರಾರ್ಹ ವಿದೇಶಿ ಸಂಘಟನೆಯೆಂದು ಪರಿಗಣಿಸಬಹುದು ಎಂದು RSS Friends ಸಲ್ಲಿಸಿರುವ ನೋಂದಣಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನು ಓದಿದ್ದೀರಾ?: ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳ ಡಿಲೀಟ್: ಮೋದಿ ಸರ್ಕಾರದ ವಿರುದ್ಧ ಧ್ರುವ್ ರಾಠಿ ಆಕ್ರೋಶ
ಆರ್ಎಸ್ಎಸ್ ‘ಹಿಂದೂ ಸಾಂಸ್ಕೃತಿಕ, ಸಾಮಾಜಿಕ ಸೇವೆ, ಶೈಕ್ಷಣಿಕ, ನಾಗರಿಕ ಮತ್ತು ಸೈದ್ಧಾಂತಿಕ ಚಟುವಟಿಕೆಗಳಲ್ಲಿ’ ತೊಡಗಿಸಿಕೊಂಡಿದೆ ಎಂದು ಅದು ಹೇಳಿದೆ. ಅಲ್ಲದೆ, ಸ್ಥಳೀಯ ಸದಸ್ಯರ ಗುಂಪುಗಳು ಮತ್ತು ತರಬೇತಿ ಕಾರ್ಯಕ್ರಮಗಳನ್ನು ಸಂಘಟಿಸುವುದು, ಸಮುದಾಯ ಸೇವೆ ಹಾಗೂ ಪರಿಹಾರ ಕಾರ್ಯಗಳಿಗೆ ಬೆಂಬಲ ನೀಡುವುದು ಮತ್ತು ಸಾಮಾಜಿಕ ಹಾಗೂ ಹಿಂದೂ ಸಾಂಸ್ಕೃತಿಕ ತತ್ವಗಳನ್ನು ಪ್ರಚಾರ ಮಾಡುವುದು ಆರ್ಎಸ್ಎಸ್ನ ಚಟುವಟಿಕೆಗಳಾಗಿವೆ ಎಂದು ವಿವರಿಸಿದೆ.
ಯಾವುದೇ ವಿದೇಶಿ ಸರ್ಕಾರ ಅಥವಾ ವಿದೇಶಿ ರಾಜಕೀಯ ಪಕ್ಷದೊಂದಿಗೆ ತನಗೆ ಸಂಬಂಧವಿಲ್ಲ ಎಂದು RSS Friends ಹೇಳಿಕೊಂಡಿದೆ. ಆರ್ಎಸ್ಎಸ್ ಪರವಾಗಿ ತಾನು ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದೂ ನೋಂದಣಿ ಹೇಳಿಕೆಯಲ್ಲಿ ಘೋಷಿಸಿದೆ.
RSS Friends ಮತ್ತು ಆರ್ಎಸ್ಎಸ್ ನಡುವೆ ಮೌಖಿಕ ಒಪ್ಪಂದವಿದೆಯೇ ಹೊರತು, ಲಿಖಿತ ಒಪ್ಪಂದವಿಲ್ಲ ಎಂದು ನೋಂದಣಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
”ನಿರ್ದಿಷ್ಟ ಕಾರ್ಯಫಲಿತಾಂಶಗಳು, ಸಂಭಾವನೆ ಅಥವಾ ವಿವರವಾದ ಕಾರ್ಯಾಚರಣಾ ಸೂಚನೆಗಳನ್ನು ಒಳಗೊಂಡ ಉದ್ಯೋಗ, ಸಮಾಲೋಚನೆ, ಲಾಬಿ, ಸಾರ್ವಜನಿಕ ಸಂಪರ್ಕ ಅಥವಾ ಏಜೆನ್ಸಿಗೆ ಸಂಬಂಧಿಸಿದ ಯಾವುದೇ ಲಿಖಿತ ಒಪ್ಪಂದವನ್ನು RSS Friends ಆರ್ಎಸ್ಎಸ್ ಜೊತೆ ಮಾಡಿಕೊಂಡಿಲ್ಲ. ಲಿಖಿತ ಒಪ್ಪಂದ ಇಲ್ಲ ಎಂಬುದನ್ನು, ಈ ಎರಡು ಸಂಸ್ಥೆಗಳ ನಡುವೆ ಯಾವುದೇ ಸಂಬಂಧ, ಮನವಿ, ತಿಳಿವಳಿಕೆ, ಸಮನ್ವಯ, ಅನುಮತಿ, ನಿರ್ದೇಶನ ಅಥವಾ ಇತರ ಸಂಬಂಧಿತ ವಾಸ್ತವಿಕ ಸಂಪರ್ಕವೇ ಇಲ್ಲ ಎಂಬ ಹೇಳಿಕೆಯಾಗಿ ಅರ್ಥೈಸಬಾರದು. ತನ್ನ ಚಟುವಟಿಕೆಗಳಿಗೆ ಸಂಬಂಧಿಸಿದ ನೈಜ ಸಂಗತಿಗಳನ್ನು RSS Friends ಬಹಿರಂಗಪಡಿಸಲಿದೆ” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
RSS Friends ಜೊತೆ ಸಂಬಂಧ ಹೊಂದಿರುವ ಮೂವರು ವ್ಯಕ್ತಿಗಳ ಹೆಸರುಗಳನ್ನೂ ನೋಂದಣಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಅವರು ರಾಜೇಂದ್ರ ಸೋನಾರಿಕರ್, ಜಯಂತ್ ಪಂತ್ ಮತ್ತು ಪ್ರತೀಕ್ ಕುಮಾರ್ ಸುಥಾರ್.

