ಬ್ಲೂಟೂತ್‌ನ ಲೋಗೋ ಸಹ ಕೇವಲ ಒಂದು ಜ್ಯಾಮಿತೀಯ ವಿನ್ಯಾಸವಲ್ಲ. ಅದು ಹರಾಲ್ಡ್ ಬ್ಲೂಟೂತ್‌ನ ಹೆಸರಿನ ಮೊದಲ ಅಕ್ಷರಗಳಾದ ‘H’ ಮತ್ತು ‘B’ ಯನ್ನು ಪ್ರತಿನಿಧಿಸುವ ಪ್ರಾಚೀನ ನಾರ್ಸ್ ರೂನ್ (Norse Rune) ಚಿಹ್ನೆಗಳ ಸಂಯೋಜನೆಯಾಗಿದೆ. ಸಾವಿರ ವರ್ಷಗಳ ಹಿಂದೆ ಯುರೋಪನ್ನು ಒಗ್ಗೂಡಿಸಿದ ಕಾರಣಕ್ಕೆ ಹೆಸರುವಾಸಿಯಾಗಿದ್ದ ವೈಕಿಂಗ್ ರಾಜನ ಹೆಸರು, ಇಂದು ಇಡೀ ಡಿಜಿಟಲ್ ಜಗತ್ತನ್ನೇ ಬೆಸೆಯುತ್ತಿದೆ.
ನಾವು ದಿನನಿತ್ಯ ಬಳಸುವ ವಸ್ತುಗಳ ಅಥವಾ ತಂತ್ರಜ್ಞಾನದ ಹೆಸರುಗಳ ಹಿಂದಿರುವ ಕಥೆಗಳ ಬಗ್ಗೆ ನಾವೆಂದೂ ತಲೆಕೆಡಿಸಿಕೊಳ್ಳುವುದಿಲ್ಲ, ಅಲ್ಲವೇ? ಇಂದಿನ ಆಧುನಿಕ ಜಗತ್ತಿನಲ್ಲಿ ಪ್ರತಿನಿತ್ಯ ಕೋಟ್ಯಂತರ ಜನರು ಬಳಸುವಂತಹ ಒಂದು ತಂತ್ರಜ್ಞಾನದ ಹೆಸರಿಗೆ ಸಾವಿರ ವರ್ಷಗಳ ಇತಿಹಾಸವಿದೆ ಎಂದರೆ ನೀವು ನಂಬುತ್ತೀರಾ? ನೈಂಟೀಸ್ ಕಿಡ್ಸ್‌ನಿಂದ ಹಿಡಿದು ಇಂದಿನ ಜೆನ್‌ಜಿಗಳವರೆಗೂ ಸಹ ಉಪಯೋಗಿಸುತ್ತಿರುವ ಬ್ಲೂಟೂತ್‌ಗೂ ಸಹ ಇಂತಹ ಇತಿಹಾಸ ಇದೆ ಎಂದರೆ ನಂಬಲೇಬೇಕು. ಹೌದು, ನಾವು ಪ್ರತಿದಿನ ಇಯರ್‌ಫೋನ್, ಸ್ಪೀಕರ್ ಅಥವಾ ಲ್ಯಾಪ್‌ಟಾಪ್ ಕನೆಕ್ಟ್ ಮಾಡಲು ಬಳಸುವ ‘ಬ್ಲೂಟೂತ್’ (Bluetooth) ತಂತ್ರಜ್ಞಾನ ಆಧುನಿಕ ಜಗತ್ತಿನ ಬಹುದೊಡ್ಡ ಆವಿಷ್ಕಾರ. ಈ ಬಹುಪಯೋಗಿ ತಂತ್ರಜ್ಞಾನದ ಹೆಸರಿನ ಹಿಂದಿರುವ ಇತಿಹಾಸ ಸುಮಾರು ಸಾವಿರ ವರ್ಷಗಳಷ್ಟು ಹಳೆಯದು.
ಈ ತಂತ್ರಜ್ಞಾನಕ್ಕೆ ಈ ಹೆಸರು ಬಂದಿದ್ದು ಹೇಗೆಂದರೆ, 1996 ರ ಸುಮಾರಿಗೆ ಇಂಟೆಲ್, ಎರಿಕ್ಸನ್ ಮತ್ತು ನೋಕಿಯಾ ಕಂಪನಿಗಳು ವಿಭಿನ್ನ ಸಾಧನಗಳನ್ನು ವೈರ್‌ಲೆಸ್ ಆಗಿ ಜೋಡಿಸುವ ಹೊಸ ತಂತ್ರಜ್ಞಾನವನ್ನು ರೂಪಿಸುತ್ತಿದ್ದವು. ಆ ತಂಡದಲ್ಲಿದ್ದ ಇಂಟೆಲ್ ಎಂಜಿನಿಯರ್ ಜಿಮ್ ಕಾರ್ಡಾಕ್ ಅವರು ‘ಬ್ಲೂಟೂತ್’ ಎಂಬ ಹೆಸರನ್ನು ಪ್ರಸ್ತಾಪಿಸಿದರು.
