ಪಂಜಾಬ್‌ನ ಹಕ್ಕುಗಳು, ನ್ಯಾಯ ಮತ್ತು ಭವಿಷ್ಯದ ಕುರಿತು ಧ್ವನಿ ಎತ್ತುವ ಉದ್ದೇಶದಿಂದ ನವೆಂಬರ್ 4ರಂದು ಸಂಗ್‌ರೂರ್‌ನಲ್ಲಿ ‘ಇನ್ಸಾಫ್ ರ‍್ಯಾಲಿ’ ಆಯೋಜಿಸಲಾಗಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದು, ಪಂಜಾಬ್‌ನ ವಿವಿಧ ಭಾಗಗಳಿಂದ ಒಂದು ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಪರ್ಗಟ್ ಸಿಂಗ್ ತಿಳಿಸಿದ್ದಾರೆ.
ಚಂಡೀಗಢದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ನಾಲ್ಕೂವರೆ ವರ್ಷಗಳಿಂದ ರೈತರು, ಯುವಜನರು ಹಾಗೂ ಸಾಮಾನ್ಯ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸರ್ಕಾರ ಮೌನ ವಹಿಸಿದೆ ಎಂದು ಆರೋಪಿಸಿದ ಅವರು, ಕಾನೂನು ಸುವ್ಯವಸ್ಥೆ, ಮಾದಕವಸ್ತು ಹಾವಳಿ, ನಿರುದ್ಯೋಗ, ಭತ್ತ ಖರೀದಿ, ಧಾರ್ಮಿಕ ಗ್ರಂಥಗಳ ಅವಮಾನ ಪ್ರಕರಣಗಳು ಹಾಗೂ ಪಂಜಾಬ್‌ನ ಹಕ್ಕುಗಳ ವಿಚಾರಗಳನ್ನು ಕಾಂಗ್ರೆಸ್ ಪ್ರಬಲವಾಗಿ ಪ್ರಸ್ತಾಪಿಸಲಿದೆ. ಪಂಜಾಬ್‌ನಲ್ಲಿ ಪರಿಸ್ಥಿತಿ ಆತಂಕಕಾರಿಯಾಗುತ್ತಿದೆ. ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ಜನರ ಅಹವಾಲುಗಳಿಗೆ ಸ್ಪಂದಿಸುವ ಬದಲು ಆಡಳಿತ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸ ಕುಸಿಯುವಂತೆ ಮಾಡುತ್ತಿದೆ ಎಂದು ಆರೋಪಿಸಿದರು.
ಆಮ್ ಆದ್ಮಿ ಪಕ್ಷದ ಸರ್ಕಾರ ಪಂಜಾಬ್ ಅನ್ನು ‘ಪೊಲೀಸ್ ರಾಜ್ಯ’ವನ್ನಾಗಿ ಪರಿವರ್ತಿಸುತ್ತಿದೆ ಎಂದು ವಿಧಾನಸಭೆಯಲ್ಲೇ ಎಚ್ಚರಿಕೆ ನೀಡಲಾಗಿತ್ತು. ಪೊಲೀಸ್ ಇಲಾಖೆ ಮತ್ತು ನಾಗರಿಕ ಆಡಳಿತದ ಮನೋಬಲ ಕುಸಿದಿದ್ದು, ಪೊಲೀಸರ ಮೇಲಿನ ಜನರ ವಿಶ್ವಾಸವೂ ದುರ್ಬಲವಾಗುತ್ತಿದೆ. ರಾಷ್ಟ್ರಮಟ್ಟದಲ್ಲಿ ಬಿಜೆಪಿ ಪ್ರಜಾಪ್ರಭುತ್ವ ಸಂಸ್ಥೆಗಳ ಸಹಜ ಕಾರ್ಯನಿರ್ವಹಣೆಯನ್ನು ದುರ್ಬಲಗೊಳಿಸಿದೆ. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷವೂ ಇದೇ ರೀತಿಯ ನಡೆ ಅನುಸರಿಸುತ್ತಿದೆ ಎಂದು ಟೀಕಿಸಿದರು.