ನ್ಯೂಯಾರ್ಕ್ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ ಆಗಸ್ಟ್ 29ರಂದು ಬೃಹತ್ ಆರ್ಎಸ್ಎಸ್ ಸಮಾವೇಶ ನಡೆಯುವುದಕ್ಕೆ ಕೇವಲ ಎರಡು ದಿನಗಳ ಮೊದಲು ಈ ನೋಂದಣಿ ಹೇಳಿಕೆಯನ್ನು ಸಲ್ಲಿಸಲಾಗಿದೆ. ಆ ಸಮಾವೇಶದಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾಗವಹಿಸಿದ್ದರು. ‘ಯುನಿವರ್ಸಲ್ ಒನ್ನೆಸ್ ಸೆಲೆಬ್ರೇಷನ್’ (Universal Oneness Celebration) ಎಂಬ ಹೆಸರಿನಲ್ಲಿ ನಡೆದ ಈ ಕಾರ್ಯಕ್ರಮವನ್ನು American Hindus for Engagement and Dialogue (AHEAD) ಎಂಬ ಲಾಭರಹಿತ ಸಂಸ್ಥೆ ಆಯೋಜಿಸಿತ್ತು.
ತನ್ನ ಉದ್ದೇಶಿತ ಚಟುವಟಿಕೆಗಳು ”ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಗೆ ಸಂಬಂಧಿಸಿವೆ” ಎಂದು RSS Friends ಅಮೆರಿಕದ ನ್ಯಾಯಾಂಗ ಇಲಾಖೆಗೆ ತಿಳಿಸಿದೆ.
ಸಂಶೋಧಕರು, ವಿದ್ವಾಂಸರು ಮತ್ತು ಚಿಂತಕರ ವೇದಿಕೆಗಳೊಂದಿಗೆ ಚರ್ಚೆಗಳಲ್ಲಿ ಭಾಗವಹಿಸುವುದು ಹಾಗೂ RSS Friends ಪ್ರಕಾರ ತಪ್ಪಾಗಿರುವ ಮಾಹಿತಿಯನ್ನು ಸರಿಪಡಿಸುವುದು ಅಥವಾ ಅದಕ್ಕೆ ಪ್ರತಿಕ್ರಿಯೆ ನೀಡುವುದು ತನ್ನ ಚಟುವಟಿಕೆಗಳಲ್ಲಿ ಸೇರಿವೆ ಎಂದು ಅದು ಹೇಳಿದೆ.
”ತನ್ನ ಆಡಳಿತಾತ್ಮಕ ದಾಖಲೆಗಳು ಮತ್ತು ಅನ್ವಯವಾಗುವ ಕಾನೂನುಗಳಿಗೆ ಅನುಗುಣವಾಗಿ, ಸಾರ್ವಜನಿಕರು, ಪತ್ರಕರ್ತರು, ಮಾಧ್ಯಮ ಸಂಸ್ಥೆಗಳು, ಸಂಶೋಧಕರು, ಶೈಕ್ಷಣಿಕ ಹಾಗೂ ನೀತಿ ರೂಪಿಸುವ ಸಂಸ್ಥೆಗಳು, ಸಮುದಾಯದ ನಾಯಕರು, ನಾಗರಿಕ ಸಮಾಜದ ಸಂಘಟನೆಗಳು ಮತ್ತು ಸೂಕ್ತ ಸಂದರ್ಭಗಳಲ್ಲಿ ಸರ್ಕಾರಿ ಸಂಸ್ಥೆಗಳು ಅಥವಾ ಅಧಿಕಾರಿಗಳೊಂದಿಗೆ ಅದು ಸಂವಹನ ನಡೆಸಬಹುದು” ಎಂದು RSS Friends ಹೇಳಿದೆ.
ಕೃಪೆ: ದಿ ನ್ಯೂಸ್ ಮಿನಿಟ್