ಬ್ಲೂಟೂತ್ ಎಂಬುದು ಒಬ್ಬ ವೈಕಿಂಗ್ ರಾಜನ ಅಡ್ಡಹೆಸರು. 10ನೇ ಶತಮಾನದಲ್ಲಿ ಡೆನ್ಮಾರ್ಕ್ ಮತ್ತು ನಾರ್ವೆಯನ್ನು ಆಳಿದ ಪ್ರಸಿದ್ಧ ವೈಕಿಂಗ್ ರಾಜನ ಹೆಸರು ಹರಾಲ್ಡ್ ಗಾರ್ಮ್ಸನ್. ಈತನ ಬಾಯಲ್ಲಿ ರೋಗಗ್ರಸ್ತವಾಗಿ, ನೀಲಿ ಬಣ್ಣಕ್ಕೆ ತಿರುಗಿದ್ದ ಹುಳುಕು ಹಲ್ಲಿತ್ತು. ಹಾಗಾಗಿ ಜನರು ಆತನನ್ನು ಹಳೆಯ ನಾರ್ಸ್ ಭಾಷೆಯಲ್ಲಿ ‘ಬ್ಲಾಟನ್’ (ಅಂದರೆ ‘ಬ್ಲೂಟೂತ್’) ಎಂದು ಕರೆಯುತ್ತಿದ್ದರು.
ಇಂಟೆಲ್ ಎಂಜಿನಿಯರ್ ಜಿಮ್ ಕಾರ್ಡಾಕ್ ಅವರು ಈ ಸಂಶೋಧನೆಯ ಸಮಯದಲ್ಲಿ ವೈಕಿಂಗ್ ಇತಿಹಾಸದ ಪುಸ್ತಕವನ್ನು ಓದುತ್ತಿದ್ದರು. ಡೆನ್ಮಾರ್ಕ್ ಮತ್ತು ನಾರ್ವೆ ದೇಶಗಳನ್ನು ಒಗ್ಗೂಡಿಸಿದ ರಾಜ ಹರಾಲ್ಡ್ ಬ್ಲೂಟೂತ್‌ನ ಕಥೆ ಅವರಿಗೆ ಸ್ಫೂರ್ತಿ ನೀಡಿತು. ವಿಭಿನ್ನ ದೇಶಗಳನ್ನು ಒಗ್ಗೂಡಿಸಿದ ರಾಜನಂತೆಯೇ, ವಿಭಿನ್ನ ಎಲೆಕ್ಟ್ರಾನಿಕ್ ಸಾಧನಗಳನ್ನು ಒಂದಕ್ಕೊಂದು ಬೆಸೆಯುವ ಈ ಹೊಸ ತಂತ್ರಜ್ಞಾನಕ್ಕೆ ಅವರು ತಾತ್ಕಾಲಿಕವಾಗಿ ‘ಬ್ಲೂಟೂತ್’ ಎಂದು ಹೆಸರಿಟ್ಟರು. ಮುಂದೆ ಅದೇ ಹೆಸರು ಜಗತ್ಪ್ರಸಿದ್ಧವಾಯಿತು.
ಬ್ಲೂಟೂತ್‌ನ ಲೋಗೋ ಸಹ ಕೇವಲ ಒಂದು ಜ್ಯಾಮಿತೀಯ ವಿನ್ಯಾಸವಲ್ಲ. ಅದು ಹರಾಲ್ಡ್ ಬ್ಲೂಟೂತ್‌ನ ಹೆಸರಿನ ಮೊದಲ ಅಕ್ಷರಗಳಾದ ‘H’ ಮತ್ತು ‘B’ ಯನ್ನು ಪ್ರತಿನಿಧಿಸುವ ಪ್ರಾಚೀನ ನಾರ್ಸ್ ರೂನ್ (Norse Rune) ಚಿಹ್ನೆಗಳ ಸಂಯೋಜನೆಯಾಗಿದೆ. ಸಾವಿರ ವರ್ಷಗಳ ಹಿಂದೆ ಯುರೋಪನ್ನು ಒಗ್ಗೂಡಿಸಿದ ಕಾರಣಕ್ಕೆ ಹೆಸರುವಾಸಿಯಾಗಿದ್ದ ವೈಕಿಂಗ್ ರಾಜನ ಹೆಸರು, ಇಂದು ಇಡೀ ಡಿಜಿಟಲ್ ಜಗತ್ತನ್ನೇ ಬೆಸೆಯುತ್ತಿದೆ. ಬ್ಲೂಟೂತ್ ಬಳಸುವ ಎಷ್ಟೋ ಜನಕ್ಕೆ ಈ ಮಾಹಿತಿ ತಿಳಿದಿಲ್ಲ. ಹೊಸ ಹೊಸ ತಂತ್ರಜ್ಞಾನ ಹಾಗೂ ಆವಿಷ್ಕಾರಗಳು ನಡೆಯುವ ಹಾದಿಯಲ್ಲಿ ಇಂತಹ ಸಾಕಷ್ಟು ಕುತೂಹಲಕಾರಿ ಕಥೆಗಳು ಅಡಗಿರುತ್ತವೆ ಅಲ್ಲವೇ?