ಪಂಜಾಬ್‌ನ ರೈತರು ತಮ್ಮ ಭತ್ತದ ಬೆಳೆಯನ್ನು ಮಾರಾಟ ಮಾಡಲು ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ಸರ್ಕಾರ ಇದಕ್ಕೆ ಸ್ಪಷ್ಟ ಪರಿಹಾರ ನೀಡಿಲ್ಲ . ಇತರ ರಾಜ್ಯಗಳಲ್ಲಿ ಉತ್ತಮ ಬೆಲೆಯ ಕುರಿತು ಚರ್ಚೆಯಾಗುತ್ತಿರುವಾಗ ಪಂಜಾಬ್‌ನ ರೈತರಿಗೆ ನ್ಯಾಯಯುತ ಬೆಲೆ ಮತ್ತು ಸಕಾಲಿಕ ಖರೀದಿಯ ಭರವಸೆ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು. ರೈತರಿಗೆ ಕೇವಲ ಭರವಸೆಗಳು ಸಾಲದು. ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಸುಗಮ ಖರೀದಿ ವ್ಯವಸ್ಥೆ ಮತ್ತು ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬೇಕು. ಸರ್ಕಾರದ ಮೌನ ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಎಂದು ಅವರು ಹೇಳಿದರು.
ಪಂಜಾಬ್‌ನ ಜನರು ಧಾರ್ಮಿಕ ಗ್ರಂಥಗಳ ಅವಮಾನ ಪ್ರಕರಣಗಳಲ್ಲಿ ನ್ಯಾಯ ದೊರೆಯಲಿದೆ ಎಂದು ನಿರೀಕ್ಷಿಸಿದ್ದರು. ಆದರೆ ಪ್ರಕರಣಗಳನ್ನು ರಾಜ್ಯದ ಹೊರಗೆ ವರ್ಗಾಯಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದರು.
ಅಣೆಕಟ್ಟು ಸುರಕ್ಷತಾ ಕಾಯ್ದೆಯ ಸೆಕ್ಷನ್ 79(1) ಮತ್ತು ರಾಜಸ್ಥಾನಕ್ಕೆ ನೀರು ಪೂರೈಕೆ ಮಾಡುವ ವಿಚಾರದಲ್ಲಿ ಪಂಜಾಬ್‌ನ ಹಿತಾಸಕ್ತಿಗಳ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು. ನದಿ ನೀರಿನ ವಿವಾದಗಳಿಗೆ ಸಂಬಂಧಿಸಿದಂತೆ 78, 79 ಮತ್ತು 80ನೇ ವಿಧಿಗಳ ಅಡಿಯಲ್ಲಿ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ಹೀಗಾಗಿ ರಾಜ್ಯದ ನೀರಿನ ಸಂಪನ್ಮೂಲ ಮತ್ತು ಹಕ್ಕುಗಳನ್ನು ರಕ್ಷಿಸಲು ಸರ್ಕಾರ ಗಂಭೀರವಾಗಿ ತನ್ನ ವಾದ ಮಂಡಿಸಬೇಕು ಎಂದು ಆಗ್ರಹಿಸಿದರು.
ಪರ್ಮಿಂದರ್ ಸಿಂಗ್ ಝೋಟಾ ಮತ್ತು ಗುಲ್ಜಾರ್ ಸಿಂಗ್ ಪ್ರಕರಣಗಳನ್ನು ಉಲ್ಲೇಖಿಸಿದ ಪರ್ಗಟ್ ಸಿಂಗ್, ಇತ್ತೀಚಿನ ಘಟನೆಗಳಲ್ಲಿನ ಪೊಲೀಸ್ ತನಿಖೆ ಹಾಗೂ ನಿರ್ಧಾರಗಳ ಕುರಿತು ಉದ್ಭವಿಸಿರುವ ಪ್ರಶ್ನೆಗಳಿಗೆ ಪಾರದರ್ಶಕವಾಗಿ ಉತ್ತರಿಸಬೇಕು. ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ತನಿಖೆಗೆ ವರ್ಷಗಳೇ ಬೇಕಾಯಿತು. ಅಂತಹ ಸಂದರ್ಭದಲ್ಲಿ ಮತ್ತೊಂದು ಘಟನೆಯಲ್ಲಿ ಕೇವಲ ಎರಡು ಗಂಟೆಗಳಲ್ಲಿ ಹತ್ಯೆಯ ತೀರ್ಮಾನಕ್ಕೆ ಬಂದಿರುವುದರ ಆಧಾರವೇನು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಪ್ರತಿಯೊಂದು ಪ್ರಕರಣದಲ್ಲೂ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ದೃಢವಾದ ಸಾಕ್ಷ್ಯಗಳ ಆಧಾರದಲ್ಲಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು. ಪೊಲೀಸರು ಜನರಲ್ಲಿ ವಿಶ್ವಾಸ ಮೂಡಿಸಬೇಕೇ ಹೊರತು ಅನುಮಾನ ಹೆಚ್ಚಿಸಬಾರದು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಪಂಜಾಬ್‌ಗೆ ಸತತ 5ನೇ ಸೋಲು: ಕೋಚ್ ರಿಕಿ ಪಾಂಟಿಂಗ್‌ಗೆ ಪ್ರೀತಿ ಜಿಂಟಾ ತರಾಟೆ?
ಮಾದರಿ ನೀತಿ ಸಂಹಿತೆ ಶೀಘ್ರದಲ್ಲೇ ಜಾರಿಗೆ ಬರುವ ಸಾಧ್ಯತೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನೀತಿ ಸಂಹಿತೆ ಜಾರಿಗೊಳಿಸುವುದರಿಂದ ಮಾತ್ರ ಆಡಳಿತ ವ್ಯವಸ್ಥೆಯ ಸಮಸ್ಯೆಗಳು ಬಗೆಹರಿಯುವುದಿಲ್ಲ. ಪೊಲೀಸ್ ಮತ್ತು ಆಡಳಿತ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಮರುಸ್ಥಾಪಿಸುವುದು, ಹೊಣೆಗಾರಿಕೆಯನ್ನು ನಿಗದಿಪಡಿಸುವುದು ಹಾಗೂ ನಿಯಮಾನುಸಾರ ಆಡಳಿತ ನಡೆಯುವಂತೆ ಮಾಡುವುದು ಮುಖ್ಯವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಂಜಾಬ್‌ನಲ್ಲಿ ಪ್ರತಿಯೊಂದು ಕಾರ್ಯವೂ ವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಳ್ಳಲಾಗುವುದು. ಯಾರಿಗೂ ಮನಬಂದಂತೆ ವರ್ತಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಪಂಜಾಬ್‌ನ ಜನರು ಒಗ್ಗೂಡಿ ರಾಜ್ಯದ ಹಿತ ಕಾಪಾಡಲು ಮುಂದಾಗಬೇಕು. ನವೆಂಬರ್ 4ರಂದು ಸಂಗ್‌ರೂರ್‌ನಲ್ಲಿ ನಡೆಯಲಿರುವ ‘ಇನ್ಸಾಫ್ ರ‍್ಯಾಲಿ’ ಕೇವಲ ರಾಜಕೀಯ ಕಾರ್ಯಕ್ರಮವಲ್ಲ; ಅದು ಪಂಜಾಬ್‌ನ ಹಕ್ಕುಗಳು, ರೈತರ ಸಂಕಷ್ಟ, ಯುವಜನರ ಭವಿಷ್ಯ ಮತ್ತು ನ್ಯಾಯಕ್ಕಾಗಿ ಜನರು ಎತ್ತುವ ಧ್ವನಿಯಾಗಲಿದೆ ಎಂದು ಅವರು ಹೇಳಿದರು.




